ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯವನ್ನು ಧಾರ್ಮಿಕ ಪ್ರವಾಸೋದ್ಯಮ ಕ್ಷೇತ್ರವನ್ನಾಗಿಸುವ 350 ಕೋ. ರೂ. ಮಹತ್ವಾಕಾಂಕ್ಷಿ ಯೋಜನೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ಹಾಕಿಕೊಂಡಿದ್ದು, ಈ ಯೋಜನೆಗೆ ಸಂಬಂಧಿಸಿ ರಾಜ್ಯ ನೀರಾವರಿ ಇಲಾಖೆಯ ಎಂಜಿನಿಯರ್ ಗಳ ಜೊತೆ ಶಾಸಕರು ಸಮಾಲೋಚನೆ ನಡೆಸಿದರು.
ಶ್ರೀ ಸಹಸ್ರಲಿಂಗೇಶ್ವರ ದೇವಾಲಯಕ್ಕೆ ಆಗಮಿಸಿದ ನೀರಾವರಿ ಇಲಾಖಾ ಎಂಜಿನಿಯರ್ ಗಳ ತಂಡ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿ ಸ್ಥಳ ಪರಿಶೀಲನೆ ನಡೆಸಿ ಶಾಸಕರೊಂದಿಗೆ ವಿಚಾರ ವಿಮರ್ಷೆ ನಡೆಸಿದರು. ಬಿಳಿಯೂರು ಅಣೆಕಟ್ಟಿನಿಂದಾಗಿ ಭಕ್ತಾದಿಗಳಿಗೆ ನದಿ ಗರ್ಭದಲ್ಲಿರುವ ಉದ್ಭವ ಲಿಂಗಕ್ಕೆ ಪೂಜೆ ಸಲ್ಲಿಸುವ ಅವಕಾಶ ಕೈ ತಪ್ಪಿ ಹೋಗಿರುವ ಕಾರಣ ಹಾಗೂ ನೂತನ ಯೋಜನೆಯಿಂದಾಗಿ ಇನ್ನೊಂದು ಅಣೆಕಟ್ಟು ನಿರ್ಮಾಣವಾಗಲಿದ್ದು, ಇನ್ನಷ್ಟು ಹೆಚ್ಚು ಪ್ರಮಾಣದ ಹಿನ್ನೀರು ಸಂಗ್ರಹಗೊಳ್ಳಲಿರುವುದರಿಂದ ಉದ್ಭವ ಲಿಂಗಕ್ಕೆ ಕೂಡಲಸಂಗಮದಲ್ಲಿನ ವ್ಯವಸ್ಥೆಯಂತೆ ಸರ್ವ ಋತು ಪೂಜೆ ಸಲ್ಲಿಸಲು ಕ್ರಮ , ನದಿಯಲ್ಲಿ ಬೋಟಿಂಗ್ , ಲೈಟಿಂಗ್ , ಕಾರಂಜಿ ವ್ಯವಸ್ಥೆ, ದೇವಾಲಯದ ಸುತ್ತಮುತ್ತಲ ಅನಗತ್ಯ ರಚನೆಗಳನ್ನು ತೆರವುಗೊಳಿಸಿ ಯೋಜನಾಬದ್ದ ವ್ಯವಸ್ಥೆಗಳ ಅನುಷ್ಠಾನ, ಸ್ವಾಗತ ಗೋಪುರ ರಚನೆ, ನದಿ ಭಾಗದಲ್ಲಿ ದೇವಾಲಯದಿಂದ ನೇತ್ರಾವತಿ ಸೇತುವೆ ವೆರೆಗೆ ತಡೆಗೋಡೆ ಇದರ ಸಂಬಂಧಿತ ಸ್ಥಳದಲ್ಲಿ ರಸ್ತೆ ನಿರ್ಮಾಣ , ಯಾತ್ರಿ ನಿವಾಸ, ಸಿಬ್ಬಂದಿಯ ವಸತಿ ಗೃಹ, ಪಿಂಡಪ್ರದಾನದಂತಹ ಅಪರಕ್ರಿಯಾದಿಗಳನ್ನು ನಡೆಸಲು ಸುವ್ಯವಸ್ಥಿತ ವ್ಯವಸ್ಥೆ ಮೊದಲಾದವುಗಳು ಅನುಷ್ಠಾನಗೊಳ್ಳಲಿರುವ ಯೋಜನೆಯಲ್ಲಿ ಒಳಗೊಂಡಿದೆ ಎಂದರು.
ಯೋಜನೆಗೆ ಸಂಬಂಧಿಸಿ ಇಲಾಖಾಧಿಕಾರಿಗಳು ಯೋಜನಾ ವರದಿಯನ್ನು ಸಿದ್ದಪಡಿಸಲು ಈ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಸದ್ರಿ ಯೋಜನ ವರದಿಯನ್ನು ಸರಕಾರಕ್ಕೆ ಸಲ್ಲಿಕೆ ಮಾಡಿ, ಸರಕಾರದಿಂದ ಅನುಮೋದನೆ ಪಡೆದ ಬಳಿಕ, ಆರ್ಥಿಕ ಮಂಜೂರಾತಿಯ ವ್ಯವಸ್ಥೆಗಳು ನಡೆದು , ಯೋಜನೆಯು ಅತೀ ಶೀಘ್ರದಲ್ಲಿ ಪ್ರಾರಂಭಗೊಳ್ಳುವಂತಾಗಬೇಕೆಂಬ ಬಯಕೆ ಹೊಂದಿರುವುದಾಗಿ ಶಾಸಕ ಅಶೋಕ್ ಕುಮಾರ್ ರೈ ಈ ಸಂದರ್ಭ ತಿಳಿಸಿದರು.
ವೇದಿಕೆಯಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಜ್ಯ ಜಲಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್ ಆನಂದ ಎಚ್. ಎಸ್., ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ್, ಸುರೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಮೋದ್ ರವರನ್ನು ಒಳಗೊಂಡ ತಜ್ಞರ ತಂಡ ವಿಚಾರ ವಿಮರ್ಷೆ ನಡೆಸಿತು. ಕಾರ್ಯಕ್ರಮದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಎ. ಕೃಷ್ಣರಾವ್, ದೇವಿದಾಸ ರೈ, ಗೋಪಾಲಕೃಷ್ಣ ರೈ, ವೆಂಕಪ್ಪ ಪೂಜಾರಿ, ಪ್ರಮುಖರಾದ ಡಾ. ರಾಜಾರಾಮ್ ಕೆ.ಬಿ., ರೂಪೇಶ್ ರೈ ಅಲಿಮಾರ್, ಮುರಳೀಧರ ರೈ ಮಠಂತಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.