ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಉಪಚರಿಸಿ, ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ

0

ಪುತ್ತೂರು ಗ್ರಾಮಾಂತರ ಠಾಣಾ ಎಸ್ಸೈ ಜಂಬೂರಾಜ್ ಮಹಾಜನ್ ಮಾನವೀಯ ಕಳಕಳಿಗೆ ವ್ಯಾಪಕ ಪ್ರಶಂಸೆ

@ಯೂಸುಫ್ ರೆಂಜಲಾಡಿ

ಪುತ್ತೂರು: ಕಾಲಿಗೆ ಗಂಭೀರವಾಗಿ ಗಾಯಗೊಂಡು ರಸ್ತೆ ಬದಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿಯೋರ್ವನನ್ನು ಪ್ರಾಥಮಿಕವಾಗಿ ಉಪಚರಿಸಿ ಬಳಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಮೂಲಕ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಉಪನಿರೀಕ್ಷಕ ಜಂಬೂರಾಜ್ ಮಹಾಜನ್ ಮತ್ತು ಸಿಬ್ಬಂದಿಗಳು ಮಾನವೀಯತೆ ಮೆರೆದಿದ್ದಾರೆ.


ಸೆ.೮ರಂದು ಸಂಜೆ ನೆ.ಮುಡ್ನೂರು ಗ್ರಾಮದ ಗಾಳಿಮುಖದಲ್ಲಿ ವ್ಯಕ್ತಿಯೊಬ್ಬರು ಕಾಲಿಗೆ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದು ಕಾಲಿನಿಂದ ರಕ್ತ ಸೋರುತ್ತಿತ್ತು. ಈ ವೇಳೆ ಅಲ್ಲಿಂದ ತೆರಳುತ್ತಿದ್ದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಎಸ್ಸೈ ಜಂಬೂರಾಜ್ ಮಹಾಜನ್ ಅವರು ವ್ಯಕ್ತಿಯ ಬಳಿಗೆ ಹೋಗಿ ವಿಚಾರಿಸಿದಾಗ ಯಾರೋ ಒಬ್ಬರು ಇವರನ್ನು ದೂಡಿ ಹಾಕಿ ಗಾಯಗೊಂಡಿರುವ ಬಗ್ಗೆ ಮಾಹಿತಿ ತಿಳಿದು ಬಂತು. ಕೂಡಲೇ ಕಾರ್ಯಪ್ರವೃತ್ತರಾದ ಎಸ್ಸೈ ಜಂಬೂರಾಜ್ ಮಹಾಜನ್ ಅವರು ಸ್ವತಃ ತಮ್ಮ ಪೊಲೀಸ್ ಜೀಪಿನಲ್ಲಿದ್ದ ‘ಪ್ರಥಮ ಚಿಕಿತ್ಸೆ ಪೆಟ್ಟಿಗೆ’ಯಲ್ಲಿದ್ದ ಔಷಧಿಗಳನ್ನು ಬಳಸಿಕೊಂಡು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ನಂತರ ಅವರನ್ನು ಸಿಬ್ಬಂದಿಗಳ ಸಹಾಯದಿಂದ ಆಟೋ ರಿಕ್ಷಾವೊಂದರಲ್ಲಿ ಈಶ್ವರಮಂಗಲದ ಕ್ಲಿನಿಕ್‌ವೊಂದಕ್ಕೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಗಾಯಾಳು ವ್ಯಕ್ತಿಯನ್ನು ಕೇರಳದ ಮುಳಿಯಡ್ಕದ ನಾಗೇಶ್ ಎಂದು ತಿಳಿದು ಬಂದಿದೆ.


ನಾಗೇಶ್ ಅವರ ಕಾಲಿನ ಮೂಳೆ ಮುರಿತಗೊಂಡಿದ್ದು ಅವರಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ, ಹೀಗಾಗಿ ಅವರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ ತಿಳಿದು ಬಂದಿದೆ.
ನಾಗೇಶ್ ಅವರ ಕುಟುಂಬಸ್ಥರನ್ನು ಸಂಪರ್ಕಿಸಿರುವ ಎಸ್ಸೈ ಅವರು ಕುಟುಂಬಕ್ಕೆ ಮಾಹಿತಿ ನೀಡಿದ್ದು, ಕುಟುಂಬದ ಸದಸ್ಯರು ಆಸ್ಪತ್ರೆಗೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.

ಜಂಬೂರಾಜ್ ಮಹಾಜನ್

ಎಸ್ಸೈ ಜಂಬೂರಾಜ್ ಮಹಾಜನ್ ಜೊತೆ ಸಿಬ್ಬಂದಿಗಳಾದ ಶರಣಪ್ಪ ಪಾಟೀಲ್ ಹಾಗೂ ಯುವರಾಜ್ ಸಹಕರಿಸಿದ್ದರು. ವ್ಯಕ್ತಿಯೊಬ್ಬರು ಗಾಯಗೊಂಡಿರುವುದನ್ನು ನೋಡಿ ಅವರನ್ನು ಸ್ಥಳದಲ್ಲೇ ಉಪಚರಿಸಿ ಬಳಿಕ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿರುವ ಎಸ್ಸೈ ಜಂಬೂರಾಜ್ ಮಹಾಜನ್ ಅವರ ಮಾನವೀಯ ಗುಣ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದ್ದು, ಅವರ ಮಾನವೀಯ ಕಳಕಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಚಾರದ ಬಗ್ಗೆ ಎಸ್ಸೈ ಜಂಬೂರಾಜ್ ಅವರನ್ನು ‘ಸುದ್ದಿ’ ಸಂಪರ್ಕಿಸಿದಾಗ ನಾವು ‘ಗಾಯಾಳು ವ್ಯಕ್ತಿಯೊಬ್ಬರನ್ನು ಉಪಚರಿಸಿ ಆಸ್ಪತ್ರೆಗೆ ದಾಖಲಿಸಿ ನಮ್ಮ ಕರ್ತವ್ಯ ನಿರ್ವಹಿಸಿದ್ದೇವೆ ಅಷ್ಟೇʼ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here