ಪುತ್ತೂರು: ರಿಯಲ್ ಎಸ್ಟೇಟ್ ಫ್ರೆಂಡ್ಸ್ ಪುತ್ತೂರು ಇದರ ಆಶ್ರಯದಲ್ಲಿ ಯು.ಆರ್ ಪ್ರಾಪರ್ಟಿಸ್, ಸಿಝ್ಲರ್ ಫ್ರೆಂಡ್ಸ್ ಸಾಮೆತ್ತಡ್ಕ ಹಾಗೂ ಕುಂಕುಮ್ ಅಸೋಸಿಯೇಟ್ಸ್ ಇವರ ಸಾರಥ್ಯದಲ್ಲಿ ಜು.27ರಂದು ಕಾರ್ಜಾಲು ಮೈದಾನದಲ್ಲಿ ವಿವಿಧ ಮನರಂಜನಾತ್ಮಕ ಕ್ರೀಡೆಗಳೊಂದಿಗೆ ನಡೆದ ಕೆಸರ್ಡೊಂಜಿ ದಿನ ಕ್ರೀಡಾಕೂಟಗಳು ಮೇಳೈಸಿದೆ.
ಸಿಂದೂರ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಆದರ್ಶ ಆಸ್ಪತ್ರೆಯ ಡಾ. ಎಂ.ಕೆ ಪ್ರಸಾದ್ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆಟಿ ಉತ್ತಮ ತಿಂಗಳು ಅಲ್ಲ ಎಂಬ ಲೆಕ್ಕಚಾರ ಹಿಂದಿನ ಕಾಲದಲ್ಲಿತ್ತು. ಆ ಸಮಯದಲ್ಲಿ ವಲಸೆ ಹೋಗುವ ಸಮಯವಾಗಿತ್ತು. ಇದಕ್ಕಾಗಿ ಕೆಲವೊಂದು ಕ್ರೀಡೆ ಮಾಡಲಾಗುತ್ತಿತ್ತು. ಅಂತಹ ಕ್ರೀಡೆಗಳನ್ನು ಕೆಸರುಗದ್ದೆ ಕ್ರೀಡೆ ಆಯೋಜಿಸುವ ಮುಖಾಂತರ ಇಂದಿನ ಮಕ್ಕಳಿಗೆ ಪುರಾತನ ಪದ್ದತಿಗಳನ್ನು ನೆನಪಿಸುವ ಕೆಲಸವಾಗುತ್ತದೆ. ಇಂದಿನ ಶಿಕ್ಷಣ ಪದ್ದತಿಯಲ್ಲಿ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ, ಪುರಾನಗಳು ದೊರೆಯದೇ ಇರುವ ಸಮಯದಲ್ಲಿ ಕೆಸರು ಗದ್ದೆ ಕ್ರೀಡೆಯ ಮೂಲಕ ಅರಿವು ಮೂಡಿಸುತ್ತಿರುವ ಕಾರ್ಯ ಶ್ಲಾಘಿಸಿದರು. ಇದು ಪುರಾತ ಸಂಸ್ಕೃತಿ ಉಳಿಸಿ, ಬೆಳೆಸಲು ಸಹಕಾರಿಯಾಗಿದ್ದು, ಪ್ರತಿವರ್ಷ ನಡೆಯಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ನಗರಸಭಾ ಸದಸ್ಯ ದಿನೇಶ್ ಕುಮಾರ್ ಶೇವಿರೆ ಮಾತನಾಡಿ, ಕೆಸರ್ಡೊಂಜಿನ ದಿನ ಕ್ರೀಡೆಯು ಉತ್ತಮ ಕ್ರೀಡೆಯಾಗಿದೆ. ಗದ್ದೆ ಕೆಲಸ ಮರೆತು ಹೋಗಬಾರದು. ಗದ್ದೆ ಕೃಷಿಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲು ಸಹಕಾರಿಯಾಗಲಿದೆ ಎಂದರು.
ಯು.ಆರ್ ಪ್ರಾಪರ್ಟಿಸ್ನ ಉಜ್ವಲ್ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ, ರಿಯಲ್ ಎಸ್ಟೇಟ್ ಉದ್ಯಮಿಗಳು ಮಣ್ಣಿನ ಉದ್ಯಮ ಮಾಡುವವರು. ಮಣ್ಣಿಗೆ ಗೌರವ ಸಮರ್ಪಿಸುವ ಉದ್ದೇಶದಿಂದ ಗೆಳೆಯರೆಲ್ಲ ಸೇರಿ ಕೆಸರ್ಡೊಂಜಿ ದಿನ ಕಾರ್ಯಕ್ರಮ ಆಯೋಜಿಸಲಾಗಿದೆ. ಆಟಿಯ ತಿಂಗಳಲ್ಲಿ ಯಾವುದೇ ಉತ್ತಮ ಕಾರ್ಯಕ್ರಮವಾಗಿ ಮಾಡಬೇಕು ಎಂಬ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಒಬ್ಬರ ಕಾರ್ಯಕ್ರಮ ಅಲ್ಲ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಗಳಿಸಿ, ಸಮಾಜದಲ್ಲಿ ಸಂಘಟನೆ ಮಾಡಲು ಒಗ್ಗಟ್ಟಿಗಾಗಿ ಮಾಡಿದ ಕಾರ್ಯಕ್ರಮವಾಗಿದೆ. ಇದರಲ್ಲಿ ಮಾರುಕಟ್ಟೆ ಮಾಡುವ ಉದ್ದೇಶವಿಲ್ಲ. ಈ ಕ್ರೀಡಾಕೂಟಕ್ಕೆ ಎಲ್ಲಾ ಭಾಗದ ಯುವಕರ ಸಹಕಾರ ದೊರೆತಿದೆ ಎಂದರು.
ಸಿಝ್ಲರ್ ಫ್ರೆಂಡ್ಸ್ನ ಪ್ರಸನ್ನ ಕುಮಾರ್ ಶೆಟ್ಟಿ, ಉದ್ಯಮಿಗಳಾದ ರಾಜ್ಶೇಖರ ಜೈನ್, ವಿಶ್ವಾಸ್ ಶೆಣೈ, ಗಿರಿಧರ ಹೆಗ್ಡೆ, ಕೆಮ್ಮಿಂಜೆ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ, ಚೆನ್ನಪ್ಪ ಗೌಡ ಗೆನಸಿನಕುಮೇರು, ಬಾಲಕೃಷ್ಣ ಗೌಡ ಬಾರ್ತಿಕುಮೇರು, ಸುಜಿತ್ ಕುಮಾರ್ ರೈ ಪಾಲ್ತಾಡು, ರಂಗನಾಥ ಕಾರಂತ್, ನಿತಿನ್ ಮಂಗಳ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುಂಕುಮ್ ಎಸೋಸಿಯೇಟ್ಸ್ನ ಸಂತೋಷ್ ಕುಮಾರ್ ರೈ ನಳೀಲು ಸ್ವಾಗತಿಸಿದರು. ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಶಿವಮಣಿ ಕಲಾತಂಡದ ಲೇಖನ್, ಕೀರ್ತನ್, ಲಿಖಿತ್, ಹೇಮಂತ್ ಪ್ರಾರ್ಥಿಸಿದರು. ಮನ್ಮಥ ಶೆಟ್ಟಿ ವಂದಿಸಿದರು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಕಾರ್ಜಾಲು ದೈವಸ್ಥಾನದ ಆಡಳಿತ ಮೊಕ್ತೇಸರ ಅಜಿತ್ ಕುಮಾರ್ ಜೈನ್ ಗದ್ದೆಗೆ ಹಾಲು ಹಾಗೂ ಸೀಯಾಳ ನೀರು ಎರೆದು ಕ್ರೀಡೆಗಳಿಗೆ ಚಾಲನೆ ನೀಡಿದರು. ನಂತರ ನಡೆದ ಕ್ರೀಡಾಕೂಟದಲ್ಲಿ ಮಕ್ಕಳು, ಮಹಿಳೆಯರು, ಪುರುಷರಿಗಾಗಿ ಪ್ರತ್ಯೇಕ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಬಾಲ್ ಪಾಸಿಂಗ್, ಲಿಂಬೆ ಚಮಚ, ಹಿಂಬದಿ ಓಟ, ಕಂಬಳ ಓಟ, ಗೂಟದ ಓಟ, ಹಿಂಬದಿ ಓಟ, ಮಡಿಕೆ ಒಡೆಯುವುದು, ಹಾಳೆ ಎಳೆಯುವುದು, ಅಟ್ಟಿ ಮಡಿಕೆ, ವಾಲಿಬಾಲ್, ಹಗ್ಗಜಗ್ಗಾಟ ಮೊದಲಾದ ಆಟೋಟಗಳು ನಡೆಯಿತು. ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗಾಗಿ ಪ್ರತ್ಯೇ ಪ್ರತ್ಯೇಕವಾಗಿ ನಡೆದ ಸ್ಪರ್ಧೆಗಳು ಕಣ್ಮನ ಸೆಳೆದವು. ಒಂದೆಡೆ ಗೆಲ್ಲುವ ತವಕ, ಇನ್ನೊಂದೆಡೆ ಕೆಸರಿನ ಗದ್ದೆಯಲ್ಲಿ ಆಟದ ಸಂಭ್ರಮದಲ್ಲಿದ್ದ ಸ್ಪರ್ಧಾಳುಗಳು ಸಂಭ್ರಮಿಸಿದರು. ಸುರಿವ ಮಳೆಯ ಮಧ್ಯೆಯೂ ಕೆಸರಿನ ಗದ್ದೆಯಲ್ಲಿ ಧುಮುಕಿ ಮೈ ಚಳಿ ಬಿಟ್ಟು ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದರು. ಮೈನವಿರೇಳಿಸುವ ಕೆಸರು ಗದ್ದೆ ಆಟಗಳು ಜನರ ಮನಸ್ಸು ಗೆದ್ದವು. ಎದ್ದೋ, ಬಿದ್ದೋ ಎಂಬಂತೆ ಕೆಸರಿನಲ್ಲಿ ಆಡಿದ ಜನರು ಸ್ಪರ್ಧೆ ಜತೆಗೆ ಆಟದಲ್ಲಿ ಸಂಭ್ರಮಿಸಿ ಮಿಂದೆದ್ದರು. ಕೆಸರುಗದ್ದೆ ಕ್ರೀಡೆಯಲ್ಲಿ ನೂರಾರು ಮಂದಿ ಉತ್ಸಾಹದಲ್ಲಿ ಭಾಗವಹಿಸಿ ಕೆಸರಿನಲ್ಲಿ ಮಿಂದೆದ್ದು ಸಂಭ್ರಮಿಸಿದರು.
ಸನ್ಮಾನ:
ದೈವ ನರ್ತಕರಾದ ಸುರೇಶ, ವಸಂತ, ಬಂಟ್ವಾಳದ ಹೂವಿನ ವ್ಯಾಪಾರಿ ಮೋಹಿದಬ್ಬು, ಗುರುಸ್ವಾಮಿ ರಮೇಶ್, ಚರುಮುರಿ ವ್ಯಾಪಾರಿಗಾಳದ ಪದ್ಮನಾಭ ಎನ್., ಕೃಷ್ಣಪ್ಪ ಗೌಡ, ಆಮ್ಲೇಟ್ ಗಾಡಿ ರಾಮರಾಯ ಪೈ, ಹಪ್ಪಳ ಸೆಂಡಿಗೆ ವ್ಯಾಪಾರಿ ವಿಜಯ ಪೈ, ಕಪಾಟು, ಲಾಕರ್ ತಯಾರಕ ಸಯ್ಯದ್ ಅಸ್ಲಾಂ, ಉರಗ ರಕ್ಷಕ ತೇಜಸ್, ಗಾರ್ಡನ್ ವೃತ್ತಿಗಾರ ಪದ್ಮನಾಭ ನಾಯ್ಕ, ಪತ್ರಿಕೆ ವಿತರಕ ವಿಶ್ವನಾಥ, ನಿವೃತ್ತ ಮುಖ್ಯಗುರು ಪ್ರೇಮ ಕುಮಾರಿ, ನೆಲ್ಲಿಕಟ್ಟೆ ಹಿಂದು ರುದ್ರಭೂಮಿ ಕರ್ತವ್ಯ ನಿರ್ವಹಿಸುವ ಸತೀಶ್ ಮಡಿವಾಳ, ದೈಹಿಕ ಶಿಕ್ಷಣ ಶಿಕ್ಷಕ ಮಾಧವ ಗೌಡ, ಚಮ್ಮಾರ ವೃತ್ತಿಯ ಪುರುಷೋತ್ತಮ ನಾೖಕ್, ಕಂಬಳ ಕ್ಷೇತ್ರದ ಕೇಶವ ಭಂಡಾರಿ ಕೈಪ ಹಾಗೂ ದೈವ ಚಾಕರಿ ಮಾಡುವ ಚಂದ್ರಶೇಖರ ಗೌಡರವರನ್ನು ಸನ್ಮಾನಿಸಲಾಯಿತು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು, ನಗರ ಸಭಾ ಸದಸ್ಯ ಜೀವಂಧರ್ ಜೈನ್, ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಚಿತ್ರನಟರಾದ ದೀಪಕ್ ರೈ ಪಾಣಾಜೆ, ರವಿ ರಾಮಕುಂಜ, ಬಿಜೆಪಿ ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನ್ಯಾಯವಾದಿ ಕವನ್ ನಾೖಕ್, ಉದ್ಯಮಿಗಳಾದ ಶಿವರಾಮ ಆಳ್ವ, ರತನ್ ನಾೖಕ್, ನಿತಿನ್ ಪಕ್ಕಳ ಸೇರಿದಂತೆ ಹಲವು ಮಂದಿ ಗಣ್ಯರು ಭೇಟಿ ನೀಡಿ ಶುಭಹಾರೈಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ರೀಡೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಿಧಿ ಶೋಧದಲ್ಲಿ ವಿಜೇತರಾದವರಿಗೆ ಒಂದು ಗ್ರಾಂ ಚಿನ್ನದ ನಾಣ್ಯ ಬಹುಮಾನ ನೀಡಲಾಯಿತು. ಹಗ್ಗ ಗುಂಪು ಆಟಗಳಾದ ಜಗ್ಗಾಟದಲ್ಲಿ ಪ್ರಥಮ ರೂ.25,000, ದ್ವಿತೀಯ ರೂ.15,000, ತೃತೀಯ ರೂ.5000, ಚತುರ್ಥ ರೂ.3000 ಮತ್ತು ಶಾಶ್ವತ ಫಲಕ, ವಾಲ್ಬಾಲ್ನಲ್ಲಿ ಪ್ರಥಮ ರೂ.10,000, ದ್ವಿತೀಯ ರೂ.5000, ಮಹಿಳಾ ಹಗ್ಗಜಗ್ಗಾಟದಲ್ಲಿ ಪ್ರಥಮ ರೂ.10,000 ಹಾಗೂ ದ್ವಿತೀಯ ರೂ.5000 ಹಾಗೂ ಅಟ್ಟಿಮಡಿಕೆ ವಿಜೇತರಿಗೆ ರೂ.10,000 ನಗದು ಹಾಗೂ ಶಾಶ್ವತ ಫಲಕ ನೀಡಿ ಗೌರವಿಸಲಾಯಿತು.
ಆಪರೇಶನ್ ಸಿಂಧೂರ್ ನ್ನು ನೆನಪಿಸುವಂತೆ ಕಾರ್ಯಕ್ರಮದ ವೇದಿಕೆಗೆ ಸಿಂಧೂರ ವೇದಿಕೆ ಎಂದು ನಾಮಕರಣ ಮಾಡಲಾಗಿತ್ತು. ಕ್ರೀಡಾಕೂಟದಲ್ಲಿ ಹುಂಡಿಗಳನ್ನು ಇಡಲಾಗಿದ್ದು, ಅದರಲ್ಲಿ ಸಂಗ್ರಹವಾದ ಮೊತ್ತವನ್ನು ಅನಾಥಾಶ್ರಮಕ್ಕೆ ದೇಣಿಗೆ ನೀಡಲು ನಿಧಿ ಸಂಗ್ರಹ ನಡೆಸಿರುವುದು ಕಾರ್ಯಕ್ರಮ ವಿಶೇಷತೆಯಾಗಿತ್ತು. ಕ್ರೀಡೆಯಲ್ಲಿ ಭಾಗವಹಿಸಿದವರಿಗೆ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಭೋಜನವನ್ನು ಏರ್ಪಡಿಸಿದ್ದರು.