ಉಪ್ಪಿನಂಗಡಿ : ಲಾರಿ ಡಿಕ್ಕಿ- ಫ್ಯಾಷನ್ ವರ್ಲ್ಡ್‌ ಜವುಳಿ ಅಂಗಡಿಯ ಮಾಲಕ ಮೃತ್ಯು

0

ಉಪ್ಪಿನಂಗಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 75ರ ಸೂರ್ಯ ಆಸ್ಪತ್ರೆ ಎದುರಿನಲ್ಲಿ ಆ.2ರಂದು ಬೆಳಗ್ಗೆ ಲಾರಿ ಮತ್ತು ದ್ವಿಚಕ್ರ ವಾಹನ ಡಿಕ್ಕಿಯಾಗಿ ಗಂಭೀರ ಸ್ವರೂಪದ ಗಾಯಗೊಂಡಿದ್ದ ದ್ವಿಚಕ್ರ ಸವಾರ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವ ದಾರಿಯಲ್ಲಿ ಮೃತಪಟ್ಟಿದ್ದಾರೆ.


ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿರುವ ಗ್ರಾಮ ಪಂಚಾಯತ್ ಕಟ್ಟಡದಲ್ಲಿ ಫ್ಯಾಷನ್ ವರ್ಲ್ಡ್ ಬಟ್ಟೆ ಅಂಗಡಿ ಹೊಂದಿದ್ದ ಇಬ್ರಾಹೀಂ (55) ಮೃತಪಟ್ಟ ದುರ್ದೈವಿ. ಇವರು ಬೆಳಗ್ಗೆ ಮಠದಲ್ಲಿರುವ ಮನೆಯಿಂದ ದ್ವಿಚಕ್ರ ವಾಹನದಲ್ಲಿ (ಕೆಎ-21-ವೈ-5724) ಅಂಗಡಿಗೆ ಬರುವ ವೇಳೆ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ (ಕೆಎ.19 ಎಇ 3076) ಲಾರಿ ಢಿಕ್ಕಿ ಹೊಡೆದಿದ್ದು, ಗಂಭೀರ ಸ್ವರೂಪದ ಗಾಯಗೊಂಡಿದ್ದ ಇವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ.


ರಾಮಕುಂಜ ಗ್ರಾಮದ ಕುಂಡಾಜೆ ಆದಂ ಹಾಜಿ ಎಂಬವರ ಪುತ್ರನಾಗಿರುವ ಇಬ್ರಾಹೀಂ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಉದ್ಯೋಗದಲ್ಲಿದ್ದವರು ಸುಮಾರು 10 ವರ್ಷದ ಹಿಂದೆ ಊರಿಗೆ ಬಂದು ನೆಲೆಸಿ ಉಪ್ಪಿನಂಗಡಿಯಲ್ಲಿ ಬಟ್ಟೆ ಅಂಗಡಿಯನ್ನು ತೆರೆದು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. ಉಪ್ಪಿನಂಗಡಿಯ ಮಠ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸರಳಿಕಟ್ಟೆ ಎಂಬಲ್ಲಿ ತೋಟವನ್ನು ಹೊಂದಿದ್ದು, ಅಲ್ಲೇ ಹೊಸ ಮನೆ ನಿರ್ಮಿಸುತ್ತಿದ್ದರು.


ಮೃತರು ಪತ್ನಿ, 1 ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇವರ ಪುತ್ರ 5 ದಿನಗಳ ಹಿಂದೆಯಷ್ಟೇ ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಘಟನೆಯ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತಕ್ಕೆ ಕಾರಣವಾಗುತ್ತಿವೆ ಅಪೂರ್ಣ ಕಾಮಗಾರಿ
ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದ್ದು, ಕೆಲವು ಕಡೆ ಹೆದ್ದಾರಿಯಲ್ಲಿ ತುಂಡು ತುಂಡು ಕಾಂಕ್ರೀಟ್ ಕಾಮಗಾರಿಗಳು ನಡೆದಿವೆ. ಇನ್ನು ಕೆಲವು ಕಡೆ ಮಣ್ಣು ಅಗೆಯುವ, ಸಾಗಿಸುವ ಕೆಲಸಗಳು ನಡೆಯುತ್ತಿವೆ. ಇನ್ನು ಕಾಮಗಾರಿ ನಡೆಯದ ಕಡೆ ಡಾಮರು ರಸ್ತೆಗಳು ಸಂಪೂರ್ಣ ಹೊಂಡಮಯವಾಗಿದ್ದು, ಇದಕ್ಕೆ ಯಾವಾಗಲಾದರೊಮ್ಮೆ ಜಲ್ಲಿ ಹಾಗೂ ಸಿಮೆಂಟ್ ಮಿಶ್ರಣವನ್ನು ಕಾಮಗಾರಿ ಗುತ್ತಿಗೆ ಸಂಸ್ಥೆ ಹಾಕಿ ಗುಂಡಿ ಮುಚ್ಚುವ ಕಾಮಗಾರಿ ನಡೆಸುತ್ತಿದೆ. ಆದರೆ ಒಂದೇ ಮಳೆಗೆ ಸಿಮೆಂಟ್ ಮಿಶ್ರಣ ಹೋಗಿ ಗುಂಡಿ ಮೊದಲಿನ ಸ್ಥಿತಿಗೆ ಬರುತ್ತಿದ್ದು, ದೊಡ್ಡ ಜಲ್ಲಿಕಲ್ಲುಗಳು, ಸಣ್ಣ ಜಲ್ಲಿಕಲ್ಲುಗಳೆಲ್ಲಾ ರಸ್ತೆಯಿಡೀ ಹರಿಡಿಕೊಂಡಿವೆ. ಈ ಹರಿಡಿಕೊಂಡಿರುವ ಜಲ್ಲಿಗಳ ಸಮಸ್ಯೆ ಪೂರ್ಣಗೊಂಡ ಕಾಂಕ್ರೀಟ್ ಹೆದ್ದಾರಿಯಲ್ಲೂ ಕಂಡು ಬರುತ್ತಿವೆ. ಒಂದೆಡೆ ಕೆಸರು, ಸಿಮೆಂಟ್ ಮಿಶ್ರಣ, ಹರಡಿಕೊಂಡಿರುವ ಜಲ್ಲಿಗಳು, ಹೊಂಡ ಗುಂಡಿಗಳು ದ್ವಿಚಕ್ರ ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ. ಜಲ್ಲಿಕಲ್ಲುಗಳು, ಕೆಸರು, ಸಿಮೆಂಟ್ ಮಿಶ್ರಣ ದ್ವಿಚಕ್ರ ವಾಹನಗಳ ಟಯರ್‌ಗಳಿಗೆ ಸಿಕ್ಕಿ ಹಲವು ವಾಹನಗಳು ಸ್ಕಿಡ್ ಆಗಿ ಬೀಳುತ್ತಿದ್ದು, ಗುಂಡಿ ತಪ್ಪಿಸಲು ಹೋಗಿಯೂ ಹಲವು ಅಪಘಾತಗಳು ಈ ಹೆದ್ದಾರಿಯಲ್ಲಿ ನಡೆಯುತ್ತಿವೆ. ಆದ್ದರಿಂದ ಹೆದ್ದಾರಿ ಕಾಮಗಾರಿ ಗುತ್ತಿಗೆದಾರ ಸಂಸ್ಥೆಯವರು ರಸ್ತೆಯಲ್ಲಿ ರಾಶಿ ಬಿದ್ದಿರುವ ಜಲ್ಲಿಕಲ್ಲುಗಳನ್ನು ತೆರವು ಮಾಡಬೇಕೆಂಬ ಎಂಬ ಆಗ್ರಹ ವಾಹನ ಚಾಲಕರಿಂದ ಕೇಳಿ ಬರುತ್ತಿದೆ.

LEAVE A REPLY

Please enter your comment!
Please enter your name here