ಪುತ್ತೂರು: ನ್ಯಾಯಾಂಗ ವ್ಯವಸ್ಥೆ ಹೆಣ್ಣು ಮಕ್ಕಳನ್ನು ಕೈ ಬಿಟ್ಟ ಉದಾಹರಣೆ ಭಾರತದ ಇತಿಹಾಸದಲ್ಲಿ ಇಲ್ಲ. ಹಾಗಾಗಿ ವಿಶ್ವಕರ್ಮ ಸಮಾಜದ ಬಂಧುವಿನ ಪರವಾಗಿ ಯಾವುದೇ ಹಂತಕ್ಕೆ ಹೋದರೂ ಕೂಡಾ ಇಡಿ ವಿಶ್ವಕರ್ಮ ಸಮಾಜ ಸಂತ್ರಸ್ತೆಯ ಮತ್ತು ಕುಟುಂಬದ ಬೆನ್ನ ಹಿಂದೆ ನಿಲ್ಲಬೇಕೆಂದು ವಿಶ್ವಕರ್ಮ ಸಮಾಜದ ರಾಜ್ಯ ಅಧ್ಯಕ್ಷ ಕೆ ಪಿ ನಂಜುಂಡಿ ಹೇಳಿದರು.

ಮದುವೆಯಾಗುತ್ತೇನೆಂದು ನಂಬಿ ವಂಚನೆಗೊಳಪಟ್ಟ ಸಂತ್ರಸ್ತ ವಿದ್ಯಾರ್ಥಿನಿ ಮನೆಗೆಂದು ಜು.23ರಂದು ಅವರು ಪುತ್ತೂರಿಗೆ ಆಗಮಿಸಿದ್ದರು. ಆರಂಭದಲ್ಲಿ ಬೊಳುವಾರು ಶ್ರೀ ವಿಶ್ವಕರ್ಮ ಸಭಾಭವನಕ್ಕೆ ಆಗಮಿಸಿ ಅಲ್ಲಿ ಸಮಾಜ ಬಾಂಧವ ಸಂಘದಲ್ಲಿ ಮಾತನಾಡಿದರು. ಇಲ್ಲಿ ಯಾರು ಒಳ್ಳೆಯವರು ಕೆಟ್ಟವರೆಂದು ಈ ಸಂದರ್ಭದಲ್ಲಿ ಮಾಡುವುದು ಬೇಡ. ಹೆಣ್ಣು ಮಗುವಿಗೆ ಜೀವನ ಬೇಕು. ಆಕೆಗೆ ಗಂಡ ಬೇಕು. ಹುಟ್ಟಿದ ಗಂಡು ಮಗುವಿಗೆ ಅಪ್ಪ ಬೇಕು. ಇದನ್ನು ಜೋಡಿಸುವ ಕೆಲಸ ನಾವು ಮಾಡಬೇಕು. ಇಲ್ಲಿ ಜಾತಿ ಆಚಾರ ವಿಚಾರ ಮುಖ್ಯವಲ್ಲ. ಕೆಲವೊಮ್ಮೆ ಎಲ್ಲವನ್ನು ಮೀರಿ ಈ ಸನ್ನಿವೇಶ ಬರುತ್ತದೆ. ಆಗ ಮಾನವೀಯತೆ ಮುಖ್ಯ. ಸಮಾಜದಲ್ಲಿ ಇಂತಹ ಘಟನೆ ನಡೆದಾಗ ಒಗ್ಗಟ್ಟಾಗಬೇಕು. ಇವತ್ತು ಆ ಮನೆಗೆ ಕಷ್ಟ ಇರಬಹುದು. ಆದರೆ ಸಮಾಜಕ್ಕಿಲ್ಲ. ಯಾವುದೆ ಕಾರಣಕ್ಕೂ ಆ ಹೆಣ್ಣು ಮಗುವಿಗೆ ಭವಿಷ್ಯದಲ್ಲಿ ಕಷ್ಟ ಅನ್ನುವುದಕ್ಕೆ ಈ ಸಮಾಜ ಬಿಡುವುದಿಲ್ಲ. ಅದು ಎಂತಹ ಸನ್ನಿವೇಶ ಬಂದರೂ ಸರಿ, ನೀವೆಲ್ಲರೂ ಆ ಮನೆಗೆ ಬೆನ್ನೆಲುಬಾಗಿ ನಿಂತಿದ್ದೀರಿ. ರಕ್ಷಣೆ ಮಾಡಿದ್ದೀರಿ. ಈಗ ಕಾನೂನು ವ್ಯಾಪ್ತಿಯಲ್ಲಿ ಈ ವಿಷಯ ಸೇರಿದೆ. ಹಾಗಾಗಿ ನಾವು ಕಾನೂನು ಮೂಲಕ ಹೋರಾಟ ಮಾಡಬೇಕು. ಕಾನೂನು ಮೂಲಕವೇ ನಮಗೆ ನ್ಯಾಯ ಸಿಗಬೇಕು. ಕೋರ್ಟು ನಮ್ಮನ್ನು ಕೈ ಬಿಡುವುದಿಲ್ಲ.
ನ್ಯಾಯಾಂಗ ವ್ಯವಸ್ಥೆ ಹೆಣ್ಣು ಮಕ್ಕಳನ್ನು ಕೈ ಬಿಟ್ಟ ಉದಾಹರಣೆ ಭಾರತದ ಇತಿಹಾಸದಲ್ಲಿ ಇಲ್ಲ. ಈ ಕುರಿತು ಏನು ಘಟನೆ ನಡೆದಿದೆಯೋ ಅದನ್ನು ಆ ಹುಡುಗನ ತಂದೆ ತಾಯಿಗೆ ಮನವರಿಕೆ ಮಾಡಿಸೋಣ. ಹುಡುಗನಿಗೆ ಶಿಕ್ಷೆ ಆಗಬೇಕೆಂಬುದು ನಮ್ಮ ಧ್ಯೇಯ ಅಲ್ಲ. ನಡೆದಿರುವ ಘಟನೆಗೆ ಇಬ್ಬರು ಕಾರಣರಾಗಿರುವುದರಿಂದ ಹುಟ್ಟಿದ ಮಗು ಬಲಿಯಾಗಬಾರದು. ಈ ನಿಟ್ಟಿನಲ್ಲಿ ನಾವೆಲ್ಲ ಒಗ್ಗಟ್ಟಾಗಿ ಆ ಕುಟುಂಬದ ಬೆನ್ನಹಿಂದೆ ನಿಲ್ಲೋಣ. ಇದು ಯಾವುದೇ ಹಂತಕ್ಕೂ ಹೋದರೂ ಕೂಡಾ ಇಡಿ ವಿಶ್ವಕರ್ಮ ಸಮಾಜ ಸಂತ್ರಸ್ತೆಯ ಮತ್ತು ಕುಟುಂಬದ ಬೆನ್ನ ಹಿಂದೆ ನಿಲ್ಲಬೇಕೆಂದರು. ಅವರಿಗೆ ಕಾನೂನು ಪ್ರಕಾರ ಏನೆಲ್ಲಾ ಬೇಕೊ ಅದಕ್ಕೆ ನಾನು ನಿಮ್ಮ ಜೊತೆ ಇದ್ದೇನೆ. ನೀವು ಎಲ್ಲಿ ಕರೆದರೂ ಬರುತ್ತೇನೆ. ನೀವು ಹಾಕಿಕೊಳ್ಳುವ ಎಲ್ಲಾ ಯೋಜನೆಯಲ್ಲಿ ನಾನು ನಿಮ್ಮ ಜೊತೆ ಇದ್ದೇನೆ ಎಂದರು.