ತುಳುನಾಡಿನ ಸಾಂಸ್ಕೃತಿಕ ಮತ್ತು ಆರೋಗ್ಯಪೂರ್ಣ ಆಚರಣೆ
ತುಳುನಾಡು ಎಂದ ತಕ್ಷಣ ನೆನಪಾಗುವುದೇ ಇಲ್ಲಿನ ವಿಶಿಷ್ಟವಾದ ಆಚರಣೆಗಳು. ಕರಾವಳಿಗರು ತಮ್ಮ ಜೀವನಶೈಲಿ ಹಾಗೂ ಆರೋಗ್ಯಕರವಾದ ಆಹಾರ ಕ್ರಮವನ್ನು ಅಳವಡಿಸಿಕೊಂಡವರು. ಹೀಗಾಗಿ ಇಲ್ಲಿನ ಜನರ ಒಂದೊಂದು ಆಚರಣೆಯು ಅರ್ಥ ಪೂರ್ಣವಾಗಿದೆ. ಈ ತುಳುನಾಡಿನಲ್ಲಿ ‘ಆಟಿ ಅಮಾವಾಸ್ಯೆ’ ವಿಶಿಷ್ಟವಾಗಿ ಆಚರಿಸಲಾಗುತ್ತದೆ.

‘ಆಟಿ ಅಮಾವಾಸ್ಯೆ’ (Aati Amavasye) ಈ ದಿನ ಕೇವಲ ಪಿತೃಕಾರ್ಯಗಳಿಗೆ ಸೀಮಿತವಾಗಿಲ್ಲ, ಬದಲಾಗಿ ವಿಶಿಷ್ಟ ಆರೋಗ್ಯಪೂರ್ಣ ಆಚರಣೆಗಳು ಮತ್ತು ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧವನ್ನು ಬಿಂಬಿಸುತ್ತದೆ. ಮಳೆಗಾಲದ ತಿಂಗಳಾದ ‘ಆಟಿ’ಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಳ್ಳುವ ಸಂಕೇತವಾಗಿರುವ ಈ ಅಮಾವಾಸ್ಯೆಯು, ತುಳುನಾಡಿನ ಜನಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತುಹೋಗಿದೆ.
(ಆಟಿ ಅಮಾಸೆ ಆಟಿ ತಿಂಗೊಲುಡ್ ಬರ್ಪಿ ಆಮಾಸೆ. ಉಂದು ತುಳುವ ಜನೊಕುಲೆಗ್ ವಿಸೇಸವಾಯಿನ ದಿನ. ಈ ದಿನತ್ತಾನಿ ತುಳುವೆರ್ ಪಾಲೆ ಮರ ಪನ್ಪಿ ಮರತ್ತ ಕೆತ್ತೆ ಕೆತ್ತ್‌ದ್ ಕಷಾಯ/ಮರ್ದ್ ಮಲ್ತ್‌ದ್ ಪರ್ಪೆರ್)
ಆಟಿ ಅಮಾವಾಸ್ಯೆ ದಿನ ಪಾಲೆ ಮರದ ಕೆತ್ತೆಯ ಕಷಾಯ ಸೇವಿಸುವುದು ಎಲ್ಲರಿಗೂ ಗೊತ್ತಿದೆ. ಕಷಾಯ ಕುಡಿದ ಬಳಿಕ ತೆಂಗಿನಕಾಯಿ-ಮೆಂತೆ ಗಂಜಿಯನ್ನು ಸೇವಿಸುವುದು ಕ್ರಮ. ಸಾಮಾನ್ಯವಾಗಿ ಆಷಾಢ ಅಮಾವಾಸ್ಯೆ, ಭೀಮನ ಅಮಾವಾಸ್ಯೆ, ಅಥವಾ ಅಳಿಯನ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಆದರೆ, ‘ಆಟಿ ಅಮಾವಾಸ್ಯೆ’ ಎಂಬ ಹೆಸರು ವಿಶೇಷವಾಗಿ ತುಳುನಾಡಿನಲ್ಲಿ ಪ್ರಚಲಿತದಲ್ಲಿದೆ.
ಆಷಾಢ ಮಾಸವನ್ನು ತುಳುನಾಡಿನಲ್ಲಿ ‘ಆಟಿ ತಿಂಗಳು’ ಎಂದು ಕರೆಯಲಾಗುತ್ತದೆ. ಈ ತಿಂಗಳು ಭಾರೀ ಮಳೆ, ಕೃಷಿ ಚಟುವಟಿಕೆಗಳ ವಿರಾಮ ಮತ್ತು ಕೀಟಗಳ ಹಾವಳಿಯಿಂದಾಗಿ ಜನರಿಗೆ ಕಷ್ಟದ ತಿಂಗಳೆಂದು ಪರಿಗಣಿಸಲಾಗುತ್ತದೆ. ಈ ಸವಾಲುಗಳ ನಡುವೆಯೂ ಆರೋಗ್ಯವನ್ನು ಕಾಪಾಡಿಕೊಳ್ಳುವ ಮತ್ತು ಸಾಂಪ್ರದಾಯಿಕ ಆಚರಣೆಗಳನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಆಟಿ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ.
ಪಾಲೆ ಮರದ ಕಷಾಯ
ಆಟಿ ಅಮಾವಾಸ್ಯೆಯ ಪ್ರಮುಖ ಆಚರಣೆಯೆಂದರೆ ‘ಪಾಲೆ ಮರ’ (ಸಪ್ತಪರ್ಣಿ ಅಥವಾ ಡೆವಿಲ್ ಟ್ರೀ – Alstonia scholaris) ದ ತೊಗಟೆಯಿಂದ ತಯಾರಿಸಿದ ಕಷಾಯವನ್ನು ಸೇವಿಸುವುದು. ಅಮಾವಾಸ್ಯೆಯ ಹಿಂದಿನ ದಿನವೇ ಪಾಲೆ ಮರವನ್ನು ಗುರುತಿಸಿ, ಮುಂಜಾನೆ ಸೂರ್ಯೋದಯಕ್ಕೂ ಮುನ್ನ, ಶುಚಿಯಾಗಿ ಹೋಗಿ ಅದರ ತೊಗಟೆಯನ್ನು ತರಲಾಗುತ್ತದೆ. ಈ ತೊಗಟೆಗೆ ಓಮ, ಬೆಳ್ಳುಳ್ಳಿ, ಅರಿಶಿನ, ಕರಿಮೆಣಸು ಸೇರಿಸಿ ಕಲ್ಲಿನಲ್ಲಿ ಅರೆದು ರಸ ತೆಗೆಯಲಾಗುತ್ತದೆ. ಈ ರಸಕ್ಕೆ ಕೆಂಡದಲ್ಲಿ ಕಾಯಿಸಿದ ಬಿಳಿಕಲ್ಲನ್ನು ಹಾಕಿ ಕಷಾಯ ತಯಾರಿಸಲಾಗುತ್ತದೆ. ಈ ಕಷಾಯವು ಹೆಚ್ಚು ಕುಡಿದರೆ ದೇಹಕ್ಕೆ ಉಷ್ಣವಾಗುವ ಕಾರಣ ದೇಹ ತಂಪಾಗಲೆಂದು ಮೆಂತ್ಯೆ ಗಂಜಿ ಸೇವಿಸುವ ಕ್ರಮವು ಇದೆ.
ಮೆಂತೆ ಗಂಜಿ ಮಾಡುವುದು ಹೀಗೆ…
ಒಂದು ಕಪ್ ಅಕ್ಕಿಗೆ ಒಂದು ಮುಷ್ಟಿಯಷ್ಟು ಮೆಂತೆ, ಅರ್ಧ ತೆಂಗಿನಕಾಯಿಯ ತುರಿ ಬೇಕಾಗುತ್ತದೆ. ರುಚಿಗೆ ತಕ್ಕಷ್ಟು ಬೆಲ್ಲ, ಒಂದು ಚಿಟಿಗೆ ಉಪ್ಪು ಇಷ್ಟೇ ಬೇಕಾಗುವುದು. ಪ್ರಾರಂಭದಲ್ಲಿ ಸುಮಾರು ಅರ್ಧ ತಾಸುಗಳ ಕಾಲ ಅಕ್ಕಿ ಹಾಗೂ ಮೆಂತೆಯನ್ನು ನೆನೆಸಿ ಇಡಬೇಕು. ಮೆಂತೆಯನ್ನು ಮಾತ್ರ ನೆನೆಸಿಟ್ಟರೂ ಸಾಕಾಗುತ್ತದೆ. ಬಳಿಕ ಅಕ್ಕಿ ಮತ್ತು ಮೆಂತೆಯನ್ನು ಚೆನ್ನಾಗಿ ತೊಳೆದು ಬೇಯಿಸಬೇಕು. ಬೇಯುವ ಸಂದರ್ಭದಲ್ಲಿ ರುಚಿಗೆ ತಕ್ಕಷ್ಟು ಬೆಲ್ಲ, ಒಂದು ಚಿಟಿಕೆಯಷ್ಟು ಉಪ್ಪು ಹಾಕಬೇಕಾಗುತ್ತದೆ. ಕೆಲವರು ಉಪ್ಪು ಹಾಕುವುದಿಲ್ಲ. ಮುಂದೆ ಅರ್ಧ ಸಣ್ಣಗೆ ತುರಿದ ಅರ್ಧ ತೆಂಗಿನಕಾಯಿಯನ್ನು ಹಾಕಬೇಕು. ಕೆಲವರು ತೆಂಗಿನ ತುರಿಯ ರಸವನ್ನೂ ಹಾಕುತ್ತಿದ್ದು, ತುರಿಯನ್ನು ನೇರವಾಗಿ ಹಾಕುವುದರಿಂದ ದಪ್ಪವಾಗಿ ಹೆಚ್ಚು ರುಚಿಯಾಗಿರುತ್ತದೆ. ಹೀಗೆ ಚೆನ್ನಾಗಿ ಬೆಂದ ಬಳಿಕ ತಾರಾಯಿ-ಮೆಂತೆ ಗಂಜಿ ಸಿದ್ಧವಾಗುತ್ತದೆ.