ಎರಡನೇ ಅಧಿಕೃತ ಭಾಷೆಯಾಗಿ ತುಳು : ಅಧ್ಯಯನಕ್ಕೆ ಸಮಿತಿ ರಚಿಸಿದ ಸರಕಾರ

0

ಬೆಂಗಳೂರು:ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಲು ಅನುಸರಿಸಬೇಕಾದ ಮಾನದಂಡಗಳ ಬಗ್ಗೆ ಆಂಧ್ರಪ್ರದೇಶಕ್ಕೆ ತೆರಳಿ ಅಧ್ಯಯನ ನಡೆಸಲು ರಾಜ್ಯ ಸರಕಾರ ಐದು ಮಂದಿ ಸದಸ್ಯರ ಸಮಿತಿ ರಚಿಸಿ ಆದೇಶಿಸಿದೆ.ಮೂರು ತಿಂಗಳೊಳಗೆ ಅಧ್ಯಯನ ವರದಿ ನೀಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಗಾಯತ್ರಿ ಕೆ.ಎಂ.ಅವರು ಸಮಿತಿಯ ಅಧ್ಯಕ್ಷರಾಗಿದ್ದು,ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ತಾರಾನಾಥ ಗಟ್ಟಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸುಧಾಕರ್ ಶೆಟ್ಟಿ,ಕಾನೂನು ಇಲಾಖೆ ಉಪಕಾರ್ಯದರ್ಶಿ ವನಿತಾ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಮೂರ್ತಿ ಕೆ.ಎನ್.ಸಮಿತಿ ಸದಸ್ಯರಾಗಿರುತ್ತಾರೆ.ಎರಡನೇ ಅಽಕೃತ ಭಾಷೆ ಎಂದು ಘೋಷಿಸಲು ಅನುಸರಿಸಿರುವ ಮಾನದಂಡಗಳ ಅಧ್ಯಯನ ಮಾಡುವ ಸಲುವಾಗಿ ಸಮಿತಿ ರಚನೆ ಮಾಡಲಾಗಿದೆ.


ಈ ಹಿಂದೆ ಆಂಧ್ರಪ್ರದೇಶದಲ್ಲಿರುವ ಇತರ ಭಾಷೆಯನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಅಂಗೀಕಾರ ಮಾಡಿರುವ ಬಗ್ಗೆ ಮಾಹಿತಿಯನ್ನು ತರಿಸಿಕೊಳ್ಳಲಾಗಿತ್ತು. ಇದೀಗ ಆಂಧ್ರಪ್ರದೇಶದಲ್ಲಿ ಎರಡನೇ ಭಾಷೆಯನ್ನು ಯಾವ ಸ್ವರೂಪ, ಪ್ರಮಾಣದಲ್ಲಿ ಅಧಿಕೃತ ಭಾಷೆ ಎಂದು ಜಾರಿಗೊಳಿಸಲಾಗಿದೆ ಎಂಬುದನ್ನು ಸಂಪೂರ್ಣವಾಗಿ ಅಧ್ಯಯನ ಮಾಡಲು ಸರಕಾರ ಈ ಸಮಿತಿಯನ್ನು ರಚಿಸಿ ಮೂರು ತಿಂಗಳೊಳಗೆ ವರದಿ ನೀಡುವಂತೆ ಆದೇಶಿಸಿದೆ.

ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವಂತೆ ತುಳುನಾಡಿನ ಜನರ ಬೇಡಿಕೆಯಿದ್ದು ಶಾಸಕ ಅಶೋಕ್ ಕುಮಾರ್ ರೈ ಅವರು ಸದನದಲ್ಲಿ ಹಲವು ಬಾರಿ ಈ ವಿಷಯ ಪ್ರಸ್ತಾಪ ಮಾಡಿ ಸರಕಾರ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು.ಸ್ಪೀಕರ್ ಯು.ಟಿ.ಖಾದರ್ ಸೇರಿದಂತೆ ಜಿಲ್ಲೆಯ ಇತರ ಶಾಸಕರೂ ಬೆಂಬಲ ವ್ಯಕ್ತಪಡಿಸಿದ್ದರು.ಇತ್ತೀಚೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಗಳೂರುಗೆ ಆಗಮಿಸಿದ್ದ ಸಂದರ್ಭದಲ್ಲಿಯೂ ಶಾಸಕ ಅಶೋಕ್ ಕುಮಾರ್ ರೈಯವರು ತುಳುವನ್ನು ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವಂತೆ ಮುಖ್ಯಮಂತ್ರಿಯವರಲ್ಲಿ ಬೇಡಿಕೆ ಇರಿಸಿದ್ದರು.ಈ ಕುರಿತು ಮುಖ್ಯಮಂತ್ರಿಯವರೂ ಪೂರಕವಾಗಿ ಸ್ಪಂದಿಸಿ, ಮಾಡೋಣ ನಮ್ಮದೇನೂ ಅಭ್ಯಂತರವಿಲ್ಲ.ಆದರೆ ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಸ್ಥಾನಮಾನ ಎಂದು ಹೇಳಿದ್ದರು.ಇದೀಗ ಕೊನೆಗೂ ಸರಕಾರ ಅಧ್ಯಯನಕ್ಕೆ ಸಮಿತಿ ರಚನೆ ಮಾಡಿ ಆದೇಶಿಸಿದೆ.

LEAVE A REPLY

Please enter your comment!
Please enter your name here