ನೆಲ್ಯಾಡಿ: ಮಂಗಳೂರು, ಬೆಂಗಳೂರು ಸಹಿತ ನೆಲ್ಯಾಡಿ ಮೂಲಕ ಸಂಚಾರ ಮಾಡುವ ಎಲ್ಲಾ ಕೆಎಸ್‌ಆರ್‌ಟಿಸಿ ಬಸ್ಸುಗಳು ನೆಲ್ಯಾಡಿ ಬಸ್‌ನಿಲ್ದಾಣಕ್ಕೆ ಬಂದು ಹೋಗಬೇಕು ಹಾಗೂ ನೆಲ್ಯಾಡಿ ಬಸ್ ನಿಲ್ದಾಣಕ್ಕೆ ಸಂಬಂಧಿಸಿದ ಜಾಗ ಗಡಿ ಗುರುತು ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ ಘಟನೆ ಕೌಕ್ರಾಡಿ ಗ್ರಾಮ ಸಭೆಯಲ್ಲಿ ನಡೆಯಿತು.

ಸಭೆ ಜು.೨೫ರಂದು ಗ್ರಾ.ಪಂ.ಅಧ್ಯಕ್ಷ ಉದಯಕುಮಾರ್ ದೋಂತಿಲ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಕಡಬ ಪಶು ಸಂಗೋಪನಾ ಇಲಾಖೆಯ ಪಶುವೈದ್ಯಾಧಿಕಾರಿ ಡಾ.ಅಜಿತ್ ಎಂ.ಸಿ. ನೋಡಲ್ ಅಧಿಕಾರಿಯಾಗಿದ್ದರು. ಕೆಎಸ್‌ಆರ್‌ಟಿಸಿ ಸಂಚಾಲಕ ಕುಶಾಲಪ್ಪ ಗೌಡ ಅವರು ಇಲಾಖೆ ಮಾಹಿತಿ ನೀಡಿ ನೆಲ್ಯಾಡಿ-ಕಡಬ ಹಾಗೂ ಉಪ್ಪಿನಂಗಡಿ-ನೆಲ್ಯಾಡಿ ನಡುವೆ ಹೊಸದಾಗಿ ಕೆಎಸ್‌ಆರ್‌ಟಿಸಿ ಬಸ್ ಓಡಾಟ ಆರಂಭಗೊಂಡಿದ್ದು ಎರಡೂ ಬಸ್ಸುಗಳು ದಿನದಲ್ಲಿ ನಾಲ್ಕು ಟ್ರಿಪ್ ಮಾಡುತ್ತಿವೆ ಎಂದರು. ಬಳಿಕ ಗ್ರಾಮಸ್ಥರಾದ ಅಲೆಕ್ಸ್ ವರ್ಗೀಸ್, ಜಾನ್ಸನ್ ಗಲ್ಬಾವೋ, ವರ್ಗೀಸ್ ಅಬ್ರಹಾಂ, ಜಾರ್ಜ್‌ಕುಟ್ಟಿ ಉಪದೇಶಿ, ರಿತೇಶ್, ಸುಜಿತ್ ಪಿಲಿಫ್, ರಾಜನ್ ಕೆ.ಮ್ಯಾಥ್ಯು, ಬಿಜುಕುಮಾರ್ ಮತ್ತಿತರರು ನೆಲ್ಯಾಡಿ ಬಸ್‌ನಿಲ್ದಾಣದ ವಿಚಾರ ಪ್ರಸ್ತಾಪಿಸಿ, ನೆಲ್ಯಾಡಿ ಬಸ್‌ನಿಲ್ದಾಣಕ್ಕೆ ಕಾಯಕಲ್ಪ ನೀಡಿ, ಅಲ್ಲಿಗೆ ಖಾಯಂ ಸಂಚಾರ ನಿಯಂತ್ರಕರ ನೇಮಕ ಮಾಡಬೇಕು ಹಾಗೂ ಮಂಗಳೂರು-ಬೆಂಗಳೂರು ನಡುವೆ ಮತ್ತು ಲೋಕಲ್ ಆಗಿ ಓಡಾಟ ನಡೆಸುವ ಎಲ್ಲಾ ಕೆಎಸ್‌ಆರ್‌ಟಿಸಿ ಬಸ್ಸುಗಳು ನೆಲ್ಯಾಡಿ ಬಸ್‌ನಿಲ್ದಾಣಕ್ಕೆ ಬಂದೇ ಹೋಗಬೇಕೆಂದು ಆಗ್ರಹಿಸಿದರು. ಅಲ್ಲದೇ ಸುಬ್ರಹ್ಮಣ್ಯದಿಂದ ಪೆರಿಯಶಾಂತಿ ಮೂಲಕ ಧರ್ಮಸ್ಥಳಕ್ಕೆ ಸಂಚಾರ ಮಾಡುವ ಬಸ್ಸುಗಳೂ ನೆಲ್ಯಾಡಿ ಬಸ್‌ನಿಲ್ದಾಣಕ್ಕೆ ಬಂದೇ ಹೋಗಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕುಶಾಲಪ್ಪ ಗೌಡ ಅವರು ಈ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.
ಜಾಗದ ಗಡಿ ಗುರುತಿಗೆ ನಿರ್ಣಯ:
ನೆಲ್ಯಾಡಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಕೌಕ್ರಾಡಿ ಗ್ರಾಮದಲ್ಲಿ ಸರ್ವೆ ನಂ.201ರಲ್ಲಿ 2 ಎಕ್ರೆ ಜಾಗ ಇದೆ ಎಂದು ಗ್ರಾಮ ಆಡಳಿತಾಧಿಕಾರಿ ಸಿದ್ಧಲಿಂಗ ಜಂಗಮಶೆಟ್ಟಿ ಅವರು ಚರ್ಚೆ ವೇಳೆ ಸಭೆಗೆ ತಿಳಿಸಿದರು. ಈ ವೇಳೆ ಮಾತನಾಡಿದ ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಉಷಾ ಅಂಚನ್ ಅವರು, ನೆಲ್ಯಾಡಿ-ಕೌಕ್ರಾಡಿ ಅವಳಿ ನಗರಗಳು. ಇಲ್ಲಿಗೆ ಸುಸಜ್ಜಿತ ಬಸ್‌ನಿಲ್ದಾಣ ಆಗಬೇಕು. ಈ ನಿಟ್ಟಿನಲ್ಲಿ ಈಗಿರುವ ಬಸ್‌ನಿಲ್ದಾಣ ಅಭಿವೃದ್ಧಿ ಪಡಿಸಬೇಕು. ಇದಕ್ಕೆ ಸಂಬಂಧಿಸಿದ ಜಾಗದ ಗಡಿ ಗುರುತು ಮಾಡಲು ಕ್ರಮ ಕೈಗೊಳ್ಳಬೇಕೆಂದು ಗ್ರಾ.ಪಂ.ಅಧ್ಯಕ್ಷರನ್ನು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಉದಯಕುಮಾರ್ ಅವರು, ಮುಂದಿನ 1 ತಿಂಗಳೊಳಗೆ ಕೆಎಸ್‌ಆರ್‌ಟಿಸಿಗೆ ಸಂಬಂಧಿಸಿದ ಜಾಗದ ಗಡಿ ಗುರುತು ಮಾಡಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಹೆಚ್ಚುವರಿ ಬಸ್ ಓಡಾಟಕ್ಕೂ ಆಗ್ರಹ:
ಕಡಬ-ಪೇರಡ್ಕ-ಗೋಳಿಯಡ್ಕ-ಇಚ್ಲಂಪಾಡಿ ಮೂಲಕ ನೆಲ್ಯಾಡಿಗೆ ಹಾಗೂ ನೆಲ್ಯಾಡಿಯಿಂದ ಕಡಬ-ಇಚ್ಲಂಪಾಡಿ-ಪೇರಡ್ಕ-ಕಡಬ-ಉಪ್ಪಿನಂಗಡಿಗೆ ಬಸ್ ಓಡಾಟ ನಡೆಸಬೇಕೆಂದು ವರ್ಗೀಸ್ ಅಬ್ರಹಾಂ ಒತ್ತಾಯಿಸಿದರು. ನೆಲ್ಯಾಡಿ-ಕೊಕ್ಕಡ ನಡುವೆಯೂ ಕೆಎಸ್‌ಆರ್‌ಟಿಸಿ ಬಸ್ ಓಡಾಟ ನಡೆಸುವಂತೆ ತೋಮಸ್ ಕೆ.ವಿ.ಒತ್ತಾಯಿಸಿದರು. ಧರ್ಮಸ್ಥಳ-ನೆಲ್ಯಾಡಿ ನಡುವೆಯೂ ಬಸ್ ಓಡಾಟಕ್ಕೆ ಗ್ರಾಮಸ್ಥರು ಒತ್ತಾಯಿಸಿದರು.
ಜೆಜೆ ಕಾಮಗಾರಿ ವಿರುದ್ಧ ಆಕ್ರೋಶ:
ಇಚ್ಲಂಪಾಡಿ ಹಾಗೂ ಕೌಕ್ರಾಡಿ ಗ್ರಾಮದಲ್ಲಿ ನಡೆದಿರುವ ಜೆಜೆಎಂ ಕಾಮಗಾರಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಇಚ್ಲಂಪಾಡಿಯಲ್ಲಿನ ನೀರಿನ ಟ್ಯಾಂಕ್ ಸೋರಿಕೆಯಾಗುತ್ತಿದೆ, ಪೈಪುಗಳಲ್ಲೂ ನೀರು ಲೀಕೇಜ್ ಆಗುತ್ತಿದೆ ಎಂದು ಗ್ರಾ.ಪಂ.ಸದಸ್ಯ ಟಿ.ಎಂ.ರೋಯಿ ಯಾನೆ ಕುರಿಯಾಕೋಸ್, ವರ್ಗೀಸ್ ಅಬ್ರಹಾಂ, ಬಿಜುಕುಮಾರ್, ರಾಜನ್ ಕೆ.ಮ್ಯಾಥ್ಯು ಮತ್ತಿತರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಂಜಿನಿಯರ್ ಎಸ್.ಎಸ್.ಹುಕ್ಕೇರಿ ಅವರು, ಟ್ಯಾಂಕ್‌ಗೆ ನೀರೇ ಹಾಕಿಲ್ಲ. ಗೇಟ್‌ವಾಲ್, ಛೇಂಬರ್ ಆಗಿಲ್ಲ. ಸಮರ್ಪಕ ಪರಿಶೀಲನೆ ನಡೆಸಿಯೇ ಹಸ್ತಾಂತರ ಪಡೆಯುತ್ತೇವೆ ಎಂದರು. ಕೌಕ್ರಾಡಿ ಗ್ರಾಮದಲ್ಲೂ ಜೆಜೆಎಂ ಕಾಮಗಾರಿಯಲ್ಲಿ ಸಮಸ್ಯೆಗಳಿವೆ. ಸಂಪರ್ಕ ಪಡೆದುಕೊಂಡ ಎಲ್ಲಾ ಮನೆಗೂ ಭೇಟಿ ನೀಡಿ ಪಕ್ಕಾ ಆದಲ್ಲಿ ಮಾತ್ರ ಗ್ರಾ.ಪಂ.ಹಸ್ತಾಂತರ ಪಡೆದುಕೊಳ್ಳಬೇಕೆಂದು ರಮೇಶ್ ಬಾಣಜಾಲು ಒತ್ತಾಯಿಸಿದರು. ಇಂಜಿನಿಯರ್ ಎಸ್.ಎಸ್.ಹುಕ್ಕೇರಿ ಅವರು ಮತ್ತೆ ಮಾತನಾಡಿ, ವಾರ್ಡ್‌ನ ಸದಸ್ಯರು ತಮ್ಮ ವಾರ್ಡ್‌ನಲ್ಲಿನ ಸಮಸ್ಯೆಗಳ ಪಟ್ಟಿ ಮಾಡಿ ಗ್ರಾ.ಪಂ.ಗೆ ಕೊಡಿ. ಎಲ್ಲಾ ಸಮಸ್ಯೆಯನ್ನು ಸರಿಪಡಿಸಿಯೇ ಹಸ್ತಾಂತರ ಮಾಡುತ್ತೇವೆ ಎಂದು ಹೇಳಿದರು. ಜೆಜೆಎಂ ಕಾಮಗಾರಿ ಹಸ್ತಾಂತರ ಪಡೆಯುವ ಮೊದಲು ಗ್ರಾಮಸ್ಥರ ಗಮನಕ್ಕೆ ತರಬೇಕೆಂದು ಜಾನ್ಸನ್ ಗಲ್ಬಾವೋ ಒತ್ತಾಯಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಸೋಲಾರ್ ಲೈಟ್‌ಗೆ ಹಾನಿ;
ಇಚ್ಲಂಪಾಡಿ ನಡುಮನೆ ಕ್ರಾಸ್‌ನಲ್ಲಿ ಗ್ರಾ.ಪಂ.ನಿಂದ ಅಳವಡಿಸಿದ್ದ ಸೋಲಾರ್ ಲೈಟ್‌ಗೆ ಜೆಜೆಎಂ ಕಾಮಗಾರಿ ವೇಳೆ ಹಾನಿಗೊಳಿಸಲಾಗಿದೆ. ಅಲ್ಲದೇ ಸೋಲಾರ್ ಲೈಟ್ ಕಿತ್ತೆಸೆಯಲಾಗಿದೆ ಎಂದು ರಾಜನ್ ಕೆ.ಮ್ಯಾಥ್ಯು, ಬಿಜುಕುಮಾರ್ ಆರೋಪಿಸಿದರು. ಈ ಬಗ್ಗೆ ಚರ್ಚೆ ನಡೆದು ಜೆಜೆಎಂ ಕಾಮಗಾರಿ ಗುತ್ತಿಗೆದಾರರ ಮೂಲಕವೇ ಸರಿಪಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು.
ಆನೆ ದಾಳಿ ತಡೆಗೆ ಕ್ರಮ ವಹಿಸಿ:
ಕಾಪಿನಬಾಗಿಲುನಲ್ಲಿ ಅರಣ್ಯ ಇಲಾಖೆ ನಿರ್ಮಿಸಿರುವ ಆನೆಕಂದಕದಲ್ಲಿ ಮಣ್ಣು ತಂಬಿಕೊಂಡಿದೆ. ಇದನ್ನು ದಾಟಿ ಆನೆಗಳು ಬರುತ್ತಿವೆ. ಆದ್ದರಿಂದ ಇಲ್ಲಿ ಗ್ರಾ.ಪಂ.ನಿಂದ ಮೋರಿ ಅಳವಡಿಸಿ ಮಣ್ಣು ಹಾಗೂ ನೀರು ಆನೆ ಕಂದಕಕ್ಕೆ ಬರದಂತೆ ತಡೆಯಬೇಕೆಂದು ಗ್ರಾಮಸ್ಥ ರಿತೇಶ್ ಒತ್ತಾಯಿಸಿದರು. ಅಲ್ಲದೆ ಆನೆ ದಾಳಿ ತಡೆಯುವ ನಿಟ್ಟಿನಲ್ಲಿ ಸೋಲಾರ್ ಬೇಲಿ ಹಾಗೂ ಸೋಲಾರ್ ಲೈಟ್ ಅಳವಡಿಸಲು ಅರಣ್ಯ ಇಲಾಖೆಗೆ ಮನವಿ ಮಾಡಬೇಕೆಂದೂ ಅವರು ಒತ್ತಾಯಿಸಿದರು. ಮೋರಿ ಅಳವಡಿಸಲು ಗ್ರಾ.ಪಂ.ನಿಂದ ಕ್ರಮ ಕೈಗೊಳ್ಳುತ್ತೇವೆ ಎಂದು ಅಧ್ಯಕ್ಷ ಉದಯಕುಮಾರ್ ಭರವಸೆ ನೀಡಿದರು. ಕೃಷಿ ಹಾನಿಗೊಳಿಸುತ್ತಿರುವ ಕಾಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರಿಸುವಂತೆಯೂ ಗ್ರಾಮಸ್ಥರು ಒತ್ತಾಯಿಸಿದರು. ಕಾಡಿನಲ್ಲಿ ಹಲಸು, ಈಂದ್ ಮತ್ತಿತರರ ಗಿಡಗಳನ್ನು ಬೆಳೆಸಿ ಆನೆಗೆ ಅಲ್ಲೇ ಆಹಾರ ಸಿಗುವಂತೆ ಮಾಡಬೇಕೆಂದು ಗ್ರಾಮಸ್ಥರು ಸಲಹೆ ನೀಡಿದರು.
ಮರದ ಕೊಂಬೆ ತೆರವುಗೊಳಿಸಿ:
ವಿದ್ಯುತ್ ತಂತಿಗಳಿಗೆ ತಾಗುತ್ತಿರುವ ಮರದ ಕೊಂಬೆ ತೆರವುಗೊಳಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜೆ.ಇ.ರಾಮಣ್ಣ ಅವರು, ಕೊಂಬೆ ತೆರವುಗೊಳಿಸಲು ಗುತ್ತಿಗೆ ನೀಡಲಾಗಿದೆ. ಅವರು ಕೆಲಸ ಮಾಡುತ್ತಿದ್ದಾರೆ. ಮಳೆಗಾಲ ಬೇಗ ಆರಂಭಗೊಂಡಿರುವುದು ಕೆಲಸ ವಿಳಂಬವಾಗಿದೆ ಎಂದರು. ಕಂಚಿನಡ್ಕದಲ್ಲಿ ಅರಣ್ಯ ಜಾಗದಲ್ಲೇ ವಿದ್ಯುತ್ ತಂತಿಗಳು ಹಾದುಹೋಗಿದ್ದು ವಿದ್ಯುತ್ ತಂತಿಗಳಿಗೆ ಗೆಲ್ಲು ತಾಗುತ್ತಿವೆ. ಅವುಗಳನ್ನು ತೆರವುಗೊಳಿಸಬೇಕೆಂದು ರಿತೇಶ್ ಒತ್ತಾಯಿಸಿದರು.
ಪೆರಿಯಶಾಂತಿಯಲ್ಲಿ ಅಕ್ರಮ ಚಟುವಟಿಕೆ:
ತಡರಾತ್ರಿ ಪೆರಿಯಶಾಂತಿ ಅಂಡರ್‌ಪಾಸ್‌ನಲ್ಲಿ ನಿಂತು ಕೆಲವರು ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಗ್ರಾಮಸ್ಥರು, ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪೆರಿಯಶಾಂತಿ ಭಾಗದಲ್ಲಿ ಹೆದ್ದಾರಿ ಬದಿಯಲ್ಲಿರುವ ತ್ಯಾಜ್ಯ, ಪ್ಲಾಸ್ಟಿಕ್ ತೆರವುಗೊಳಿಸುವಂತೆಯೂ ಗ್ರಾಮಸ್ಥರು ಒತ್ತಾಯಿಸಿದರು.
ಅಪಾಯಕಾರಿ ಮರ ತೆರವುಗೊಳಿಸಿ:
ಪೆರಿಯಶಾಂತಿ-ಇಚ್ಲಂಪಾಡಿ ಭಾಗದಲ್ಲಿ ಇರುವ ಅಪಾಯಕಾರಿ ಮರ ತೆರವುಗೊಳಿಸುವಂತೆ ಪ್ರತಿ ಗ್ರಾಮಸಭೆಯಲ್ಲೂ ಒತ್ತಾಯಿಸುತ್ತಿದ್ದೇವೆ. ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ ? ಎಂದು ಗ್ರಾಮಸ್ಥರಾದ ಅಲೆಕ್ಸ್ ವರ್ಗೀಸ್ ಪ್ರಶ್ನಿಸಿದರು. ಇದಕ್ಕೆ ವರ್ಗೀಸ್ ಅಬ್ರಹಾಂ, ಬಿಜುಕುಮಾರ್, ರಾಜನ್ ಕೆ.ಮ್ಯಾಥ್ಯು ಮತ್ತಿತರರು ಪೂರಕವಾಗಿ ಮಾತನಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನೆಲ್ಯಾಡಿ ಶಾಖೆ ಉಪವಲಯಾರಣ್ಯಾಧಿಕಾರಿ ಸುಬ್ರಹ್ಮಣ್ಯ ಕೆ.ರವರು ಮರ ತೆರವುಗೊಳಿಸಲು ಡಿಎಫ್‌ಒ ಅನುಮತಿ ಬೇಕಾಗುತ್ತದೆ ಎಂದರು. ಈ ವೇಳೆ ಮಾತನಾಡಿದ ಕೆಡಿಪಿ ಸದಸ್ಯ ಗಿರೀಶ್ ಬದನೆ ಅವರು, ಕಡಬದಲ್ಲಿ ನಡೆದ ಕೆಡಿಪಿ ಸಭೆಯಲ್ಲೂ ಈ ವಿಚಾರ ಪ್ರಸ್ತಾಪಗೊಂಡಿತ್ತು. ತಕ್ಷಣ ಪರಿಶೀಲನೆ ನಡೆಸಿ ಮರ ತೆರವುಗೊಳಿಸಲು ಶಾಸಕರು ಸೂಚನೆ ನೀಡಿದ್ದಾರೆ ಎಂದರು. ಗ್ರಾ.ಪಂ.ಸದಸ್ಯ ಮಹೇಶ್ ಪಟ್ಲಡ್ಕ ಮಾತನಾಡಿ, ಕೊಕ್ಕಡ-ಪೆರಿಯಶಾಂತಿ ಭಾಗದಲ್ಲೂ ಅಪಾಯಕಾರಿ ಮರಗಳಿವೆ. ಈ ವಿಚಾರವನ್ನು ಎಸಿಎಫ್ ಅವರ ಗಮನಕ್ಕೆ ತಂದಿದ್ದು, ಒಣಗಿದ ಮರ ತೆರವುಗೊಳಿಸಲೂ ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ ಎಂದರು. ಅಪಾಯಕಾರಿ ಮರ ತೆರವುಗೊಳಿಸದೇ ಇದ್ದಲ್ಲಿ ಧರಣಿ ನಡೆಸುವುದಾಗಿಯೂ ಅಲೆಕ್ಸ್ ವರ್ಗೀಸ್ ಹಾಗೂ ಇತರರು ಎಚ್ಚರಿಕೆ ನೀಡಿದರು. ಮೂಡುಬೈಲು ಅಂಗನವಾಡಿ ಬಳಿ ಎರಡು ಅಪಾಯಕಾರಿ ಮರಗಳಿದ್ದು ತೆರವುಗೊಳಿಸಬೇಕೆಂದು ಗ್ರಾಮಸ್ಥ ರಿತೇಶ್ ಒತ್ತಾಯಿಸಿದರು. ಜಂಟಿ ಸರ್ವೆ ವೇಳೆ ರೈತರಿಗೂ ಮಾಹಿತಿ ನೀಡಬೇಕೆಂದು ವರ್ಗೀಸ್ ಅಬ್ರಹಾಂ ಆಗ್ರಹಿಸಿದರು.
ಮನೆ ನಿವೇಶನಕ್ಕೆ ಜಾಗ ಕಾದಿರಿಸಿ:
ಮಣ್ಣಗುಂಡಿಯಲ್ಲಿ 70 ಸೆಂಟ್ಸ್ ಸರಕಾರಿ ಜಾಗದಲ್ಲಿ ಅಗ್ನಿಶಾಮಕ ಠಾಣೆಗೆ ಪ್ರಸ್ತಾವನೆ ಹೋಗಿತ್ತು. ಆದರೆ ಅವರಿಗೆ ಇನ್ನೂ ಹೆಚ್ಚಿನ ಜಾಗದ ಅವಶ್ಯಕತೆ ಇದ್ದ ಹಿನ್ನೆಲೆಯಲ್ಲಿ ಮರ್ದಾಳಕ್ಕೆ ಹೋಗಿದ್ದಾರೆ. ಆದ್ದರಿಂದ ಮಣ್ಣಗುಂಡಿಯಲ್ಲಿರುವ ಈ ಜಾಗ ಹಾಗೂ ಅದರ ಸುತ್ತಮುತ್ತಲಿನ ಸರಕಾರಿ ಜಾಗದ ಗುರುತು ಮಾಡಿ ಮನೆ ನಿವೇಶನಕ್ಕೆ ಕಾದಿರಿಸಬೇಕೆಂದು ಪ್ರಸನ್ನಕುಮಾರ್ ಒತ್ತಾಯಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಆಟದ ಮೈದಾನಕ್ಕೆ ಜಾಗ ಗುರುತಿಸಿ:
ಇಚ್ಲಂಪಾಡಿಯಲ್ಲಿ ಯುವಕರು ಆಟವಾಡುತ್ತಿದ್ದ ಜಾಗದಲ್ಲಿ ಪಶುಸಂಗೋಪನೆ ಕಟ್ಟಡ ನಿರ್ಮಾಣವಾಗುತ್ತಿದೆ. ಆದ್ದರಿಂದ ಅಲ್ಲಿ ಆಟದ ಮೈದಾನಕ್ಕೆ ಜಾಗ ಗುರುತಿಸಿಕೊಡಬೇಕೆಂದು ಅಲೆಕ್ಸ್ ವರ್ಗೀಸ್, ಬಿಜುಕುಮಾರ್ ಒತ್ತಾಯಿಸಿದರು.
ಬೆಳೆಸಮೀಕ್ಷೆ-ಚರ್ಚೆ:
ಬೆಳೆ ಸಮೀಕ್ಷೆ ಕೃಷಿ ಇಲಾಖೆಯಿಂದಲೇ ಮಾಡಬೇಕೆಂದು ಗ್ರಾಮಸ್ಥ ವರ್ಗೀಸ್ ಅಬ್ರಹಾಂ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಕೃಷಿ ನಿರ್ದೇಶಕ ಟಿ.ಜೆ.ಚೆಲುವರಂಗಪ್ಪ ಅವರು, ಎಲ್ಲರ ಜಮೀನುಗಳಿಗೆ ಹೋಗಿ ಬೆಳೆ ಸಮೀಕ್ಷೆ ಮಾಡಲು ಕೃಷಿ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಆಪ್ ಡೌನ್ ಲೋಡ್ ಮಾಡಿಕೊಂಡು ರೈತರೇ ಬೆಳೆ ಸಮೀಕ್ಷೆ ಮಾಡಬಹುದಾಗಿದೆ. ಇಲ್ಲವೇ ಕಂದಾಯ ಇಲಾಖೆಯವರು ನೇಮಕ ಮಾಡಿದ ಖಾಸಗಿ ವ್ಯಕ್ತಿಗಳಿಂದ ಮಾಡಿಸಬಹುದು ಎಂದರು.
ಹೊಸಮಜಲು ಶಾಲೆಗೆ ದಾರಿ ಸಮಸ್ಯೆ:
ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಸಂದರ್ಭದಲ್ಲಿ ರಸ್ತೆ ಅಗೆದಿರುವುದರಿಂದ ಹೊಸಮಜಲು ಶಾಲೆಗೆ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ. ಅಕ್ಕಿ, ಅನಿಲ ಸಿಲಿಂಡರ್ ಹೊತ್ತುಕೊಂಡೇ ಬರುವಂತಹ ಪರಿಸ್ಥಿತಿ ಇದೆ. ಈ ಬಗ್ಗೆ ಗ್ರಾ.ಪಂ., ರಾಷ್ಟ್ರೀಯ ಹೆದ್ದಾರಿ ಇಲಾಖೆಯವರಿಗೂ ಮನವಿ ಮಾಡಲಾಗಿದೆ. ಇದನ್ನು ಕೂಡಲೇ ಸರಿಪಡಿಸಿಕೊಡಬೇಕೆಂದು ಹೊಸಮಜಲು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಬಾಣಜಾಲು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಉದಯಕುಮಾರ್ ಅವರು, ಗ್ರಾ.ಪಂ.ಮೂಲಕವೂ ಈ ವಿಚಾರವನ್ನು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರ ಗಮನಕ್ಕೆ ತರಲಾಗಿತ್ತು, ತಕ್ಷಣ ಸರಿಮಾಡಲು ಕೇಳಿಕೊಳ್ಳಲಾಗಿದೆ ಎಂದರು. ಹೊಸಮಜಲು ಶಾಲೆ ಸಂಪರ್ಕಿಸುವ ಇನ್ನೊಂದು ಬದಿಯ ರಸ್ತೆಯನ್ನು ಸಮರ್ಪಕವಾಗಿ ಸರಿಮಾಡಿಕೊಡಬೇಕೆಂದು ರಮೇಶ್ ಬಾಣಜಾಲು ಅವರು ಗ್ರಾ.ಪಂ.ಅಧ್ಯಕ್ಷರನ್ನು ಒತ್ತಾಯಿಸಿದರು.
ಇತರ ಬೇಡಿಕೆಗಳು:
ಸುದೆಗುಂಡಿಯಲ್ಲಿ ಮಾರ್ಗ ಕುಸಿದಿದ್ದು, ದುರಸ್ತಿಗೆ ಪಿಡಬ್ಲ್ಯುಡಿ ಇಲಾಖೆಗೆ ಬರೆಯಲು ನಿರ್ಣಯಿಸಲಾಯಿತು. ಕಟ್ಟೆಮಜಲು-ದಡಳ್‌ಪಳಿಕೆ ರಸ್ತೆಯಲ್ಲೇ ನೀರು ಹರಿಯುತ್ತಿದ್ದು ಚರಂಡಿ ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಬಾಣಂತಿಯರಿಗೆ ನೀಡುವ ಆಹಾರ ಪದಾರ್ಥಗಳನ್ನು ಕಿಟ್ ಮಾದರಿಯಲ್ಲಿ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಹೊಸಮಜಲು ಶಾಲೆಯ ಶೌಚಾಲಯ ಉದ್ಘಾಟನೆ ವೇಳೆ ಗ್ರಾ.ಪಂ.ಸದಸ್ಯರಿಗೆ ಮಾಹಿತಿ ನೀಡಿಲ್ಲ ಎಂದು ಸದಸ್ಯ ಕೆ.ಎಂ.ಹನೀಫ್ ಅಸಮಾಧಾನ ಸೂಚಿಸಿದರು.
ನೆಲ್ಯಾಡಿ ಹೊರಠಾಣೆ ಹೆಡ್‌ಕಾನ್ಸ್‌ಸ್ಟೇಬಲ್ ಪ್ರವೀಣ್, ಕೆಎಸ್‌ಆರ್‌ಟಿಸಿ ಸಂಚಾರ ನಿಯಂತ್ರಕ ಕುಶಾಲಪ್ಪ ಗೌಡ, ನೆಲ್ಯಾಡಿ ಶಾಖೆ ಉಪವಲಯಾರಣ್ಯಾಧಿಕಾರಿ ಸುಬ್ರಹ್ಮಣ್ಯ ಕೆ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ನಾಗವೇಣಿ, ಗ್ರಾಮ ಆಡಳಿತಾಧಿಕಾರಿಗಳಾದ ಸಿದ್ದಲಿಂಗ ಜಂಗಮಶೆಟ್ಟಿ, ನಾಗಸುಂದರ, ಸಮಾಜ ಕಲ್ಯಾಣ ಇಲಾಖೆಯ ಲೋಕೇಶ್, ಸಹಾಯಕ ಕೃಷಿ ನಿರ್ದೇಶಕ ಟಿ.ಜೆ.ಚೆಲುವರಂಗಪ್ಪ, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ, ಹಿರಿಯ ಆರೋಗ್ಯ ಸಹಾಯಕಿ ಅನ್ನಮ್ಮ ಕೆ.ಸಿ., ಸಿಆರ್‌ಪಿ ಪ್ರಕಾಶ್ ಬಾಕಿಲ, ಇಂಜಿನಿಯರ್ ಎಸ್.ಎಸ್.ಹುಕ್ಕೇರಿ, ಮೆಸ್ಕಾಂ ಜೆಇ ರಾಮಣ್ಣ ಅವರು ಇಲಾಖಾವಾರು ಮಾಹಿತಿ ನೀಡಿದರು.
ಗ್ರಾ.ಪಂ.ಉಪಾಧ್ಯಕ್ಷೆ ವನಿತಾ ಎಂ., ಸದಸ್ಯರಾದ ಜನಾರ್ದನ, ಮಹೇಶ್, ಭವಾನಿ, ಸುಧಾಕರ ಜಿ., ಲೋಕೇಶ್ ಬಿ., ಸವಿತಾ ಎಸ್., ಪುಷ್ಪಾ, ಹನೀಫ್ ಎಂ., ದೇವಕಿ, ಶೈಲಾ, ವಿಶ್ವನಾಥ ಗೌಡ, ಸಂಧ್ಯಾ ಪಿ.ಸಿ., ಕುರಿಯಾಕೋಸ್ ಯಾನೆ ರೋಯಿ, ದಿನೇಶ್‌ಕುಮಾರ್, ಡೈಸಿವರ್ಗೀಸ್, ರತ್ನಾವತಿ, ಕೆಡಿಪಿ ಸದಸ್ಯ ಗಿರೀಶ್ ಬದನೆ, ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಉಷಾ ಅಂಚನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ.ಸಿಬ್ಬಂದಿ ಕಸ್ತೂರಿ ವರದಿ ವಾಚಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೇವಿಕಾ ಸ್ವಾಗತಿಸಿದರು. ಸಿಬ್ಬಂದಿ ಪುರಂದರ ವಂದಿಸಿದರು.
ಗ್ಯಾರಂಟಿ, ಕೆಡಿಪಿ ಸದಸ್ಯರೂ ವೇದಿಕೆಗೆ ವಿಚಾರ-ಚರ್ಚೆ;
ಸಭೆ ಆರಂಭವಾಗುತ್ತಿದ್ದಂತೆ ಕೆಡಿಪಿ ಸದಸ್ಯ ಗಿರೀಶ್ ಬದನೆ ಹಾಗೂ ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಸತೀಶ್ ಇಚ್ಲಂಪಾಡಿ, ಉಷಾ ಅಂಚನ್ ಅವರನ್ನು ವೇದಿಕೆಗೆ ಆಹ್ವಾನಿಸುವಂತೆ ಗ್ರಾಮಸ್ಥರಾದ ವರ್ಗೀಸ್ ಅಬ್ರಹಾಂ, ಜಾರ್ಜ್‌ಕುಟ್ಟಿ ಉಪದೇಶಿ, ಅಲೆಕ್ಸ್ ವರ್ಗೀಸ್, ತೋಮಸ್ ಕೆ.ವಿ.ಮತ್ತಿತರರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನೋಡೆಲ್ ಅಧಿಕಾರಿ ಡಾ.ಅಜಿತ್ ಅವರು ಈ ಬಗ್ಗೆ ನಮಗೆ ಯಾವುದೇ ಗೈಡ್ಸ್‌ಲೈನ್ಸ್ ಬಂದಿಲ್ಲ ಎಂದರು. ಮತ್ತೆ ಚರ್ಚೆ ನಡೆಯುತ್ತಿದ್ದಂತೆ ಪಿಡಿಒ ದೇವಿಕಾ ಅವರು ಈ ಬಗ್ಗೆ ತಾ.ಪಂ.ಇಒ ಅವರಿಗೆ ಕರೆ ಮಾಡಿ ಸಲಹೆ ಕೇಳಿ, ಈ ವಿಚಾರ ಅಧ್ಯಕ್ಷರ ವಿವೇಚನೆಗೆ ಬಿಟ್ಟದ್ದು ಎಂದರು. ಗೈಡ್‌ಲೈನ್ಸ್ ಪ್ರಕಾರ ಆಹ್ವಾನಿಸುವಂತಿಲ್ಲ ಎಂದು ಅಧ್ಯಕ್ಷರು ಹೇಳಿದರೂ ಮತ್ತೆ ಚರ್ಚೆ ನಡೆದ ಹಿನ್ನೆಲೆಯಲ್ಲಿ ಮೂವರು ಸದಸ್ಯರನ್ನು ಅಧ್ಯಕ್ಷ ಉದಯಕುಮಾರ್ ಅವರು ವೇದಿಕೆಗೆ ಆಹ್ವಾನಿಸಿ ಚರ್ಚೆಗೆ ತೆರೆ ಎಳೆದರು.
ಮತ್ತೆ ಅನಧಿಕೃತ ಅಂಗಡಿಗಳಿಗೆ ಅವಕಾಶ ನೀಡಬಾರದು:
ಪೆರಿಯಶಾಂತಿ ಭಾಗದಲ್ಲಿದ್ದ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಅಲ್ಲಿ ಅಂಗಡಿಗಳಿಗೆ ಮತ್ತೆ ಗ್ರಾಮ ಪಂಚಾಯತ್ ಅವಕಾಶ ನೀಡಬಾರದು ಎಂದು ಗ್ರಾಮಸ್ಥ ಜಾನ್ಸನ್ ಗಲ್ಬಾವೋ, ಬಿಜುಕುಮಾರ್ ಮತ್ತಿತರರು ಒತ್ತಾಯಿಸಿದರು. ಪೊಟ್ಲಡ್ಕದಲ್ಲಿ ಪಿಡಬ್ಲ್ಯುಡಿ ಹೆದ್ದಾರಿ ಬದಿ ಮೂರ‍್ನಾಲ್ಕು ಅನಧಿಕೃತ ಅಂಗಡಿಗಳು ಇದ್ದು ಹೆದ್ದಾರಿಯಲ್ಲಿಯೇ ನಿಂತು ವ್ಯಾಪರ ಮಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಇಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥ ರಿತೇಶ್ ಒತ್ತಾಯಿಸಿದರು.