ಉಪ್ಪಿನಂಗಡಿ: ನಿನ್ನೆ ಸಂಜೆ ಬೀಸಿದ ಭಾರೀ ಗಾಳಿಗೆ ಇಲ್ಲಿನ ಹಳೆಗೇಟು ಕ್ರಾಸ್ (ಸುಬ್ರಹ್ಮಣ್ಯ ಕ್ರಾಸ್) ಬಳಿ ಮರದ ಭಾರೀ ಗಾತ್ರದ ಕೊಂಬೆಯೊಂದು ಹಳೆಗೇಟು-ಮರ್ಧಾಳ ರಾಜ್ಯ ಹೆದ್ದಾರಿಯ ಮೇಲೆ ಉರುಳಿ ಬಿದ್ದಿದ್ದು, ಈ ಸಂದರ್ಭ ಆಟೋ ಚಾಲಕರೋರ್ವರು ಕೂದಳೆಲೆಯ ಅಂತರದಿಂದ ಪಾರಾದ ಘಟನೆ ನಡೆದಿದೆ. ಬಳಿಕ ಮರವನ್ನು ಗೃಹ ರಕ್ಷಕದಳದವರನ್ನೊಳಗೊಂಡ ಪ್ರವಾಹ ರಕ್ಷಣಾ ತಂಡದವರು ತೆರವುಗೊಳಿಸಿದರು.
ಅಪರಾಹ್ನ ಮೂರುವರೆಯ ಸುಮಾರಿಗೆ ಬೀಸಿದ ಭಾರೀ ಗಾಳಿಗೆ ಹಳೆಗೇಟು ಬಳಿ ರಾಜ್ಯ ಹೆದ್ದಾರಿ ಬಳಿಯಿದ್ದ ಬೃಹತ್ ಹಾಳೆ ಮರದ ಭಾರೀ ಗಾತ್ರದ ಕೊಂಬೆಯೊಂದು ಮುರಿದು ಬಿದ್ದಿದೆ. ಈ ಸಂದರ್ಭ ಉಪ್ಪಿನಂಗಡಿಯಿಂದ ಪೆರಿಯಡ್ಕ ಕಡೆಗೆ ಅಟೋದಲ್ಲಿ ಸಾಗುತ್ತಿದ್ದ ಹೇಮಂತ್ ಅವರು ಕೂದಲೆಳೆಯ ಅಂತರದಿಂದ ಅಪಾಯದಿಂದ ಪಾರಾಗಿದ್ದಾರೆ. ಕೊಂಬೆ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಸುಮಾರು 15 ನಿಮಿಷ ವಾಹನ ಸಂಚಾರಕ್ಕೆ ತಡೆಯುಂಟಾಗುವಂತಾಯಿತು. ಬಳಿಕ ಉಪ್ಪಿನಂಗಡಿ ಗೃಹರಕ್ಷಕ ಪ್ರವಾಹ ರಕ್ಷಣಾ ತಂಡದಲ್ಲಿರುವ ಗೃಹರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ಸುಖಿತಾ ಎ. ಶೆಟ್ಟಿ, ಶೆಟ್ಟಿ, ಸೆಕ್ಷನ್ ಲೀಡರ್ ದಿನೇಶ್, ಸಿಬ್ಬಂದಿ ಆರೀಸ್, ಶಿಬುಜಾನ್ ಸ್ಥಳಕ್ಕೆ ತೆರಳಿ ಕೊಂಬೆಯನ್ನು ತೆರವುಗೊಳಿಸಿದರು. ಸಾರ್ವಜನಿಕರು ಇವರಿಗೆ ಸಹಕಾರ ನೀಡಿದರು.
ಉಪ್ಪಿನಂಗಡಿ ಪೊಲೀಸ್ ಠಾಣಾ ಸಹಾಯಕ ಉಪ ನಿರೀಕ್ಷಕ ದೇವಪ್ಪ ಗೌಡ, ಬೀಟ್ ಪೊಲೀಸ್ ಸಂಗಪ್ಪ ಸ್ಥಳದಲ್ಲಿದ್ದು, ವಾಹನ ಸಂಚಾರ ನಿಯಂತ್ರಿಸಿದರು.