ವಾರದೊಳಗೆ ಭೇದಿಸದಿದ್ದರೆ ಪ್ರತಿಭಟನೆ
ಪಾಣಾಜೆ: ಪಾಣಾಜೆ ಚಂದ್ರಗಿರಿಯಲ್ಲಿ ಮೇಯಲು ಬಿಟ್ಟಿದ್ದ ದನ ಕಾಣೆಯಾಗಿರುವುದರ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಸೆ. 4 ರಂದು ಬೆಳಗ್ಗೆ ಸುಮಾರು 11ರಿಂದ ಮಧ್ಯಾಹ್ನ 2ರ ಮಧ್ಯೆ ಚಂದ್ರಗಿರಿ ಎಂಬಲ್ಲಿ ಮೇಯಲು ಬಿಟ್ಟಿದ್ದ 102996883365 ಟ್ಯಾಗ್ ನಂಬರ್ ನ ದನ ನಾಪತ್ತೆಯಾಗಿದೆ. 4 ದಿನದಿಂದ ಹುಡುಕಾಡಿದರೂ ದನದ ಯಾವುದೇ ಸುಳಿವು ಲಭಿಸಿಲ್ಲ.
ಮಾಂಸಕ್ಕಾಗಿ ಯಾರಾದರೂ ದನವನ್ನು ಕದ್ದೊಯ್ದ ಬಗ್ಗೆ ಸಂಶಯ ಉಂಟಾಗಿದೆ. ಪಾಣಾಜೆ ಗ್ರಾಪಂ ವ್ಯಾಪ್ತಿಯ ಹೆಚ್ಚಿನ ಜನರು ಕೃಷಿಕರೂ, ಹೈನುಗಾರರೂ ಆಗಿದ್ದು ಇಲ್ಲಿ ಭಯದ ವಾತಾವಾರಣ ಸೃಷ್ಟಿಯಾಗಿದೆ. ಈ ಬಗ್ಗೆ ತನಿಖೆ ನಡೆಸಿ ಸರಿಯಾದ ಕ್ರಮ ಕೈಗೊಳ್ಳುವಂತೆ ಗಣೇಶ್ ಎ. ಆರ್. ಚಂದ್ರಗಿರಿ ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿಗೆ ನೀಡಿದ ದೂರಿನಲ್ಲಿ ಮನವಿ ಮಾಡಿದ್ದಾರೆ.
ಪೆರ್ನೆಯಲ್ಲಿ ಹಟ್ಟಿಯಿಂದ ಕದ್ದೊಯ್ದು ಮಾಂಸ ಮಾಡಿ ತ್ಯಾಜ್ಯವನ್ನು ಮನೆಯಂಗಳದಲ್ಲೇ ಎಸೆದು ಹೋಗಿರುವ ದುಷ್ಕರ್ಮಿಗಳ ಕೃತ್ಯದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಪಾಣಾಜೆಯಲ್ಲಿ ನಡೆದಿರುವ ದನ ಕಳವು ಕೂಡಾ ಚರ್ಚೆಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಇದು ಮುಂದುವರಿದಲ್ಲಿ ದುಷ್ಕರ್ಮಿಗಳ ಕೃತ್ಯ ನಾನಾ ಕಡೆ ಆಗಲು ದುಷ್ಪ್ರೇರಣೆ ಸಿಕ್ಕಂತಾಗಲಿದೆ. ಅದಕ್ಕೂ ಮುನ್ನ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಽಸಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ವಲಯದಲ್ಲಿ ಆಗ್ರಹ ವ್ಯಕ್ತವಾಗಿದೆ.
ವಾರದೊಳಗೆ ಭೇದಿಸದಿದ್ದರೆ ಪ್ರತಿಭಟನೆ :
ಪಾಣಾಜೆಯಲ್ಲಿ ನಿರಂತರ ಅಕ್ರಮ ಗೋ ಸಾಗಾಟ ನಡೆಯುತ್ತಿದೆ.ಪೆರ್ನೆಯಲ್ಲಿ ಒಂದು ವಾರದ ಹಿಂದೆ ನಡೆದಂತಹ ರೀತಿಯಲ್ಲೇ ಚಂದ್ರಗಿರಿಯಲ್ಲೂ ನಡೆದಿರಬಹುದೆಂದು ಸಾರ್ವಜನಿಕರಲ್ಲಿ ಶಂಕೆಯಿರುವುದರಿಂದ ತಕ್ಷಣ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಬೇಕು.ಇಲ್ಲದಿದ್ದಲ್ಲಿ ಪಾಣಾಜೆಯಲ್ಲಿ ಗೋರಕ್ಷಣೆಗಾಗಿ ಬೃಹತ್ ಜನಾಗ್ರಹ ಚಳುವಳಿಯು ರೈತ ಬಂಧುಗಳು ಮತ್ತು ಗೋ ಪ್ರೇಮಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಎಚ್ಚರಿಕೆ ನೀಡಿದೆ.