ವಿಟ್ಲ: ಹೊಳೆಯಿಂದ ಯಂತ್ರದ ಮೂಲಕ ಅಕ್ರಮವಾಗಿ ಮರಳು ತೆಗೆದು ಸಂಗ್ರಹಿಸಿಟ್ಟಿದ್ದ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ದಾಳಿ ನಡೆಸಿದ ಘಟನೆ ಸಾಲೆತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೆದು ಕಟ್ಟತ್ತಿಲ ಎಂಬಲ್ಲಿ ನಡೆದಿದೆ.
ಕಟ್ಟತ್ತಿಲ ಸೇತುವೆಯ ಬಳಿಯ ಹೊಳೆಯಿಂದ ಅಬ್ದುಲ್ ಸಮದ್ ಎಂಬಾತನ ನೇತೃತ್ವದ ತಂಡ ಯಂತ್ರದ ಮೂಲಕ ಅಕ್ರಮವಾಗಿ ಮರಳನ್ನು ತೆಗೆದು ಸಂಗ್ರಹಿಸಿಟ್ಟು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ವಿಟ್ಲ ಠಾಣಾ ಎಸ್. ಐ. ರತನ್ ಕುಮಾರ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದೆ. ದಾಳಿ ವೇಳೆ ಸುಮಾರು 2 ರಿಂದ 3 ಪಿಕಪ್ನಷ್ಟು ಮರಳು ಮತ್ತು ಹೊಳೆಯಿಂದ ಮರಳನ್ನು ತೆಗೆಯಲು ಉಪಯೋಗಿಸುತ್ತಿದ್ದ ಯಂತ್ರ, ಕಬ್ಬಿಣದ ಜಾಲರಿ, ಫೈಬರ್ ಬುಟ್ಟಿಗಳು, ಕಬ್ಬಿಣದ ಹಾರೆ ಹಾಗೂ ಕೃತ್ಯಕ್ಕೆ ಬಳಸಿದ ಇತರೆ ಸೊತ್ತುಗಳು ಪತ್ತೆಯಾಗಿದ್ದು, ಅಲ್ಲಿದ್ದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಲವೆಡೆ ಇರುವ ಇಂತಹ ಅಡ್ಡೆಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಅಗತ್ಯ
ಜಿಲ್ಲೆಯಲ್ಲಿ ಮರಳು ತೆಗೆಯುವುದಕ್ಕೆ ನಿಷೇಧ ಹೇರಿದ ಬಳಿಕವಂತೂ ಗಡಿಪ್ರದೇಶದ ಹೊಳೆಗಳಿಂದ ಮರಳನ್ನು ತೆಗೆಯುವುದು ಸರ್ವೇಸಾಮಾನ್ಯವಾಗಿ ಹೋಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಕೆಲವೊಂದು ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎನ್ನುವ ಆರೋಪ ನಾಗರಿಕ ವಲಯದಿಂದ ಕೇಳಿಬರುತ್ತಿದೆ. ಇದು ಒಂದು ಕಡೆಯಲ್ಲ ಗಡಿ ಪ್ರದೇಶದ ಹಲವೆಡೆ ಇಂತಹ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು ಅಂಥವರ ವಿರುದ್ದ ಅಽಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.