ಪುತ್ತೂರು: ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ, ರೋಟರಿ ಕ್ಲಬ್ ಪುತ್ತೂರು ಸಿಟಿ, ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಸರ್ವೆ ಕರ್ಣಾಟಕ ಬ್ಯಾಂಕ್ ಶಾಖೆ ಮತ್ತು ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರ ಇವುಗಳ ಜಂಟಿ ಆಶ್ರಯದಲ್ಲಿ ಎ.ಜೆ. ವೈದ್ಯಕೀಯ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆ ಮಂಗಳೂರು ಇವರಿಂದ “ಉಚಿತ ವೈದ್ಯಕೀಯ ತಪಾಸಣಾ ಶಿಬಿರ”ವು ದೇವಸ್ಥಾನದ ವಠಾರದಲ್ಲಿ ಜು.30ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಸದಸ್ಯರು ಹಾಗೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರೂ ಆಗಿರುವ ಶಿವನಾಥ್ ಆಳ್ವ ಮೇಗಿನಗುತ್ತುರವರು ನೆರವೇರಿಸಿ, ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಶಿಬಿರವನ್ನು ನಡೆಸುವ ಉದ್ದೇಶ ಮತ್ತು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಅದರ ಮಹತ್ವ ಕುರಿತು ತಿಳಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ರೋಟರಿ ಜಿಲ್ಲೆ 3181 ವಲಯ 4 ರ ಅಸಿಸ್ಟೆಂಟ್ ಗವರ್ನರ್ ಡಾ.ರಾಜಾರಾಮ ಕೆ.ಬಿ.ರವರು, ಆರೋಗ್ಯವೇ ಮಹಾಭಾಗ್ಯ, ನಾವು ಎಷ್ಟು ವರ್ಷ ಬದುಕಿದ್ದೇವೆ ಅನ್ನುವುದಕ್ಕಿಂತ ಆರೋಗ್ಯವಂತರಾಗಿ ಬದುಕಿ ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ ಎನ್ನುವುದು ಮುಖ್ಯ. ರೋಟರಿ ಸಂಸ್ಥೆ ಈ ನಿಟ್ಟಿನಲ್ಲಿ ಸಮಾಜಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದರು.
ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಉಲ್ಲಾಸ್ ಪೈಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿಯ ಸಮುದಾಯ ಸೇವಾ ನಿರ್ದೇಶಕಿ ಹರಿಣಿ ಸತೀಶ್, ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಎನ್.ಎಸ್, ಎ.ಜೆ. ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಾಸವಿ ಮತ್ತು ಕರ್ಣಾಟಕ ಬ್ಯಾಂಕ್ ಸರ್ವೆ ಶಾಖೆಯ ವ್ಯವಸ್ಥಾಪಕ ಪ್ರದೀಪ್ ಕುಮಾರ್ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು. ಆನಂದ ಪೂಜಾರಿ ಸ್ವಾಗತಿಸಿ, ರೋಟರಿ ಸಿಟಿ ನಿಕಟಪೂರ್ವ ಕಾರ್ಯದರ್ಶಿ ರಾಮಚಂದ್ರ ಬನ್ನೂರು ವಂದಿಸಿದರು. ವಿನಯ್ ರೈ ಕಾರ್ಯಕ್ರಮ ನಿರ್ವಹಿಸಿದರು.
150 ಫಲಾನುಭವಿಗಳು ಭಾಗಿ..
ಶಿಬಿರದಲ್ಲಿ ಕಣ್ಣಿನ ತಪಾಸಣೆ, ಹೃದಯದ ತಪಾಸಣೆ, ಇ.ಸಿ.ಜಿ., ಬಿ.ಪಿ., ಮಧುಮೇಹ, ಚರ್ಮರೋಗ ತಪಾಸಣೆ, ಕಿವಿ, ಗಂಟಲು, ಮೂಗು,ತಪಾಸಣೆ ನಡೆಸಲಾಯಿತು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆದ ವೈದ್ಯಕೀಯ ತಪಾಸಣೆಯಲ್ಲಿ ಸುಮಾರು 150 ಮಂದಿ ಫಲಾನುಭವಿಗಳು ಪ್ರಯೋಜನ ಪಡೆದುಕೊಂಡರು.