ಪುತ್ತೂರು: ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ರೈತರಿಗೆ ಸಿಗುವ ಸವಲತ್ತಿನ ಮಾಹಿತಿ ಕಾರ್ಯಾಗಾರ ಆ.1ರಂದು ದ.ಕ ಜಿಲ್ಲಾ ಪ್ರಧಾನ ಕಛೇರಿಯಲ್ಲಿ ನಡೆಯಿತು.
ಮಾಹಿತಿ ನೀಡಿದ ಆರ್ಯಾಪು ಗ್ರಾ.ಪಂ ಪಿಡಿಓ, ತಾ.ಪಂ ಸಹಾಯಕ ನಿರ್ದೇಶಕ ನಾಗೇಶ್ ಎಂ. ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಲ್ಲಿ ರೈತರಿಗೆ ಸಾಧ್ಯವಾದಷ್ಟು ಸಹಾಯ ನೀಡಲಾಗುತ್ತಿದೆ. ಪಂಚಾಯತ್ನಲ್ಲಿ ಲಿಖಿತ ದಾಖಲೆಗಳು ಇಲ್ಲದೆ ವೈಯಕ್ತಿಕ ದಾಖಲೆಯನ್ನು ನೀಡುವುದಕ್ಕೆ ಆಕ್ಷೇಪ ನೀಡುವಂತೆಯಿಲ್ಲ. ಕರಾವಳಿಯಲ್ಲಿ ಕೃಷಿ ಜಮೀನಿನಲ್ಲೇ ಮನೆ ಇದ್ದು, ಭೂಪರಿವರ್ತನೆ ಇಲ್ಲದೆ ಜೂ.2ರವರೆಗೆ 11ಬಿ ಮೂಲಕ ಕದ ಸಂಖ್ಯೆ ಪಡೆಯಲು ಅವಕಾಶವಿತ್ತು ಎಂದರು.
ಕೃಷಿ ಜಮೀನಿನಲ್ಲಿ ಕೋಳಿ ಸಾಕಣೆ ಕಟ್ಟಡ ಮಾಡುವುದಕ್ಕೆ ಪಂಚಾಯಿತಿಯ ಪರವಾನಿಗೆಯಿಂದ ವಿನಾಯಿತಿ ನೀಡಲಾಗಿದೆ. ವಾಸದ ಮನೆಯಿಂದ 200ಮೀ. ದೂರದಲ್ಲಿ ನಿರ್ಮಾಣ ಮಾಡಬೇಕೆಂಬ ಷರತ್ತು ಹಾಕಲಾಗುತ್ತದೆ. ರಸ್ತೆಗೆ ಸರ್ಕಾರಿ ಅನುದಾನ ಬಳಕೆಯ ಸಂದರ್ಭ ಜಾಗದ ಮಾಲೀಕರಿಗೆ ಅಕ್ಷೇಪ ಸಲ್ಲಿಸಲು ಅವಕಾಶವಿದೆ. ಅನುದಾನ ಬಳಸಿದ ಬಳಿಕ ಅದು ಸಾರ್ವಜನಿಕ ಸೊತ್ತಾಗಿದ್ದು, ಮುಚ್ಚುವುದಕ್ಕೆ ಅವಕಾಶವಿಲ್ಲ. ಸಾರ್ವಜನಿಕರಿಗೆ ಸರ್ಕಾರಿ ದಾಖಲೆಗಳನ್ನು ಪಡೆಯಲು ಸಾಕಷ್ಟು ಅವಕಾಶಗಳಿದ್ದು, ಗ್ರಾಮ ಸಭೆಯ ತನಕ ಕಾಯಬೇಕಿಲ್ಲ ಎಂದು ತಿಳಿಸಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು, ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಯುಕೆಟಿಸಿಎಲ್ ವಿರೋಧಿ ಯೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ಕಾರ್ಯದರ್ಶಿ ಈಶ್ವರ ಭಟ್, ರೈತ ಸಂಘದ ಕುಂಬ್ರ ವಲಯ ಅಧ್ಯಕ್ಷ ಕೆ. ಶೇಖರ ರೈ ಮತ್ತಿತರರು ಉಪಸ್ಥಿತರಿದ್ದರು. ಹಲವು ಮಂದಿ ರೈತರು ಭಾಗವಹಿಸಿ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು.