ಪುತ್ತೂರು: ಅಕ್ಷಯ ಕಾಲೇಜಿನ ಸಭಾಂಗಣದಲ್ಲಿ ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಹಾಗೂ ಅಕ್ಷಯ ಕಾಲೇಜು ಪುತ್ತೂರು ಇದರ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಐಕ್ಯೂಎಸಿ ಆಶ್ರಯದಲ್ಲಿ ಜು.30ರಂದು ಕಾಲೇಜು ಸಭಾಂಗಣದಲ್ಲಿ ವನಮಹೋತ್ಸವ ಕಾರ್ಯಕ್ರಮವು ಜರಗಿತು.

ಅಕ್ಷಯ ಸಮೂಹ ಸಂಸ್ಥೆಗಳ ಚೇರ್ಮನ್ ಜಯಂತ್ ನಡುಬೈಲುರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಕಾಡನ್ನು ಬೆಳೆಸಿ ನಾಡನ್ನು ಉಳಿಸಿ ಎಂಬುದಾಗಿ ಎಷ್ಟೇ ಅಭಿಯಾನ ನಡೆಸಿದರೂ ಮನುಷ್ಯ ಮಾತ್ರ ಆಧುನಿಕಯತೇಯ ಜೀವನದಿಂದ ಪ್ರಕೃತಿಯ ನಾಶವಾಗಿದೆ. ಹಿಂದಿನ ಹಾಗೂ ಇಂದಿನ ಜೀವನದಲ್ಲಿ ಅಜಗಜಾಂತರ ವ್ಯತ್ಯಾಸವಿದ್ದು, ಪ್ರಕೃತಿಯ ನಾಶದಿಂದಾಗಿ ಮಾನವನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದರು.
ಪುತ್ತೂರು ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಸುಬ್ಬಯ್ಯ ನಾೖಕ್ ಮಾತನಾಡಿ, ವನಮಹೋತ್ಸವ ಸಂದರ್ಭ ಅಕ್ಷಯ ಕಾಲೇಜಿನ ವೇದಿಕೆ ಗಿಡಗಳ ಆಸ್ವಾದದಿಂದ ಸುತ್ತುವರಿಯಲ್ಪಟ್ಟಿದೆ. ವನಮಹೋತ್ಸವ ದಿನದಂದು ಕೇವಲ ಗಿಡ ನೆಡುವ, ವಿತರಿಸುವ ಕಾರ್ಯಕ್ರಮವಾಗದೆ ಗಿಡಗಳನ್ನು ಬೆಳೆಸಿ ಅವನ್ನು ಪೋಷಿಸುವ ಕಾರ್ಯಕ್ರಮವಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲು ಮಾತನಾಡಿ, ಅಂತರ್ರಾಷ್ಟ್ರೀಯ ಸಂಸ್ಥೆಯಾಗಿರುವ ಈ ರೋಟರಿ ಸಂಸ್ಥೆಯು ಸರಕಾರದಿಂದ ಆಗದ ಬ್ಲಡ್ ಬ್ಯಾಂಕ್, ಡಯಾಲಿಸಿಸ್ ಕೇಂದ್ರ, ಕಸದಿಂದ ಗ್ಯಾಸ್ ಉತ್ಪದನಾ ಘಟಕ ಹೀಗೆ ಹಲವು ಶಾಶ್ವತ ಕೊಡುಗೆಗಳನ್ನು ಸಮಾಜಕ್ಕೆ ನೀಡಿದೆ. ವನಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ಗಿಡಗಳನ್ನು ನೀಡಲಾಗುತ್ತಿದ್ದು, ಅವುಗಳ ಪೋಷಣೆ ಮಾಡಬೇಕು ಜೊತೆಗೆ ರಕ್ತದಾನ ಮಾಡುವ ಕಾಯಕಕ್ಕೆ ಮುಂದಾಗಬೇಕು ಎಂದರು.

ಪುತ್ತೂರು ರೇಂಜ್ ಫಾರೆಸ್ಟ್ ಆಫೀಸರ್ ಕಿರಣ್ ಬಿ.ಎಂ, ಮಾತನಾಡಿ, ಪ್ರಸ್ತುತ ಜಗತ್ತು ಆಧುನಿಕತೆಯತ್ತ ಹೋಗುತ್ತಿದ್ದು ಪ್ರಕೃತಿ ಎಂಬುದು ನೈಸರ್ಗಿಕ ಅಧಃಪತನದತ್ತ ಜಾರುತ್ತಿದೆ. ಕಾಂಕ್ರೀಟೀಕರಣ, ಇಂಟರ್‌ಲಾಕ್, ಡಾಮರ್ ಅಳವಡಿಕೆಯಿಂದ ಮಳೆ ನೀರು ಭೂಮಿ ಒಡಲಿಗೆ ಸೇರದೆ ನೇರವಾಗಿ ಸಮುದ್ರಕ್ಕೆ ಸೇರುತ್ತಿದ್ದು ಜೊತೆಗೆ ಪ್ಲಾಸ್ಟಿಕ್ ತ್ಯಾಜ್ಯ ಕೂಡ ಮನುಷ್ಯನ ಆರೋಗ್ಯದ ವ್ಯತ್ಯಯದಲ್ಲಿ ಪರೋಕ್ಷವಾಗಿ ಕಾರಣವಾಗುತ್ತಿದೆ ಎಂದರು.

ವನಮಹೋತ್ಸವದ ಸಂದರ್ಭ ನೂರಕ್ಕೂ ಮಿಕ್ಕಿ ಗುಲಾಬಿ ಗಿಡಗಳನ್ನು ನೀಡಿದ ಕ್ಲಬ್ ಸದಸ್ಯ ರಘುನಾಥ್ ಕೈಂದಾಡಿರವರಿಗೆ ಶಾಲು ಹೊದಿಸಿ ಗೌರವಿಸಲಾಯಿತು. ಅಕ್ಷಯ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಅಕ್ಷಯ ಕಾಲೇಜ್ ಪ್ರಾಂಶುಪಾಲ ಸಂಪತ್ ಪಕ್ಕಳ ಸ್ವಾಗತಿಸಿ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಕಾರ್ಯದರ್ಶಿ ನವೀನ್ ರೈ ಪಂಜಳ ವಂದಿಸಿದರು. ಅಕ್ಷಯ ಕಾಲೇಜು ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಅಕ್ಷಯ ಪಿಯು ಕಾಲೇಜು ಪ್ರಾಂಶುಪಾಲೆ ಗಂಗಾರತ್ನ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಅಬ್ಬಾಸ್ ಮುರ, ಅಕ್ಷಯ ಕಾಲೇಜು ಎನ್.ಎಸ್.ಎಸ್ ಯೂನಿಟ್-2 ಪ್ರೋಗ್ರಾಮ್ ಆಫೀಸರ್ ಮೇಘಶ್ರೀ, ಯೂನಿಟ್-1 ಪ್ರೋಗ್ರಾಂ ಆಫೀಸರ್ ರಾಕೇಶ್ ಕೆ, ರೋಟರಿ ಈಸ್ಟ್ ಕೋಶಾಧಿಕಾರಿ ಜಯಂತ್ ಬಾಯಾರು, ಸದಸ್ಯರಾದ ಶಶಿಕಿರಣ್ ರೈ, ಸುರೇಶ್ ಕೆ.ಯು, ಪ್ರದೀಪ್ ರಾವ್, ಹೊನ್ನಪ್ಪ ಪೂಜಾರಿ ಕೈಂದಾಡಿ ಉಪಸ್ಥಿತರಿದ್ದರು. ಅಕ್ಷಯ ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥೆ ರಶ್ಮಿ ಕೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜು ಅಧ್ಯಾಪಕರಿಗೆ, ಆಡಳಿತ ಸಿಬ್ಬಂದಿ ವರ್ಗದವರಿಗೆ, ವಿದ್ಯಾರ್ಥಿಗಳಿಗೆ, ಉಪಸ್ಥಿತರಿದ್ದ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಸದಸ್ಯರಿಗೆ ಗಿಡಗಳನ್ನು ವಿತರಿಸಲಾಗಿತ್ತು.

ಗಿಡ ನೆಡಿ ಸೆಲ್ಫಿ ಕಳಿಸಿ..
ಪ್ರತಿ ವರ್ಷ ಹಮ್ಮಿಕೊಳ್ಳುವ ಈ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡಗಳನ್ನು ನೆಟ್ಟು ಅದು ವ್ಯರ್ಥವಾಗಬಾರದು. ಗಿಡ, ಮರಗಳಿಂದ ಮಾನವನಿಗೆ ಬೇಕಾದ ತಂಪಾದ ಗಾಳಿ, ನೆರಳು, ಮಣ್ಣಿನ ಫಲವತ್ತತೆ, ಸೂರ‍್ಯನ ಪ್ರಖರ ಬೆಳಕಿನಿಂದ ನಿವಾರಣೆ ಮುಂತಾದುವುಗಳು ಸಿಗಲಿದ್ದು, ವಿದ್ಯಾರ್ಥಿಗಳು ಇಲ್ಲಿ ಕೊಟ್ಟಂತಹ ಗಿಡಗಳನ್ನು ನೆಡುವ ಸೆಲ್ಫಿ ಫೊಟೊವನ್ನು ನಮಗೆ ಕಳಿಸಿ ಕೊಡುವಂತೆ ರೋಟರಿ ಈಸ್ಟ್ ಅಧ್ಯಕ್ಷ ಶಶಿಧರ್ ಕಿನ್ನಿಮಜಲುರವರು ಹೇಳಿದರು.
ಸ್ಥಳದಲ್ಲಿಯೇ ಗಿಡಗಳ ಹೆಸರು ಸೂಚಿಸಿ..
ವೇದಿಕೆಯಲ್ಲಿ ಉಪಸ್ಥಿತರಿದ್ದ ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ರಾವ್‌ರವರು ತನ್ನ ಭಾಷಣಕ್ಕೆ ವಿರಾಮ ನೀಡಿ ವೇದಿಕೆಯಲ್ಲಿದ್ದ ವಿವಿಧ ಗಿಡಗಳನ್ನು ವಿದ್ಯಾರ್ಥಿಗಳಿಗೆ ತೋರಿಸಿ ಗಿಡಗಳ ಹೆಸರನ್ನು ಸೂಚಿಸುವ ಮೂಲಕ ಗಿಡಗಳನ್ನು ಪ್ರದರ್ಶಿಸಿ ಗಿಡಗಳ ಮಹತ್ವವನ್ನು ಎತ್ತಿ ತೋರಿಸಿರುವುದು ವಿಶಿಷ್ಟವಾಗಿತ್ತು.