ಉಪ್ಪಿನಂಗಡಿ: ದಲಿತರಿಗೆ ಸರಕಾರ ಜಮೀನು ನೀಡಿದರೂ ಅದರಲ್ಲಿ ಭೂ ಪರಿವರ್ತನೆಗೆ ಅವಕಾಶ ನೀಡುತ್ತಿಲ್ಲ. ಭೂ ಪರಿವರ್ತನೆಯಾಗದಿದ್ದರೆ ಅಲ್ಲಿ ಯಾವುದೇ ಕಟ್ಟಡ ಕಟ್ಟಲು ಗ್ರಾ.ಪಂ. ಪರವಾನಿಗೆ ನೀಡುವುದಿಲ್ಲ. ಆದ್ದರಿಂದ ಸರಕಾರದ ಜಮೀನು ಇದ್ದರೂ ಅವರು ಅದರಲ್ಲಿ ಮನೆಕಟ್ಟಿಕೊಳ್ಳದಂತಹ ಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥ ಗಣೇಶ್ ಕುಲಾಲ್ ಆರೋಪಿಸಿದರು.

ಬಜತ್ತೂರು ಗ್ರಾ.ಪಂ. ಅಧ್ಯಕ್ಷ ಗಂಗಾಧರ ಪಿ.ಎನ್. ಅವರ ಅಧ್ಯಕ್ಷತೆಯಲ್ಲಿ ಬಜತ್ತೂರು ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಬಜತ್ತೂರು ಗ್ರಾಮದ ಮೇಲೂರಿನಲ್ಲಿ ಅಣ್ಣು ಪರವರಿಗೆ ಸರಕಾರ ನೀಡಿದ ಜಮೀನನ್ನು ಅವರ ಮಕ್ಕಳಾದ ವೆಂಕಪ್ಪ, ಗಣೇಶ, ಓಬಯ್ಯರವರು ವೀಲು ನಾಮೆಯ ಮುಖಾಂತರ ಆಸ್ತಿ ಹಂಚಿಕೊಂಡಿದ್ದು, ಈ ಮೂವರು ಭೂ ಪರಿವರ್ತನೆಗೆ ಅರ್ಜಿಯನ್ನು ಹಾಕಿದ್ದಾರೆ. ಆದರೆ ಇವರ ಅರ್ಜಿ ಜಿಲ್ಲಾಧಿಕಾರಿಯವರಿಂದ ತಿರಸ್ಕೃತವಾಗಿದೆ ಎಂದು ಹೇಳಿದರಲ್ಲದೆ, ಈ ಬಗ್ಗೆ ಗ್ರಾಮ ಆಡಳಿತಾಧಿಕಾರಿ ನರಿಯಪ್ಪರವರಲ್ಲಿ ಮಾಹಿತಿ ಕೇಳಿದರು. ಅದಕ್ಕೆ ಉತ್ತರಿಸಿದ ನರಿಯಪ್ಪನವರು, ಇದು ತಿರಸ್ಕೃತವಾಗಿರುವ ಬಗ್ಗೆ ನಮಗೇನೂ ಹಿಂಬರಹ ಬರಲಿಲ್ಲ. ಅದು ನೇರವಾಗಿ ಜಿಲ್ಲಾಧಿಕಾರಿಯವರಿಂದ ತಿರಸ್ಕೃತವಾಗಿದೆ. ಇದು ಭೂ ಪರಭಾರೆ ನಿಷೇಧ (ಪಿ.ಟಿ.ಸಿ.ಎಲ್) ಕಾಯ್ದೆಯಡಿ ತಿರಸ್ಕೃತವಾಗಿದೆ. ದಲಿತರಿಗೆ ಸರಕಾರ ಜಮೀನು ನೀಡುವುದು ಕೃಷಿಗೆಂದು. ಅದನ್ನು ಪರಭಾರೆ ಮಾಡಲು ಆಗುವುದಿಲ್ಲ. ಹಾಗಾಗಿ ಅಲ್ಲಿ ಭೂ ಪರಿವರ್ತನೆಗೆ ಅವಕಾಶವಿಲ್ಲ ಎಂದರು.
ಈ ಸಂದರ್ಭ ಗಣೇಶ್ ಕುಲಾಲ್ ಮಾತನಾಡಿ, ಇವರು ಭೂ ಪರಿವರ್ತನೆಗೆ ಅರ್ಜಿ ಹಾಕಿದ್ದು ಮನೆ ಕಟ್ಟಲೆಂದು. ಭೂಮಿಯನ್ನು ಪರಭಾರೆ ಮಾಡಲು ಅಲ್ಲ. ಭೂ ಪರಿವರ್ತನೆ ಇಲ್ಲದಿದ್ದರೆ ಗ್ರಾ.ಪಂ. ಯಾವುದೇ ಕಟ್ಟಡ ಕಟ್ಟಲು ಪರವಾನಿಗೆ ನೀಡುವುದಿಲ್ಲ. ಸರಕಾರದ ಈ ಕಾನೂನಿನಿಂದ ಅವರಿಗೆ ಕೃಷಿ ಭೂಮಿಯಿದ್ದರೂ ಅಲ್ಲಿ ಮನೆ ಕಟ್ಟಿಕೊಳ್ಳಲಾಗದಂತಹ ಪರಿಸ್ಥಿತಿ ಎದುರಾಗಿದೆ. ಭೂ ಪರಭಾರೆ ನಿಷೇಧ ಕಾಯ್ದೆ ಇರುವುದು ಸರಿ. ಆದರೆ ಅದರಲ್ಲಿ ಮನೆಗೆ ಬೇಕಾದ 5 ಸೆಂಟ್ಸ್, 10 ಸೆಂಟ್ಸ್ ಜಾಗವನ್ನು ಭೂ ಪರಿವರ್ತನೆ ಮಾಡಿಕೊಡಬೇಕು. ಅಲ್ಲಿ ಮನೆ ಕಟ್ಟಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಅವರಿಗೆ ಅಲ್ಲಿ ಎದುರಾದರೆ ಆ ಭೂಮಿ ಇದ್ದು, ಏನು ಪ್ರಯೋಜನ ಎಂದರು. ಈ ಕಾಯ್ದೆಯಿಂದಾಗಿ ದಲಿತರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ಈ ಬಗ್ಗೆ ಸರಕಾರದ ಗಮನಕ್ಕೆ ತರಲು ನಿರ್ಣಯ ಅಂಗೀಕರಿಸಬೇಕೆಂದು ತಿಳಿಸಿದರು.
ಮೊದಲು ಕೃಷಿ ಎಂದು ಉಲ್ಲೇಖವಾಗಿದ್ದ ಕೆಲವರ ಪಹಣಿಯಲ್ಲಿ ಕೃಷಿ ಇದ್ದರೂ, ಈಗ ಕೃಷಿಯೇತರ ಎಂದು ನಮೂದಾಗಿದೆ. ಈ ರೀತಿಯಾದಲ್ಲಿ ಬೆಳೆ ವಿಮೆ ಕಟ್ಟಲು ಆಗುವುದಿಲ್ಲ. ಇದನ್ನು ಸರಿಪಡಿಸಲು ಗ್ರಾಮ ಆಡಳಿತಾಧಿಕಾರಿ ಕಚೇರಿಗೆ ಹೋಗಲು ಸರಕಾರ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಆದರೆ ಅಲ್ಲಿಗೆ ಹೋದರೆ ಅವರು ಇಲ್ಲಿ ಆಗುತ್ತಿಲ್ಲ ಎನ್ನುತ್ತಿದ್ದಾರೆ. ಬೆಳೆ ವಿಮೆ ಕಟ್ಟಲು ಜು.31 ಕೊನೆಯ ದಿನಾಂಕ ಎಂದು ಸರಕಾರ ತಿಳಿಸಿದೆ. ಇದರಿಂದ ಪಹಣಿಯಲ್ಲಿ ಕೃಷಿಯೇತರ ಎಂದು ನಮೂದಾಗಿರುವ ರೈತರಿಗೆ ಬೆಳೆ ವಿಮೆ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಗ್ರಾಮಸ್ಥ ಉದಯ ರಾವ್ ತಿಳಿಸಿದರು. ಇದಕ್ಕೆ ಉತ್ತರಿಸಿದ ಗ್ರಾಮ ಆಡಳಿತಾಧಿಕಾರಿ ನರಿಯಪ್ಪ, ಇದನ್ನು ಸರಿಪಡಿಸಲು ಸರಕಾರ ನಮಗೊಂದು ಆಪ್ ಬಿಡುಗಡೆಗೊಳಿಸಿ ಯೂಸರ್ ಐಡಿ, ಪಾಸ್ವರ್ಡ್ ಕೊಡುತ್ತದೆ. ಆದರೆ ಅದನ್ನು ಇನ್ನೂ ಕೊಟ್ಟಿಲ್ಲ. ಅದು ಇಲ್ಲದೆ ನಮಗೇನೂ ಮಾಡುವ ಹಾಗಿಲ್ಲ ಎಂದರು.
ಆಗ ಗ್ರಾಮಸ್ಥ ಗಣೇಶ್ ಕುಲಾಲ್ ಮಾತನಾಡಿ, ಪತ್ರಿಕಾ ಪ್ರಕಟಣೆಯಲ್ಲಿ ಗ್ರಾಮ ಆಡಳಿತಾಧಿಕಾರಿ ಬಳಿ ಹೋಗಿ ಎಂದು ಇದೆ. ಆದರೆ ನೀವು ಹೀಗೆ ಹೇಳುತ್ತಿದ್ದೀರಿ. ನಾವು ಯಾರ ಮಾತನ್ನು ಕೇಳಲಿ. ಇದನ್ನು ತಹಶೀಲ್ದಾರ್ ಅವರೇ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಬೇಕು. ಅಧಿಕಾರಿಗಳು ಮಾಡುವ ಎಡವಟ್ಟಿನಿಂದ ಜನರು ಸಂಕಷ್ಟಪಡಬೇಕಾಗಿದೆ ಎಂದರು. ಬೆಳೆ ಸಮೀಕ್ಷೆಯೂ ಸರಿಯಾಗಿ ನಡೆಯುತ್ತಿಲ್ಲ. ಒಂದು ವರ್ಷ ಪಹಣಿಯಲ್ಲಿ ಬೆಳೆ ನಮೂದಾಗಿದ್ದರೆ, ಮತ್ತೊಂದು ವರ್ಷ ಕೆಲವು ಪಹಣಿಗಳಿಂದ ಅದು ಹೋಗಿರುತ್ತದೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಾಗ ಉತ್ತರಿಸಿದ ನರಿಯಪ್ಪ ಅವರು ಬೆಳೆ ಸಮೀಕ್ಷೆ ನಮಗೆ ಸಂಬಂಧಿಸಿದ್ದಲ್ಲ. ಅದು ತೋಟಗಾರಿಕಾ ಇಲಾಖೆಗೆ ಸಂಬಂಧಿಸಿದ್ದು ಎಂದರು. ಆಗ ಗ್ರಾಮಸ್ಥರು ಈ ಬಗ್ಗೆ ತೋಟಗಾರಿಕಾ ಅಧಿಕಾರಿಯವರು ಉತ್ತರಿಸಲಿ. ಬೆಳೆ ಸಮೀಕ್ಷೆಗೆಂದು ಕೆಲವರನ್ನು ಇಲಾಖೆಗಳು ನೇಮಕ ಮಾಡುತ್ತಿದ್ದು, ಅವರು ಎಲ್ಲೋ ಕುಳಿತು ಬೆಳೆ ಸಮೀಕ್ಷೆ ಮಾಡುತ್ತಾರೆ. ಆದ್ದರಿಂದ ಅವರಿಗೆ ಖುಷಿ ಬಂದ ಹಾಗೆ ಬೆಳೆಯನ್ನು ನಮೂದಿಸುತ್ತಾರೆ. ಆದ್ದರಿಂದ ಬೆಳೆ ಸಮೀಕ್ಷೆಯನ್ನು ತೋಟಗಾರಿಕಾ ಸಿಬ್ಬಂದಿಯೇ ಮಾಡಬೇಕು. ಅದಕ್ಕಾಗಿ ಹೊರಗಿನ ಜನರನ್ನು ನೇಮಕ ಮಾಡುವುದು ಬೇಡ ಎಂದರು. ದ.ಕ. ಜಿಲ್ಲೆಯಲ್ಲಿ ಹೆಚ್ಚಾಗಿ ಅಡಿಕೆಯಂತಹ ಬಹು ವಾರ್ಷಿಕ ಬೆಳೆಯಿದ್ದು, ಆದ್ದರಿಂದ ಇಲ್ಲಿ ಪ್ರತಿ ವರ್ಷ ಬೆಳೆ ಸಮೀಕ್ಷೆಯ ಅಗತ್ಯವಿಲ್ಲ ಎಂಬ ಮಾತುಗಳು ಸಭೆಯಲ್ಲಿ ಕೇಳಿ ಬಂದವು. ಇದಕ್ಕೆ ಉತ್ತರ ನೀಡಿದ ತೋಟಗಾರಿಕಾ ಇಲಾಖೆಯ ಅಧಿಕಾರಿ ರವಿರಾಜ್ ರೈ, ನಮ್ಮಲ್ಲಿ ಸಿಬ್ಬಂದಿ ಕೊರತೆಯಿದೆ ಎಂದು ಸಭೆಯ ಗಮನಕ್ಕೆ ತಂದರು.
ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ವಿತರಿಸುವ ಯೋಜನೆ ಇದೆ. ಸರಕಾರ ಮೊಟ್ಟೆಗೆ ಎಷ್ಟು ರೂಪಾಯಿ ನೀಡುತ್ತಿದೆ. ಇದರಿಂದ ಇಂದಿನ ದರದಲ್ಲಿ ಮೊಟ್ಟೆ ವಿತರಿಸಲು ಸಾಧ್ಯವೇ ಎಂದು ಗ್ರಾಮಸ್ಥ ಮಹೇಂದ್ರವರ್ಮ ಪಡ್ಪು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಶಿಕ್ಷಣ ಇಲಾಖೆಯ ಸಿಆರ್ಪಿ ಮಂಜುನಾಥ್ ಕೆ.ವಿ., ಸರಕಾರವು ಒಂದು ಮೊಟ್ಟೆಗೆ 5.20 ರೂ. ನೀಡುತ್ತಿದೆ. ಇದರಲ್ಲಿ ಐದು ರೂಪಾಯಿ ಮೊಟ್ಟೆಗೆ ಹಾಗೂ 20 ಪೈಸೆ ಸಾಗಾಟ ವೆಚ್ಚ ಎಂದರು. ಆಗ ಮಾತನಾಡಿದ ಗ್ರಾಮಸ್ಥರು ಈಗ ಮೊಟ್ಟೆಯ ಮಾರುಕಟ್ಟೆ ದರವು ಆರರಿಂದ ಆರೂವರೆ ರೂಪಾಯಿಯವರೆಗೆ ಇದೆ. ಇದರಿಂದ ಮೊಟ್ಟೆ ಖರೀದಿಸಲು ಸಾಧ್ಯವೇ ಎಂದು ಕೇಳಿದಾಗ ಉತ್ತರಿಸಿದ ಮಂಜುನಾಥ್ ಕೆ.ವಿ., ಹೆಚ್ಚುವರಿ ಮೊತ್ತವನ್ನು ದಾನಿಗಳಿಂದ ಭರಿಸಲು ಸರಕಾರ ತಿಳಿಸುತ್ತದೆ ಎಂದರು. ಈ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿ ಪ್ರತಿ ತಿಂಗಳು ಇದನ್ನು ದಾನಿಗಳಿಂದ ಭರಿಸಲು ಸಾಧ್ಯವಾಗುತ್ತಿಲ್ಲ. ಕೆಲವೊಂದು ಶಾಲೆಗೆ ತಿಂಗಳಿಗೆ ಒಂದೂವರೆ ಸಾವಿರದಷ್ಟು ಹೆಚ್ಚುವರಿ ಹೊರೆಯಾಗುತ್ತಿದೆ ಎಂದರು. ಆಗ ಗಣೇಶ್ ಕುಲಾಲ್ ಮಾತನಾಡಿ, ನಾವು ದಾನಿಗಳಿಂದ ಭರಿಸುವುದಾದರೆ ಸರಕಾರ ನಾವು ಕೊಟ್ಟ ಯೋಜನೆ ಎಂದು ಹೇಳುವುದು ಯಾಕೆ. ಇಂದಿನ ಮೊಟ್ಟೆಯ ಮಾರುಕಟ್ಟೆ ದರದಷ್ಟೇ ದರವನ್ನು ಶಾಲೆಗಳಿಗೆ ನೀಡುವಂತೆ ಸರಕಾರದ ಗಮನಕ್ಕೆ ತನ್ನಿ ಎಂದು ಈ ಬಗೆಗಿನ ಚರ್ಚೆಗೆ ತೆರೆ ಎಳೆದರು. ಮಕ್ಕಳಿಂದ ಶಾಲೆಗಳ ಶೌಚಾಲಯ ತೊಳೆಯಬಾರದೆಂಬ ನಿಯಮವನ್ನು ಸರಕಾರ ಜಾರಿಗೆ ತಂದಿದೆ. ಆದರೆ ಅಲ್ಲಿ ಶೌಚಾಲಯ ತೊಳೆಯಲು ಬದಲಿ ವ್ಯವಸ್ಥೆ ಏನು ಮಾಡಲಾಗಿದೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಅದಕ್ಕೆ ಮಂಜುನಾಥ್ ಕೆ.ವಿ ಅವರು ಬದಲಿ ವ್ಯವಸ್ಥೆ ಏನೂ ಮಾಡಿಲ್ಲ ಎಂದು ಉತ್ತರಿಸಿದರು. ಅದಕ್ಕೆ ಗ್ರಾಮಸ್ಥರು ಹಾಗಾದರೆ ಶೌಚಾಲಯವನ್ನು ಯಾರು ತೊಳೆಯಬೇಕು. ಶಿಕ್ಷಕರು ತೊಳೆಯಬೇಕೆ ಎಂದು ಪ್ರಶ್ನಿಸಿದರು.
ಬಜತ್ತೂರು ಗ್ರಾ.ಪಂ.ನಲ್ಲಿ ಅಂಬೇಡ್ಕರ್ ವಸತಿ ಶಾಲೆಗೆ ಜಾಗ ಕಾಯ್ದಿರಿಸಲಾಗಿದೆ. ಅದಕ್ಕೆ 22 ಕೋ.ರೂ. ಅನುದಾನವೂ ಬಿಡುಗಡೆಗೊಂಡಿದೆ. ಈ ಯೋಜನೆ ನಮ್ಮ ಗ್ರಾ.ಪಂ.ನಲ್ಲೇ ಅನುಷ್ಠಾನವಾಗಬೇಕು. ಆದರೆ ಈಗ ಇದು ನಮ್ಮ ಗ್ರಾ.ಪಂ. ವ್ಯಾಪ್ತಿಯಿಂದ ಕೈ ತಪ್ಪಿ ಹೋಗುವ ಭೀತಿ ಇದೆ ಎಂದು ಗ್ರಾಮಸ್ಥ ವಿಲ್ಫ್ರೇಡ್ ಡಿಸೋಜ ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಗ್ರಾ.ಪಂ. ಸದಸ್ಯ ಸಂತೋಷ್ ಕುಮಾರ್ ಪಂರ್ದಾಜೆ ಉತ್ತರಿಸಿ, ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಇಲ್ಲಿ ಅಂಬೇಡ್ಕರ್ ವಸತಿ ಶಾಲೆಗೆಂದು ಜಮೀನು ಕಾಯ್ದಿರಿಸಲಾಗಿದೆ. ಈ ಬಗ್ಗೆ ಸ್ಥಳ ತನಿಖೆಗೆ ಇಲಾಖಾಧಿಕಾರಿಗಳು ಬಂದಿದ್ದಾರೆ. ಮಣ್ಣಿನ ಪರೀಕ್ಷೆಯೂ ನಡೆದಿದೆ. ಈಗಿನ ಬೆಳವಣಿಗೆಗಳ ಬಗ್ಗೆ ಮಾಹಿತಿಯಿಲ್ಲ. ಈಗಿನ ಶಾಸಕರ ಅನುದಾನದಲ್ಲಿ ಯಾವುದೇ ಕಾಮಗಾರಿ ನಡೆದರೂ, ಗುದ್ದಲಿ ಪೂಜೆ ನಡೆದರೂ ಗ್ರಾ.ಪಂ.ಗೆ ಮಾಹಿತಿ ದೊರಕುತ್ತಿಲ್ಲ ಎಂದರು.
ಅಂಗಡಿಗಳಲ್ಲಿ ಅವಧಿ ಮುಗಿದ ಹಾಲು, ಮೊಸರನ್ನು ಮಾರಾಟ ಮಾಡಲಾಗುತ್ತಿದೆ ಎಂದು ಉದಯ ರಾವ್ ಆರೋಪಿಸಿದಾಗ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಮಾತನಾಡಿ, ಹಾಗೆ ನಡೆದರೆ ಅವುಗಳನ್ನು ನಮಗಿಲ್ಲದಿದ್ದರೆ, ಗ್ರಾ.ಪಂ. ಗಮನಕ್ಕೆ ತನ್ನಿ. ನಾವು ಅಲ್ಲಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು. ಗ್ರಾಮ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾದ ಬಳಿಕ ಅವರು ಈ ರೀತಿ ಮಾಡುತ್ತಾರೆಯೇ? ಮೊದಲು ಗ್ರಾ.ಪಂ. ಇಲ್ಲಿನ ಎಲ್ಲಾ ಅಂಗಡಿಗಳಿಗೆ ಈ ಬಗ್ಗೆ ನೊಟೀಸ್ ನೀಡಲಿ ಎಂಬ ಆಗ್ರಹ ಸಭೆಯಲ್ಲಿ ಕೇಳಿ ಬಂತು. ಈ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.
ಬೆದ್ರೋಡಿಯಲ್ಲಿ ಅನಧಿಕೃತ ಅಂಗಡಿಯೊಂದಿದ್ದು, ಆ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ಅಲ್ಲಿ ಬೆದ್ರೋಡಿ- ರೆಂಜಾಳ- ಜಾಣವಾಲು ರಸ್ತೆಯ ಅಭಿವೃದ್ಧಿಗೆ ಅಲ್ಲಿನ ವ್ಯಕ್ತಿಯೋರ್ವರು ತೊಡಕಾಗಿದ್ದಾರೆ ಎಂಬ ಆರೋಪ ಸಭೆಯಲ್ಲಿ ಕೇಳಿ ಬಂತು. ಇದಕ್ಕೆ ಗ್ರಾ.ಪಂ. ಅಧ್ಯಕ್ಷ ಗಂಗಾಧರ ಪಿ.ಎನ್. ಉತ್ತರಿಸಿ, ಅಲ್ಲಿ ಸ್ವಲ್ಪ ಭಾಗ ರಸ್ತೆಯು ಒಬ್ಬರ ವರ್ಗ ಜಾಗದಲ್ಲಿ ಹಾದು ಹೋಗುತ್ತಿದೆ. ಅಲ್ಲಿ ಅವರು ಅಭಿವೃದ್ಧಿ ನಡೆಸಲು ಬಿಡುತ್ತಿಲ್ಲ. ಉಳಿದ ರಸ್ತೆಯನ್ನು ನಾವು ಅಭಿವೃದ್ಧಿ ಪಡಿಸುತ್ತೇವೆ ಎಂದರು.
ಮೆಸ್ಕಾಂನ ಎಇ ನಿತಿನ್ ಕುಮಾರ್ ಮಾತನಾಡಿ, ಕೊಯಿಲದಲ್ಲಿ ಸಬ್ಸ್ಟೇಶನ್ನ ಕಾಮಗಾರಿಗೆ ಶೇ.60ರಷ್ಟು ಮುಗಿದಿದೆ. ಮುಂದಿನ ಡಿಸೆಂಬರ್, ಜನವರಿ ತಿಂಗಳಲ್ಲಿ ಇದು ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ಅಲ್ಲಿ ಸಬ್ ಸ್ಟೇಶನ್ ನಿರ್ಮಾಣವಾದಲ್ಲಿ ಬಜತ್ತೂರು ಗ್ರಾಮದಲ್ಲಿರುವ ಲೋ ವೋಲ್ಟೇಜ್ ಸಮಸ್ಯೆ ಬಗೆಹರಿಯಲಿದೆ ಎಂದರಲ್ಲದೆ, ತೀರಾ ಅಗತ್ಯ ಕಂಡು ಬಂದ ಗ್ರಾಮದ ಎರಡು ಕಡೆಗಳಲ್ಲಿ 25 ವರ್ಷಗಳ ಮೊದಲಿನ ತಂತಿಗಳನ್ನು ಬದಲಾಯಿಸಲಾಗಿದೆ ಎಂದು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ವಿಮಲ, ಸದಸ್ಯರಾದ ಮೋನಪ್ಪ ಗೌಡ, ಸಂತೋಷ್ ಕುಮಾರ್, ಉಮೇಶ್ ಓಡ್ರಪಾಲ, ಗಂಗಾಧರ ಕೆ.ಎಸ್., ಸ್ಮಿತಾ, ರತ್ನಾ, ಪ್ರೆಸಿಲ್ಲಾ ಡಿಸೋಜ, ಅರ್ಪಿತಾ, ಪ್ರೇಮ ಬಿ. ಉಪಸ್ಥಿತರಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಚರ್ಚಾ ನಿಯಂತ್ರಣಾಧಿಕಾರಿಯಾಗಿ ಸಭೆಯನ್ನು ಮುನ್ನಡೆಸಿದರು. ಗ್ರಾ.ಪಂ. ಪಿಡಿಒ ಚಂದ್ರಮತಿ ಕೆ. ಸ್ವಾಗತಿಸಿದರು. ಕಾರ್ಯದರ್ಶಿ ಕೊರಗಪ್ಪ ಕೆ. ವಂದಿಸಿದರು.