ಕೆಂಪು ಕಲ್ಲು, ಮರಳಿನ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾ ಬಿಜೆಪಿ ನಿಯೋಗದಿಂದ ಸಿಎಂಗೆ ಮನವಿ

0

ಪುತ್ತೂರು: ದ. ಕ ಜಿಲ್ಲೆಯಲ್ಲಿ ಕೆಂಪು ಕಲ್ಲು ಮತ್ತು ಮರಳು ಅಭಾವವನ್ನು ತ್ವರಿತವಾಗಿ ಬಗೆಹರಿಸುವಂತೆ ಮತ್ತು ಜನಪರ ನೀತಿಯನ್ನು ಜಾರಿಗೊಳಿಸುವಂತೆ ದ. ಕ ಸಂಸದರ ನೇತೃತ್ವದಲ್ಲಿ ಜಿಲ್ಲೆಯ ಬಿಜೆಪಿ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ ಮಾಡಲಾಯಿತು.

ಕರ್ನಾಟಕದ ಕರಾವಳಿ ಹಾಗು ಮಲೆನಾಡಿನ ಭಾಗಗಳಲ್ಲಿ ಭೂಮಿಯ ಮೇಲ್ಪದರದಲ್ಲಿ ಗಟ್ಟಿ ಮುರ ಇದ್ದು ಕೃಷಿ ಕಾರ್ಯಗಳನ್ನು ನಿರ್ವಹಿಸಲು ಕಷ್ಟಕರವಾಗಿರುವುದರಿಂದ ಬಹುಕಾಲದಿಂದಲೂ ಕಾರ್ಮಿಕರ ಸಹಾಯದಿಂದ ಅದನ್ನು ಜನಸಾಮಾನ್ಯರ ಉಪಯೋಗಕ್ಕೆ ಇಟ್ಟಿಗೆಯ ರೂಪದಲ್ಲಿ ಕತ್ತರಿಸಿ ತೆಗೆದು ಬಳಸುವುದು ಪ್ರತೀತಿ. ಕಾಲಕ್ರಮೇಣ ಕಾರ್ಮಿಕರ ಅಭಾವ ಉಂಟಾದಾಗ ಈ ಕಾರ್ಯವನ್ನು ಯಂತ್ರದ ಮೂಲಕ ನಿರ್ವಹಿಸಲು ಪ್ರಾರಂಭಿಸಲಾಯಿತು. ಇದೀಗ ರಾಜ್ಯ ಸರಕಾರದ ನಿಯಮಾವಳಿಗಳ ಕಾರಣದಿಂದ ಈ ಪ್ರಕ್ರಿಯೆಯು ಸಂಪೂರ್ಣ ಸ್ಥಗಿತಗೊಂಡಿದೆ. ಇಷ್ಟು ಮಾತ್ರ ವಲ್ಲದೆ ಸರಕಾರದ ಅಸಮರ್ಪಕ ಹಾಗು ಅವೈಜ್ಞಾನಿಕ ಮರಳು ನೀತಿಯಿಂದಾಗಿ ಜಿಲ್ಲೆಯಲ್ಲಿ ಮರಳಿನ ಪೂರೈಕೆಯೂ ಸಾಧ್ಯವಾಗುತ್ತಿಲ್ಲ. ಈ ಎಲ್ಲ ಅವಾಂತರಗಳಿಂದಾಗಿ ದಕ್ಷಿಣ ಕನ್ನಡದಲ್ಲಿ ಸಾಮಾನ್ಯ ಜನರ ಗೃಹ ನಿರ್ಮಾಣ ಕಾರ‍್ಯ, ಕೃಷಿ ಸಂಬಂಽಸಿದ ಕಾಮಗಾರಿಗಳು ಅಥವಾ ಯಾವುದೇ ರೀತಿಯ ಕಟ್ಟಡ ಕಾಮಗಾರಿಗಳು ನಡೆಯುತಿಲ್ಲ, ಇದರಿಂದ ಜಿಲ್ಲೆಯ ಆರ್ಥಿಕತೆ ಸ್ಥಬ್ಧಗೊಂಡಿರುವುದಷ್ಟೇ ಅಲ್ಲದೇ, ಈ ಸಂಬಂಧಿಸಿದ ಉದ್ಯೋಗಗಳನ್ನು ನಂಬಿರುವ ಕಾರ್ಮಿಕರ ಸಹಿತ ಸಾವಿರಾರು ಜನರ ಬದುಕು ಇದೀಗ ಬೀದಿಗೆ ಬಿದ್ದಿದೆ. ಇದನ್ನು ಸರಿ ಪಡಿಸುವ ಅನಿವಾರ್ಯತೆ ಇದೆ ಎಂದು ಮನವಿಯಲ್ಲಿ ಕೋರಲಾಗಿದೆ.


ಕೆಂಪು ಮುರ ಕಲ್ಲುಕೋರೆಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ವ್ಯಾಪ್ತಿಗೆ ಸೇರಿಸಿ ಅನಗತ್ಯ ನಿಯಮಗಳ ಮೂಲಕ ಕೋರೆ ಮಾಲಕರಿಗೆ, ಜನಸಾಮಾನ್ಯರಿಗೆ ಹಾಗು ಕಾರ್ಮಿಕರಿಗೆ ಹೊರೆಯಾಗುವಂತೆ ಮಾಡಲಾಗುತ್ತಿದೆ. ಈ ಮೂಲಕ ಪರೋಕ್ಷವಾಗಿ ಪೊಲೀಸ್, ಕಂದಾಯ, ಗಣಿ ಇಲಾಖೆ ಅಧಿಕಾರಿಗಳು ಲಂಚಕ್ಕೆ ಪೀಡಿಸುವಂತಾಗಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಂಪು ಕಲ್ಲು ಕೋರೆ ಕಾರ್ಯವನ್ನು ಗಣಿ ಇಲಾಖೆ ವ್ಯಾಪ್ತಿಯಿಂದ ಹೊರಗಿರಿಸಿ ಸರಳೀಕೃತ ವ್ಯವಸ್ಥೆಯಲ್ಲಿ ಪರವಾನಿಗೆ ನೀಡುವಂತಾಗಬೇಕು ಎಂದೂ ಮನವಿಯಲ್ಲಿ ಕೋರಲಾಗಿದೆ.
ಕೇರಳದಲ್ಲಿ 1 ಟನ್ ಕಲ್ಲಿಗೆ ಕೇವಲ 32 ರೂಪಾಯಿಗಳಷ್ಟು ರಾಜಧನ ನಿಗದಿಯಾಗಿದ್ದರೆ ಅದೇ ಪ್ರಮಾಣದ ಕಲ್ಲಿಗೆ ಕರ್ನಾಟಕದಲ್ಲಿ 290 ರೂಪಾಯಿಗಳಷ್ಟು ರಾಜಧನವನ್ನು ಕರ್ನಾಟಕ ಸರಕಾರ ನಿಗದಿಪಡಿಸಿರುವುದು ಅತ್ಯಂತ ಖೇದಕರ ವಿಷಯವಾಗಿದೆ. ಪರವಾನಿಗೆಯಲ್ಲಿ 1 ಟನ್ ಮುರ ಇಟ್ಟಿಗೆಗೆ ವಿಧಿಸಿರುವ ಮೊತ್ತವು ಶೇ. 96% ಆಗಿದ್ದು ಈ ಮೊತ್ತವನ್ನು ಪ್ರತಿ | ಟನ್ ಮುರ ಇಟ್ಟಿಗೆಗೆ ಶೇ. 10ಕ್ಕೆ ಸೀಮಿತಗೊಳಿಸಿ, ರಾಜ್ಯದಲ್ಲಿ ವಿಪರೀತ ಪ್ರಮಾಣದಲ್ಲಿ ಏರಿಸಲಾಗಿರುವ ರಾಜಧನವನ್ನು ಈ ಕೂಡಲೇ ಜಾರಿಗೆ ಬರುವಂತೆ ತಗ್ಗಿಸಬೇಕಿದೆ ಎಂದೂ ಮನವಿಯಲ್ಲಿ ಆಗ್ರಹಿಸಿದ್ದಾರೆ.


ಬಿಜೆಪಿ ರಾಜ್ಯ ಕಾರ್ಯದರ್ಶಿಯೂ ಆಗಿರುವ ದ.ಕ. ಸಂಸದ ಕ್ಯಾ| ಬ್ರಿಜೇಶ್ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ವೇದವ್ಯಾಸ ಕಾಮತ್, ಡಾ ಭರತ್ ಶೆಟ್ಟಿ, ರಾಜೇಶ್ ನಾಯಕ್, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಕಿಶೋರ್ ಕುಮಾರ್ ಪುತ್ತೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಯತೀಶ ಆರ್ವಾರ್, ಮಾಧ್ಯಮ ಪ್ರಕೋಷ್ಠದ ಸಂಚಾಲಕರಾದ ವಸಂತ ಪೂಜಾರಿ ಮನವಿ ಸಲ್ಲಿಕೆ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here