ರೋಟರಿಯಿಂದ ಮಾನವೀಯ ಮೌಲ್ಯಗಳ ಸಂಬಂಧ ಬೆಸೆಯುವಿಕೆ-ದುರ್ಗಾಪ್ರಸಾದ್ ರೈ
ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಯು ಆಟಿ ತಿನಸುಗಳನ್ನು ತಯಾರಿಸಿ ಉಣಬಡಿಸುವುದರಿಂದ ರೋಟರಿ ಕುಟುಂಬ ಸದಸ್ಯರ ಮಿಲನಕ್ಕೆ ಸಾಕ್ಷಿಯಾಗಿದೆ ಮಾತ್ರವಲ್ಲ ಮಾನವೀಯ ಮೌಲ್ಯಗಳ ಸಂಬಂಧಗಳನ್ನು ಬೆಸೆಯುತ್ತದೆ ಎಂದು ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈರವರು ಹೇಳಿದರು.
ಜು.25 ರಂದು ಸಂಜೆ ರೋಟರಿ ಮನೀಷಾ ಸಭಾಂಗಣದಲ್ಲಿ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಆಯೋಜಿಸಿದ “ಆಟಿದ ನೆಂಪು” ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ತುಳುನಾಡಿನ ಸಂಸ್ಕೃತಿ ಎಂಬುದು ಮಣ್ಣಿನ ಕಂಪಿನಲ್ಲಿ ಬೆರೆತು ಹೋಗಿದೆ. ಹಿಂದಿನ ಹಾಗೂ ಇಂದಿನ ಆಟಿ ತಿಂಗಳ ಸಂಸ್ಕೃತಿಗೆ ಅಜಗಜಾಂತರ ವ್ಯತ್ಯಾಸವಿದೆ. ಹಿಂದಿನ ಆಟಿ ತಿಂಗಳು ಅಂದರೆ ಅದು ಕಷ್ಟದ ತಿಂಗಳು. ಆಟಿ ತಿಂಗಳಿನ ತಿಂಡಿ ತಿನಸುಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಒಳಗೊಂಡಿತ್ತು. ಈ ಸಮಯದಲ್ಲಿ ಬರುವ ಆಟಿ ಕಳೆಂಜ ದುಷ್ಟ ಮತ್ತು ಕೆಟ್ಟ ಕಾರಣಗಳಿಂದ ನಮ್ಮನ್ನು ರಕ್ಷಿಸುತ್ತಾನೆ ಎಂಬ ಭರವಸೆಯಾಗಿದೆ ಎಂದರು.
ಗುರುತಿಸುವಿಕೆ:
ಕ್ಲಬ್ ಸುಮಾರು 85 ಸದಸ್ಯರನ್ನು ಹೊಂದಿದ್ದು ನೂತನ ಅಧ್ಯಕ್ಷಾವಧಿಯ ವರ್ಷದ ಆರಂಭದಲ್ಲಿಯೇ 43 ಸದಸ್ಯರು ತಮ್ಮ ಸದಸ್ಯತ್ವವನ್ನು ಪಾವತಿಸಿದ್ದು ಸದಸ್ಯತ್ವ ಪಾವತಿಸಿದ ಸದಸ್ಯರಿಗೆ ಈ ಸಂದರ್ಭದಲ್ಲಿ ಅಧ್ಯಕ್ಷ ಶಶಿಧರ್ ಕಿನ್ನಿಮಜಲುರವರು ಕೊಡೆ ನೀಡುವ ಮೂಲಕ ಗುರುತಿಸಿ ಗೌರವಿಸಿದರು. ಕೋಶಾಧಿಕಾರಿ ಜಯಂತ್ ಬಾಯಾರುರವರು ಹೆಸರಿನ ಪಟ್ಟಿ ವಾಚಿಸಿದರು.
ಜ್ಞಾನ ರೈ ಕುರಿಯ ಪ್ರಾರ್ಥಿಸಿದರು. ರೋಟರಿ ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲು ಸ್ವಾಗತಿಸಿ, ಕಾರ್ಯದರ್ಶಿ ನವೀನ್ ರೈ ಪಂಜಳ ವಂದಿಸಿದರು. ಮಾಜಿ ಅಧ್ಯಕ್ಷರಾದ ಜಯಂತ್ ನಡುಬೈಲು, ಡಾ.ಸೂರ್ಯನಾರಾಯಣರವರು ಅತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಕ್ಲಬ್ ನಿಯೋಜಿತ ಅಧ್ಯಕ್ಷ ರವಿಕುಮಾರ್ ರೈ, ನಿಕಟಪೂರ್ವ ಅಧ್ಯಕ್ಷ ಡಾ.ರವಿಪ್ರಕಾಶ್ ಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿಶಾಂತ್ ರೈ, ಕಾರ್ಯದರ್ಶಿ ನವೀನ್ ರೈ ಪಂಜಳರವರು ಅತಿಥಿಗಳ ಪರಿಚಯ ಮಾಡಿದರು. ಸಾರ್ಜಂಟ್ ಎಟ್ ಆಮ್ಸ್೯ ಶಶಿಕಿರಣ್ ರೈ ನೂಜಿ ಸಹಕರಿಸಿದರು.
ಸುಂದರ ರೈ ಮಂದಾರರವರಿಗೆ ಸನ್ಮಾನ..
ತುಳು ರಂಗಭೂಮಿ ನಟ, ಕನ್ನಡ, ತುಳು ಚಿತ್ರನಟ, ಅಭಿನಯಚಕ್ರವರ್ತಿ ಎಂದು ಕರೆಯಲ್ಪಡುವ ಸುಂದರ ರೈ ಮಂದಾರರವರನ್ನು ಅವರು ತುಳು ರಂಗಭೂಮಿಗೆ ನೀಡಿದ ಸೇವೆಯನ್ನು ಪರಿಗಣಿಸಿ ಈ ಸಂದರ್ಭದಲ್ಲಿ ರೋಟರಿ ಈಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಸುಂದರ ರೈ ಮಂದಾರರವರು, ಸಣ್ಣ ಕಲಾವಿದನನ್ನು ದೊಡ್ಡದಾದ ಹೆಸರಾಂತ ಸಂಸ್ಥೆಯು ನನ್ನನ್ನು ಗೌರವಿಸಿದ್ದು ಅದನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇನೆ. ನಾನು ಇಷ್ಟು ಎತ್ತರಕ್ಕೆ ಬೆಳೆಯಲು ರಂಗಭೂಮಿ ಕಾರಣ ಜೊತೆಗೆ ಪುರಂದರ ರೈ ಮಿತ್ರಂಪಾಡಿ, ಜಯಂತ್ ನಡುಬೈಲು, ಬೂಡಿಯಾರು ರಾಧಾಕೃಷ್ಣ ರೈರವರಂತಹ ಕಲಾ ಪೋಷಕರು ಆಗಿದ್ದಾರೆ. ಕಳೆದ 30 ವರ್ಷಗಳಿಂದ ಕಲಾರಂಗದಲ್ಲಿ ಸೇವೆ ಮಾಡುತ್ತಿದ್ದು ಕಲೆ ಹಾಗೂ ಕಲಾವಿದನನ್ನು ಗುರುತಿಸಿರುವುದು ನನಗೆ ಹೆಮ್ಮೆಯೆನಿಸಿದೆ ಎಂದರು.
53 ಬಗೆ ಖಾದ್ಯಗಳು..
ಈ ಆಟಿದ ನೆಂಪು ಕಾರ್ಯಕ್ರಮದಲ್ಲಿ ಕ್ಲಬ್ ಸದಸ್ಯರೇ ತಯಾರಿಸಿದ ತುಳುನಾಡಿನ ಸಾಂಪ್ರದಾಯಿಕ ವಿವಿಧ ಆಟಿ ತಿನಸುಗಳಾದ ಉಪ್ಪಡ್ ಪಚ್ಚಿಲ್, ಸಲಾಡ್, ಕಬಾಬ್, ಚೇಟ್ಲ, ತಜಂಕ್ ಪಲ್ಯ, ಕಣಿಲೆಗಸಿ, ತಜಂಕ್ ಪೋಡಿ, ಪೆಲಕಾಯಿ ಗಟ್ಟಿ, ಪತ್ರೋಡೆ, ಕುಡುತ ಚಟ್ನಿ, ಮೆಂತೆ ಗಂಜಿ, ಬಸಳೆ ಪುಂಡಿ, ಮೂಡೆ, ಕೋರಿ ಸುಕ್ಕ, ಕ್ಷೀರ, ಕಡ್ಲೆ ಬಲ್ಯಾರ್, ಜೀಗುಜ್ಜೆ ಸಾಂಬಾರ್, ಪಾಯಸ, ಮೊಟ್ಟೆಗಸಿ, ಊರಿನ ದನದ ಮಜ್ಜಿಗೆ, ಚಟ್ಟಂಬಡೆ ಹೀಗೆ ಸುಮಾರು 53 ಬಗೆ ಬಗೆಯ ರುಚಿಕರ ಘಮಘಮಿಸುವ ಖಾದ್ಯಗಳು ಕಾರ್ಯಕ್ರಮದ ಸೊಗಡನ್ನು ಹೆಚ್ಚಿಸಿತ್ತು.
ಸಾಂಸ್ಕೃತಿಕ ವೈವಿಧ್ಯ..
*ಸಭಾ ಕಾರ್ಯಕ್ರಮದ ಬಳಿಕ ಕ್ಲಬ್ ಸದಸ್ಯರು ತೆಂಗಿನಕಾಯಿ ಕುಟ್ಟುವುದು ಸೊಬಗನ್ನು ಹೆಚ್ಚಿಸಿತ್ತು.
*ನಿತೇಶ್ ಬೆದ್ರಾಳರವರ ನೇತೃತ್ವದಲ್ಲಿ ಮಕ್ಕಳಿಗೆ, ಯುವಕ-ಯುವತಿಯರಿಗೆ, ಮಹಿಳೆಯರಿಗೆ ಸ್ಪರ್ಧೆಯನ್ನು ನಡೆಸಿಕೊಟ್ಟರು.
*ಕ್ಲಬ್ ಸದಸ್ಯರು ತಂದಂತಹ ಸಾಂಪ್ರದಾಯಿಕ ತಿಂಡಿ ತಿನಸುಗಳನ್ನು ತಯಾರಿಸಿದವರೇ ಬಡಿಸುತ್ತಿರುವುದು ವೈಶಿಷ್ಟ್ಯತೆಯಾಗಿತ್ತು.