ಪುತ್ತೂರು: ತುಳುನಾಡಿನ ದೈವಾಂಶ ಸಂಭೂತ ವೀರ ಪುರುಷರಾದ ಕೋಟಿ ಚೆನ್ನಯರ ಆರಾಧನಾ ಕ್ಷೇತ್ರವಾಗಿರುವ ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿಯಲ್ಲಿ ಜು.29ರಂದು ನಾಗರ ಪಂಚಮಿ ಆಚರಣೆ ನಡೆಯಿತು.

ಅರ್ಚಕ ಪ್ರಕಾಶ ನಕ್ಷತ್ರಿತ್ತಾಯ ಕೊಡ್ಲಾರುರವರ ನೇತೃತ್ವದಲ್ಲಿ ಬೆಳಿಗ್ಗೆ ಶ್ರೀ ನಾಗದೇವರಿಗೆ ಹಾಲಿನ ಅಭಿಷೇಕ, ಸೀಯಾಳಾಭಿಷೇಕದೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಗರಡಿ ವಠಾರದ ನೂರಾರು ಮಂದಿ ಭಕ್ತಾಧಿಗಳು ಸೇರಿದಂತೆ ಊರ ಪರವೂರ ಭಕ್ತಾಧಿಗಳು ನಾಗದೇವರಿಗೆ ಹಾಲು, ಸೀಯಾಳ ಅರ್ಪಿಸಿದರು.
ಈ ಸಂದರ್ಭದಲ್ಲಿ ಪರ್ಪುಂಜ ಸ್ನೇಹ ಯುವಕ ಮಂಡಲ, ಸ್ನೇಹ ಯುವತಿ ಮಂಡಲದ ಪದಾಧಿಕಾರಿಗಳು, ಸದಸ್ಯರು, ಗ್ರಾಮದ ಹಾಗೂ ಊರ ಪರವೂರ ಗಣ್ಯರು ಭಾಗವಹಿಸಿದ್ದರು. ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ಭಕ್ತಾಧಿಗಳನ್ನು ಸ್ವಾಗತಿಸಿ, ಪ್ರಸಾದ ನೀಡಿ ಸತ್ಕರಿಸಿದರು. ಹರ್ಷಿತ್ ಕುಮಾರ್ ಕೂರೇಲು ಸಹಕರಿಸಿದ್ದರು.