ಔಷಧೀಯ ಗುಣವುಳ್ಳ ಮಲೆನಾಡು ಗಿಡ್ಡ ತಳಿಗಳ ರಕ್ಷಣೆಯಾಗಬೇಕು; ಶಾಸಕಿ ಭಾಗೀರಥಿ ಮುರುಳ್ಯ
ರಾಮಕುಂಜ: ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ದ.ಕ., ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಕೊೖಲ ಹಾಗೂ ಪಶು ಆಸ್ಪತ್ರೆ ಕಡಬ ಇದರ ಆಶ್ರಯದಲ್ಲಿ 2024-25ನೇ ಸಾಲಿನ ಅಮೃತ ಸಿರಿ ಯೋಜನೆಯಡಿಯಲ್ಲಿನ ಫಲಾನುಭವಿಗಳಿಗೆ ಮಲೆನಾಡು ಗಿಡ್ಡ ತಳಿಯ ಹೆಣ್ಣು ಕರುಗಳ ವಿತರಣೆ ಕೊೖಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ವಠಾರದಲ್ಲಿ ಜು.22ರಂದು ನಡೆಯಿತು.

ಕರು ವಿತರಿಸಿ ಮಾತನಾಡಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು, ಹಿಂದೆ ಮಲೆನಾಡು ಗಿಡ್ಡ ತಳಿಯ ದನಗಳ ಶುದ್ಧವಾದ ಹಾಲಿನಿಂದ ಆರೋಗ್ಯ ಸಮತೋಲನದಲ್ಲಿತ್ತು. ಇದೀಗ ರಾಸಾಯನಿಕ ಪಶು ಆಹಾರ ಬಳಕೆಯಿಂದ ದನದ ಹಾಲು ಕೂಡಾ ರಾಸಾಯನಿಕ ಯುಕ್ತವಾಗಿದೆ. ಇಂತಹ ಕಾಲಘಟ್ಟದಲ್ಲಿ ನಾವು ಮಲೆನಾಡು ಗಿಡ್ಡ ತಳಿಗಳನ್ನು ರಕ್ಷಣೆ ಮಾಡುವ ಅವಶ್ಯಕತೆಯಿದೆ ಎಂದರು. ಇಲ್ಲಿಂದ ದನ ತೆಗೆದುಕೊಂಡು ಹೋಗುವವರು ಅವರ ಮನೆಯಲ್ಲಿ ದನ ಕರು ಹಾಕಿದರೆ ಆ ಕರುವನ್ನು ಇಲ್ಲಿ ತಂದು ಕೊಡಬೇಕು, ಅಪೇಕ್ಷಿಸುವ ಎಲ್ಲಾ ರೈತರು ಕೂಡಾ ಮಲೆನಾಡು ಗಿಡ್ಡ ಸಾಕುವಂತಾಗಬೇಕು. ಆರೋಗ್ಯ ಪೂರ್ಣ ಜೀವನಕ್ಕೆ ಮಲೆನಾಡು ಗಿಡ್ಡ ದನಗಳನ್ನು ಉಳಿಸಿ ಬೆಳೆಸುವುದು ನಮ್ಮ ಧರ್ಮ, ಅದರ ಮಹತ್ವವನ್ನು ಇನ್ನೊಬ್ಬರಿಗೆ ಹೇಳಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದರು.
ಕಡಬ ತಾಲೂಕು ಮುಖ್ಯ ಪಶುವೈದ್ಯಾದಿಕಾರಿ ಡಾ. ಅಜಿತ್ ಅವರು ಯೋಜನೆಯ ಮಾಹಿತಿ ನೀಡಿದರು. ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಕೊೖಲ ಗ್ರಾ.ಪಂ.ಮಾಜಿ ಅಧ್ಯಕ್ಷ ಹರ್ಷಿತ್ ಕುಮಾರ್, ಸಾಮಾಜಿಕ ಮುಂದಾಳು ಲಕ್ಷ್ಮೀನಾರಾಯಣ ರಾವ್ ಆತೂರು ಉಪಸ್ಥಿತರಿದ್ದರು. ಕೊೖಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಉಪನಿರ್ದೇಶಕ ಡಾ. ಪ್ರಸನ್ನ ಕುಮಾರ್ ಹೆಬ್ಬಾರ್ ಸ್ವಾಗತಿಸಿ ನಿರೂಪಿಸಿದರು. ಸುಬ್ರಹ್ಮಣ್ಯದ ಮುಖ್ಯ ಪಶುವೈದ್ಯಾಧಿಕಾರಿ ಡಾ. ಮಲ್ಲಿಕಾ ವಂದಿಸಿದರು. ಕೊೖಲ ಜಾನುವಾರು ಸಂವರ್ಧನಾ ಕೇಂದ್ರದ ಸಿಬ್ಬಂದಿ ಸುನೀತ ಪ್ರಾರ್ಥಿಸಿದರು.
ಶಾಸಕರಿಂದ ಗೂಪೂಜೆ;
ಫಲಾನುಭವಿಗಳಿಗೆ ಹೆಣ್ಣು ಕರುಗಳನ್ನು ವಿತರಣೆಗೂ ಮುನ್ನ ಶಾಸಕರು ಗೋಪೂಜೆ ನೆರವೇರಿಸಿದರು. ಬಳಿಕ 11 ಮಂದಿ ಫಲಾನುಭವಿಗಳಿಗೆ ಹೆಣ್ಣು ಕರು ವಿತರಣೆ ಮಾಡಲಾಯಿತು.