ಉಪ್ಪಿನಂಗಡಿ: ಆಯುರ್ವೇದ ಪಂಡಿತ ಕೆ.ಎಸ್. ಶೆಟ್ಟಿ ನಿಧನ

0

ಉಪ್ಪಿನಂಗಡಿ: ಪಾರಂಪಾರಿಕ ಆಯುರ್ವೇದ ವೈದ್ಯ ಪರಂಪರೆಯ ಶ್ರೇಷ್ಟತೆಯನ್ನು ಬೆಳಗಿದ, ಸ್ವಾತಂತ್ರ್ಯ ಹೋರಾಟದಲ್ಲಿ ಸೇವೆ ನೀಡಿದ, ಯಕ್ಷ ಪ್ರೇಮಿ ಇಲ್ಲಿನ ವಿಜಯ ವೈದ್ಯ ಶಾಲಾ ಮಾಲಕರಾಗಿದ್ದ, ಆಯುರ್ವೇದ ಪಂಡಿತ ಕೆ.ಎಸ್. ಶೆಟ್ಟಿ (96ವ) ಅಲ್ಪಕಾಲದ ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಜು.23ರಂದು ನಿಧನರಾದರು.


ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಕುಲ್ಲಂಜ ಎಂಬಲ್ಲಿ 1929ರ ಜು.26ರಂದು ಜನಿಸಿದ ಕೆ. ಶೀನಪ್ಪ ಶೆಟ್ಟಿಯವರು ತನ್ನ ಪ್ರೌಢಶಿಕ್ಷಣವನ್ನು ಪಡೆದ ಬಳಿಕ ತನ್ನ ಭಾವನವರಾದ ಪಂಡಿತ್ ವೆಂಕಪ್ಪ ರೈಯವರ ಮಾರ್ಗದರ್ಶನದಲ್ಲಿ ಗಿಡಮೂಲಿಕೆಗಳ ಔಷಧಿ ತಯಾರಿಕೆಯಲ್ಲಿ ನೈಪುಣ್ಯತೆಯನ್ನು ಪಡೆದು, ಬ್ರಿಟಿಷ್ ಸರಕಾರದ ಅವಧಿಯಲ್ಲಿ ನಡೆಸುತ್ತಿದ್ದ ಪಾರಂಪಾರಿಕ ವೈದ್ಯಶಾಸ್ತ್ರದ ವೈದ್ಯ ವಿಶಾರದಾ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕೆ.ಎಸ್. ಶೆಟ್ಟಿ ಎಂಬ ಹೆಸರಿನೊಂದಿಗೆ ಜನಾನುರಾಗಿದ್ದಲ್ಲದೆ, ಉಪ್ಪಿನಂಗಡಿಯಲ್ಲಿ ನೆಲೆಸಿ, ಇಲ್ಲಿ ವಿಜಯ ವೈದ್ಯ ಶಾಲಾ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಪಾರಂಪಾರಿಕ ಆಯುರ್ವೇದ ಔಷಧಿಯನ್ನು ನೀಡುವ ಮೂಲಕ ಊರಿನಲ್ಲೇಡೆ ಚಿರಪರಿಚಿತರಾಗಿದ್ದರು. ಈ ಮಣ್ಣಿನಲ್ಲಿ ದೈವದತ್ತವಾಗಿ ಲಭಿಸಿರುವ ಔಷಧೀಯ ಗುಣಗಳನ್ನು ಹೊಂದಿರುವ ಗಿಡಮೂಲಿಕೆಗಳ ಬಗ್ಗೆ ಅಮೂಲಾಗ್ರ ಮಾಹಿತಿಯನ್ನು ಹೊಂದಿ, ದ.ಕ ಜಿಲ್ಲೆಯ ಶಿರಾಡಿ ದಟ್ಟಾರಣ್ಯದವರೆಗೂ ಸಂಚರಿಸಿ ಗಿಡಮೂಲಿಕೆಗಳನ್ನು ಸಂಗ್ರಹಿಸಿ ಬಗೆ ಬಗೆಯ ಔಷಧಿಗಳನ್ನು ತಯಾರಿಸಿದ ಹೆಗ್ಗಳಿಕೆಯನ್ನು ಹೊಂದಿದ್ದ ಇವರು, ವೈದ್ಯ ಪರಂಪರೆಯ ಶ್ರೇಷ್ಠತೆಯನ್ನು ಬೆಳಗಿಸಿದ್ದರು.

ಅಂದು ತನ್ನ 13ನೇ ವಯಸ್ಸಿನಲ್ಲಿ ಅಂದರೆ 1942ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ದಾಸ್ಯದ ಸಂಕೇತವಾದ ಆಂಗ್ಲರ ವಸ್ತುಗಳನ್ನು ತ್ಯಜಿಸಬೇಕೆಂಬ ಗಾಂಧೀಜಿ ಕರೆಗೆ ಸ್ಪಂದಿಸಿದ ಇವರು ಕಗ್ಗತಲಿನ ರಾತ್ರಿಯಲ್ಲಿ ಬ್ರಿಟೀಷರ ವಿರುದ್ಧ ಗೋಡೆ ಬರಹವನ್ನು ಬರೆಯುತ್ತಾ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನ ಅಳಿಲ ಸೇವೆಯನ್ನು ಸಲ್ಲಿಸಿದ ಕೀರ್ತಿಯನ್ನು ಪಡೆದಿದ್ದರು.


ಯಕ್ಷಗಾನ ತಾಳಮದ್ದಳೆಯಲ್ಲಿ ಅತೀವ ಆಸಕ್ತಿಯನ್ನು ಹೊಂದಿದ್ದ ಅವರು, ಭೀಮ, ದುಶ್ಯಾಸನ, ಹಾಗೂ ಕಠಿಣ ಸ್ವರದ ರಾಕ್ಷಸರ ಪಾತ್ರಕ್ಕೆ ಜೀವ ತುಂಬಿಸುವ ಅರ್ಥಗಾರಿಕೆಯನ್ನು ಕರಗತ ಮಾಡಿಕೊಂಡಿದ್ದರು. ಯಕ್ಷಗಾನ ಕ್ಷೇತ್ರದ ನಂಟಿನಲ್ಲಿ ಭಾಗವತಿಕೆಯಲ್ಲೂ ಸ್ವ ಅಧ್ಯಾಯವನ್ನು ನಡೆಸಿ ಒಂದೆರಡು ಭಾಗವತಿಕೆಯನ್ನು ನಿರ್ವಹಿಸಿದ ಹಿರಿಮೆ ಇವರದ್ದಾಗಿತ್ತು. ಉಪ್ಪಿನಂಗಡಿ ಪರಿಸರದಲ್ಲಿ ಯಕ್ಷಗಾನ ಕಲೆ ಬೆಳೆಯಬೇಕೆಂಬ ಆಶಯದೊಂದಿಗೆ ಉಪ್ಪಿನಂಗಡಿಯ ಶ್ರೀ ಕಾಳಿಕಾಂಬಾ ಯಕ್ಷಗಾನ ಸಂಘದ ಸ್ಥಾಪಕರಲ್ಲಿ ಇವರು ಒಬ್ಬರಾಗಿದ್ದರು. ಅವರ 35ನೇ ವಯಸ್ಸಿನವರೆಗೆ ಯಕ್ಷಗಾನದ ಜೊತೆಗೆ ನಾಟಕ ರಂಗದಲ್ಲೂ ಮಹಾನ್ ಸಾಧಕರಾಗಿದ್ದು, ಹಾಸ್ಯ ನಟನೆಯಿಂದ ಜನ ಮೆಚ್ಚುಗೆ ಗಳಿಸಿದ್ದ ಇವರು, ಉಪ್ಪಿನಂಗಡಿಯ ಸರಕಾರಿ ಪ್ರೌಢ ಶಾಲೆಯನ್ನು ನಿರ್ಮಿಸುವುವಾಗ ಆರ್ಥಿಕ ಕೊರತೆ ಎದುರಾಗಿದ್ದ ಅಂದಿನ ದಿನಗಳಲ್ಲಿ ಜಿಲ್ಲೆಯ ಹಲವೆಡೆ ನಾಟಕ ಪ್ರದರ್ಶನಗಳನ್ನು ನೀಡಿ ಸಾವಿರಾರು ರೂಪಾಯಿ ಸಂಗ್ರಹಿಸುವಲ್ಲಿ ಮುಂಚೂಣಿ ನಾಯಕತ್ವ ವಹಿಸಿದ್ದರು.

ಉಪ್ಪಿನಂಗಡಿ ಸರಕಾರಿ ಮಾದರಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಸಂಸ್ಥಾಪನೆ ಮತ್ತದರ ಸಶಕ್ತ ಮುನ್ನಡೆಸುವಿಕೆಯಲ್ಲಿಯೂ ಮಹತ್ವದ ಪಾತ್ರವಹಿಸಿದ್ದರು. ಜನತೆಯಲ್ಲಿ ಧಾರ್ಮಿಕ ಭಾವನೆಯನ್ನು ಜಾಗೃತಗೊಳಿಸಿ ಸುಸಂಸ್ಕೃತ ಸಮಾಜ ನಿರ್ಮಾಣಕ್ಕಾಗಿ ಉಪ್ಪಿನಂಗಡಿಯಲ್ಲಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯನ್ನು ಸ್ಥಾಪಿಸಿದಲ್ಲದೆ, ಅದರ ಸ್ಥಾಪಕಾಧ್ಯಕ್ಷರಾಗಿ ಸುಧೀರ್ಘ ಸೇವೆ ಸಲ್ಲಿಸಿದ್ದರು. ಉಪ್ಪಿನಂಗಡಿ ಮಾದರಿ ಶಾಲಾ ಬಳಿಯ ಅಶ್ವಥ ಕಟ್ಟೆಯಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜಾ ಕಾರ್ಯದ ರೂವಾರಿಯೂ ಇವರಾಗಿದ್ದರು.


ಮೃತರು ಪುತ್ರ ಡಾ. ಯತೀಶ್ ಕುಮಾರ್ ಶೆಟ್ಟಿ, ಪಟ್ಲ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಕೆ. ಜಗದೀಶ ಶೆಟ್ಟಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.


ಇಂದು ಅಂತಿಮ ದರ್ಶನ
ಮೃತ ಕೆ.ಎಸ್. ಶೆಟ್ಟಿಯವರ ಪ್ರಾರ್ಥಿವ ಶರೀರವನ್ನು ಇಳಂತಿಲ ಗ್ರಾಮದ ಕುಂಟಾಲಕಟ್ಟೆ ಎಂಬಲ್ಲಿನ ತುಂಗಾ ನಿವಾಸಕ್ಕೆ ತಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 4.30ರ ತನಕ ಅಂತಿಮ ದರ್ಶನಕ್ಕೆ ಇಡಲಾಗುವುದು. ಬಳಿಕ ಮೃತರ ಅಂತಿಮ ವಿಧಿ-ವಿಧಾನಗಳನ್ನು ನಡೆಸಲಾಗುವುದು ಎಂದು ಮೃತರ ಪುತ್ರ ಕೆ. ಜಗದೀಶ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here