ಪುತ್ತೂರು: ಕರ್ನಾಟಕ ದೇವಸ್ಥಾನಗಳಲ್ಲಿ 2025ರ ಅ.15ರಿಂದ ನೀರಿನ ಬಾಟಲಿ ಸೇರಿದಂತೆ ಎಲ್ಲಾ ರೀತಿಯ ಪ್ಲಾಸ್ಟಿಕ್ಗಳನ್ನು ನಿಷೇಧ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ಮಾತ್ರವಲ್ಲದೆ, ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿಯೂ ಎಲ್ಲಾ ಬಗೆಯ ಪ್ಲಾಸ್ಟಿಕ್ ನಿಷೇಧಿಸಿ ಆದೇಶ ಅಹೊರಡಿಸಲಾಗಿದ್ದು ಇದಕ್ಕೆ ಪೂರಕವಾಗಿ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲೂ ಪ್ಲಾಸ್ಟಿಕ್ ನಿಷೇಧ ಮಾಡುವಲ್ಲಿ ಭಕ್ತರು ಸಹಕಾರ ನೀಡುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ವಿನಂತಿಸಿದ್ದಾರೆ.
ಅವರು ಮಾಧ್ಯಮದೊಂದಿಗೆ ಮಾತನಾಡಿ, ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸುವಂತೆ ಸರಕಾರ ಸುತ್ತೋಲೆ ಹೊರಡಿಸಿದೆ. ಅದರಂತೆ ಮಹಾಲಿಂಗೇಶ್ವರ ದೇವಸ್ಥಾನದಲ್ಲೂ ಪ್ಲಾಸ್ಟಿಕ್ ನಿಷೇಧ ಮಾಡಲಿದ್ದೇವೆ. ದೇವಳದಿಂದ ಪ್ರಸಾದ ವಿತರಣೆ, ವಿಶೇಷ ಪೂಜೆ, ರುದ್ರಾಭಿಷೇಕ ಸಹಿತ ಇತರ ಸೇವೆಗಳ ಪ್ರಸಾದ ವಿತರಣೆಯಲ್ಲಿ ಪ್ಲಾಸ್ಟಿಕ್ ಬಳಸುವುದಿಲ್ಲ. ಅದೆ ರೀತಿ ಭಕ್ತರು ಕೂಡಾ ದೇವಸ್ಥಾನಕ್ಕೆ ಬರುವಾಗ ಪ್ಲಾಸ್ಟಿಕ್ ಚೀಲ ತರದಂತೆ ವಿನಂತಿಸುತ್ತೇವೆ ಎಂದ ಅವರು ವಿಶೇಷ ಪ್ರಸಾದ, ಸರ್ವ ಸೇವೆಗೆ ದೇವಳದಿಂದ ಬಟ್ಟೆ ಚೀಲ ಉಚಿತವಾಗಿ ನೀಡಲಾಗುತ್ತದೆ. ಇತರೇ ರುದ್ರಾಭಿಷೇಕ, ಕುಂಕುಮಾರ್ಚನೆ, ಅಪ್ಪಕಜ್ಜಾಯ, ಪಂಚಕಜ್ಜಾಯಗಳಿಗೆ ದೇವಳದ ಕೌಂಟರ್ ನಲ್ಲಿ ರೂ. 5 ರೂಪಾಯಿಗೆ ಬಟ್ಟೆಚೀಲವನ್ನು ಭಕ್ತರು ಉಪಯೋಗಿಸುವಂತೆ ಅವರು ವಿನಂತಿಸಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿನಯ ಸುವರ್ಣ, ಸುಭಾಷ್ ರೈ ಬೆಳ್ಳಿಪ್ಪಾಡಿ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ಉಪಸ್ಥಿತರಿದ್ದರು.
ಯಾವ್ಯಾವ ಪ್ಲಾಸ್ಟಿಕ್ ನಿಷೇಧ?
ದೇವಸ್ಥಾನಗಳಿಗೆ ಹಣ್ಣುಕಾಯಿ ತರುವಾಗ ತೆಂಗಿನಕಾಯಿ ಅಥವಾ ಪೂಜಾ ಸಾಮಾಗ್ರಿಗಳನ್ನು ಮಾರಾಟ ಮಾಡುವವರು ಪ್ಲಾಸ್ಟಿಕ್ ಕವರ್ಗಳಲ್ಲಿಯೇ ಅವುಗಳನ್ನು ಹಾಕಿ ಕೊಡುತ್ತಾರೆ. ಇನ್ನು ನಾನಾ ಪುಣ್ಯಕ್ಷೇತ್ರಗಳಲ್ಲಿರುವ ದೇವಸ್ಥಾನಗಳಿಗೆ ಬರುವ ಪ್ರವಾಸಿಗರು ತಮ್ಮೊಂದಿಗೆ ನೀರಿನ ಬಾಟಲಿಗಳನ್ನು ತಂದಿರುತ್ತಾರೆ. ದೇವಸ್ಥಾನಗಳಲ್ಲಿ ಪ್ರಸಾದ ವಿನಿಯೋಗಕ್ಕೂ ಒಮ್ಮೊಮ್ಮೆ ಪ್ಲಾಸ್ಟಿಕ್ ಕವರ್ಗಳು, ಪ್ಲಾಸ್ಟಿಕ್ ಬಾಕ್ಸ್ ಅಥವಾ ಪ್ಲಾಸ್ಟಿಕ್ ಬಟ್ಟಲುಗಳು, ಪಾನಕ ಮುಂತಾದವುಗಳಿಗಾಗಿ ಪ್ಲಾಸ್ಟಿಕ್ ಲೋಟಗಳನ್ನು ಬಳಸುತ್ತಾರೆ. ಇವೆಲ್ಲವನ್ನು ನಿಷೇಧಿಸಲಾಗಿದೆ. ಭಕ್ತರು ದೇವಸ್ಥಾನಕ್ಕೆ ಪ್ಲಾಸ್ಟಿಕ್ ತಂದಲ್ಲಿ ದೇವಳದ ಕಡೆಯಿಂದ ಅವರಿಗೆ ಪ್ಲಾಸ್ಟಿಕ್ ನಿಷೇಧದ ಅರಿವು ಮೂಡಿಸುವ ಕಾರ್ಯ ಈಗಿಂದಲೇ ಆರಂಭಗೊಳಿಸಲಾಗುವುದು. ದೇವಳದಲ್ಲಿ ನಾಮಫಲಕ ಹಾಕಲಾಗುವುದು, ಪಕ್ಕದಲ್ಲಿರುವ ಅಂಗಡಿಗಳಲ್ಲೂ ನಾಮಫಲಕ ಅಳವಡಿಸಲಾಗುವುದು ಎಂದು ದೇವಳದ ಕಾರ್ಯನಿರ್ವಾಹಣಾಧಿಕಾರಿ ಕೆ.ವಿ ಶ್ರೀನಿವಾಸ ತಿಳಿಸಿದ್ದಾರೆ.