ಹಿರೇಬಂಡಾಡಿ ಗ್ರಾಮ ಸಭೆ

0

ಅನುದಾನವಿದ್ದರೂ ನಡೆಯದ ಕೆಲಸ – ಗ್ರಾಮಸ್ಥರ ಆಕ್ರೋಶ

ಉಪ್ಪಿನಂಗಡಿ: ಗ್ರಾಮ ವ್ಯಾಪ್ತಿಯಲ್ಲಿ ಹಲವು ರಸ್ತೆಗಳು ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಆದರೆ 15ನೇ ಹಣಕಾಸಿನ ಅನುದಾನವಿದ್ದರೂ ಅದರ ಕೆಲಸಗಳಾಗುತ್ತಿಲ್ಲ. ಈ ಅನುದಾನದಲ್ಲಿ ಮಾಡಿದ ಬಿಲ್‌ಗಳನ್ನು ಪೆಂಡಿಂಗ್ ಇರಿಸಲಾಗಿದೆ ಯಾಕೆ ಎಂಬ ಪ್ರಶ್ನೆ ಹಿರೇಬಂಡಾಡಿ ಗ್ರಾಮ ಸಭೆಯಲ್ಲಿ ಕೇಳಿ ಬಂತು.


ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಹಿರೇಬಂಡಾಡಿ ಗ್ರಾ.ಪಂ.ನ ಸಮುದಾಯ ಭವನದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥ ದಯಾನಂದ ಸರೋಳಿ, ಗ್ರಾಮ ವ್ಯಾಪ್ತಿಯಲ್ಲಿ ಹಲವು ರಸ್ತೆಗಳು ಹದಗೆಟ್ಟಿವೆ. 15 ಹಣಕಾಸಿನಡಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. 15ನೇ ಹಣಕಾಸಿನಡಿ ಕಾಮಗಾರಿಗಳು ನಡೆದಿದ್ದರೂ ಅವುಗಳ ಬಿಲ್‌ಗಳನ್ನು ಪೆಂಡಿಂಗ್ ಇರಿಸಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಬಾಕಿ ಇರುವ ಬಿಲ್‌ಗಳನ್ನು ವಾರದೊಳಗೆ ಪಾವತಿಸಲು ನಿರ್ಣಯ ಮಾಡಿ ಎಂದರು. 15 ಹಣಕಾಸಿನಡಿ ನಮ್ಮ ಪಂಚಾಯತ್‌ನಲ್ಲಿ ಅನುದಾನವಿಲ್ಲವೇ? ಇದ್ದರೂ ಯಾಕೆ ಕೆಲಸಗಳಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪಿಡಿಒ ಸತೀಶ್ ಬಂಗೇರ, 15 ಹಣಕಾಸಿನಡಿ ಸುಮಾರು 91 ಲಕ್ಷದಷ್ಟು ಅನುದಾನವಿದೆ. 15 ಹಣಕಾಸಿನಡಿ ಕಾಮಗಾರಿಗಳಾಗಬೇಕಾದರೆ ಕ್ರಿಯಾಯೋಜನೆ ನಡೆದು, ಟೆಂಡರ್ ಆಗಬೇಕು. ನಿಯಮಾವಳಿ ಪ್ರಕಾರ ಇದ್ದ ಬಿಲ್‌ಗಳನ್ನು ಪಾವತಿಸಲಾಗಿದೆ. ಇನ್ನು ಯಾವುದೇ ಕಾಮಗಾರಿಯ ಬಿಲ್ ಬಾಕಿಯಿಲ್ಲ. ಮಾಡಿದ ಕೆಲಸಕ್ಕೆ ಬಿಲ್ ಆಗಿದೆ. 15ನೇ ಹಣಕಾಸಿನಡಿಯ ಕಾಮಗಾರಿಗಳು ಗ್ರಾ.ಪಂ.ನ ಆಡಳಿತ ಮಂಜೂರಾತಿ ಬಂದು ತಾಂತ್ರಿಕ ಮಂಜೂರಾತಿಗೆ ಹೋಗಿದೆ. ಈಗಾಗಲೇ ಕಾಮಗಾರಿ ಟೆಂಡರ್ ಪ್ರಕ್ರಿಯಾ ಹಂತದಲ್ಲಿದೆ ಎಂದರು. ಈ ಸಂದರ್ಭ ಸದಸ್ಯ ಶೌಕತ್ ಅಲಿ ಮಾತನಾಡಿ, ಬಾಕಿ ಇರುವ ಬಿಲ್‌ಗಳನ್ನು ವಾರದೊಳಗೆ ಪಾವತಿಸಲು ಅವರ ಕೋರಿಕೆಗೆ ನಿಯಮಾನುಸಾರ ನಿರ್ಣಯ ಮಾಡಿ ಎಂದರು.


ಗ್ರಾ.ಪಂ. ವ್ಯಾಪ್ತಿಯಲ್ಲಿ ದಾರಿ ದೀಪ ಟೆಂಡರ್ ಆಗಿದ್ದರೂ ಹೆಚ್ಚಿನ ಕಡೆಗಳಲ್ಲಿ ಅವುಗಳು ಉರಿಯುತ್ತಿಲ್ಲ ಎಂಬ ಆರೋಪ ಸಭೆಯಲ್ಲಿ ವ್ಯಕ್ತವಾಯಿತು. ಇದಕ್ಕೆ ಉತ್ತರಿಸಿದ ಪಿಡಿಒ ಅವರ ಟೆಂಡರ್ ಅವಧಿ ಕಳೆದ ಮಾರ್ಚ್‌ಗೆ ಮುಗಿದಿದೆ. ಇನ್ನು ಹೊಸ ಟೆಂಡರ್ ಕರೆಯಬೇಕಿದೆ ಎಂದರು. ಯಾವುದೇ ಗ್ರಾಮ ಸಭೆಗಳಿಗೆ ಪಿಆರ್‌ಡಿ ಇಲಾಖೆಯ ಎಂಜಿನಿಯರ್‌ಗಳು ಬರುವುದಿಲ್ಲ. ನೀವು ಅವರಿಗೆ ತಿಳಿಸುತ್ತಿಲ್ಲವೇ ಎಂಬ ಪ್ರಶ್ನೆ ಬಂದಾಗ ಉತ್ತರಿಸಿದ ಪಿಡಿಒ ಅವರು, ನಾವು ಅವರಿಗೂ ಅಹ್ವಾನ ನೀಡುತ್ತೇವೆ. ಅವರು ಸಭೆಗೆ ಹಾಜರಾಗದ ಕುರಿತು ಇಲಾಖೆಗೆ ಬರೆಯುತ್ತೇವೆ. ಈ ಬಾರಿಯೂ ಹಾಗೆಯೇ ಮಾಡಲಾಗುವುದು ಎಂದರು.


ಹರಿನಗರ- ನಂದಿನಿನಗರಕ್ಕೆ ಒಂದೇ ಒಂದು ಅನುದಾನ ಬರುತ್ತಿಲ್ಲ. ಇಲ್ಲಿ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ. ಇಲ್ಲಿ ಸರಿಯಾದ ರಸ್ತೆಯೂ ಇಲ್ಲ. ಚರಂಡಿ ದುರಸ್ತಿಯ ಕೆಲಸವೂ ನಡೆಯುತ್ತಿಲ್ಲ. ಈ ಪ್ರದೇಶಗಳ ಕಡೆಗಣನೆ ಯಾಕೆ? ಇದು ಹೀಗೆಯೇ ಮುಂದುವರಿದರೆ ಆ ಭಾಗದ ನಾವೆಲ್ಲರೂ ಗ್ರಾ.ಪಂ.ಗೆ ಬಂದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಆ ವಾರ್ಡ್‌ನವರು ಹೇಳಿದಾಗ ಉತ್ತರಿಸಿದ ಅಧ್ಯಕ್ಷ ಸದಾನಂದ ಶೆಟ್ಟಿಯವರು, ಮುಂದಿನ ಸಲ ಮಾಡಲಾಗುವುದು ಎಂದು ಚರ್ಚೆಗೆ ತೆರೆ ಎಳೆದರು. ಇಲ್ಲಿ ವಿದ್ಯುತ್ ತಂತಿಗಳಿಗೆ ಮರದ ಗೆಲ್ಲುಗಳು ತಾಗುತ್ತಿದ್ದು, ಮಳೆಗಾಲದಲ್ಲಿ ತೊಂದರೆಯಾಗುತ್ತಿದೆ. ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ಆದ್ದರಿಂದ ಮರಗಳ ಗೆಲ್ಲು ತೆರವು ಮಾಡುವ ಕೆಲಸ ಮೆಸ್ಕಾಂನವರು ಮಾಡಬೇಕು ಎಂಬ ಆಗ್ರಹ ಸಭೆಯಲ್ಲಿ ಕೇಳಿ ಬಂತು. ಕೆಮ್ಮಾರದಲ್ಲಿ ರಸ್ತೆ ಕೆಸರುಮಯವಾಗಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ತಾತ್ಕಾಲಿಕವಾಗಿ ಇದಕ್ಕೆ ಚರಳು ಹಾಕುವ ಕೆಲಸ ಗ್ರಾ.ಪಂ. ಮಾಡಬೇಕು ಎಂಬ ಬೇಡಿಕೆಯೂ ಸಭೆಯಲ್ಲಿ ವ್ಯಕ್ತವಾಯಿತು.


ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಶಾಂಭವಿ, ಸದಸ್ಯರಾದ ಚಂದ್ರಾವತಿ, ಭವಾನಿ, ಸವಿತಾ, ನಾರಾಯಣ ಎಸ್., ಸತೀಶ್ ಎನ್. ಶೆಟ್ಟಿ, ಲಕ್ಷ್ಮೀಶ, ಹೇಮಾವತಿ, ನಿತಿನ್ ಬಿ., ಉಷಾ ಎಚ್.ಎನ್., ವಾರಿಜಾಕ್ಷಿ, ಹೇಮಂತ, ಗೀತಾ ದಾಸರಮೂಲೆ ಉಪಸ್ಥಿತರಿದ್ದರು. ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ನೋಡಲ್ ಅಧಿಕಾರಿಯಾಗಿದ್ದ ಪುತ್ತೂರು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸವಿತಾ ಕುಮಾರಿ ಸಭೆಯನ್ನು ಮುನ್ನಡೆಸಿದರು. ಗ್ರಾಮಸ್ಥರಾದ ನೀಲಯ್ಯ ಎಸ್., ಸೋಮೇಶ್ ಕೆ., ಸೇಸಪ್ಪ ನೆಕ್ಕಿಲು ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದರು. ಗ್ರಾ.ಪಂ. ಪ್ರಭಾರ ಪಿಡಿಒ ಸತೀಶ ಬಂಗೇರ ಸ್ವಾಗತಿಸಿ, ವಂದಿಸಿದರು.

ಬೀಳುವ ಪರಿಸ್ಥಿತಿಯಲ್ಲಿ ಟ್ಯಾಂಕ್!
ಜೆಜೆಎಂನಡಿ ಮಾಡಲಾದ ಕುಡಿಯುವ ನೀರಿನ ಕಾಮಗಾರಿಯನ್ನು ಗ್ರಾ.ಪಂ.ಗೆ ಹಸ್ತಾಂತರಿಸಲಾಗಿದೆ. ಆದರೆ ನಂದಿನಿನಗರದಲ್ಲಿ ಈ ಯೋಜನೆಯಡಿ ನಿರ್ಮಾಣವಾದ ಕುಡಿಯುವ ನೀರಿನ ಟ್ಯಾಂಕ್ ಬೆಟ್ಟದ ಮೇಲೆ ಇದ್ದು, ಇದು ಈಗ ಬೀಳುವ ಸ್ಥಿತಿಯಲ್ಲಿದೆ. ಕಾಮಗಾರಿ ಹಸ್ತಾಂತರಗೊಂಡರೂ ಇದಕ್ಕೆ ನೀರು ತುಂಬಿಸುವ ಕಾರ್ಯ ಇನ್ನೂ ಆಗಿಲ್ಲ. ಗ್ರಾ.ಪಂ.ನವರು ಸರಿಯಾಗಿ ಪರಿಶೀಲನೆ ಮಾಡದೇ ಈ ಕಾಮಗಾರಿಯ ಹಸ್ತಾಂತರ ಮಾಡಿಕೊಂಡದ್ದು ಏಕೆ? ಹಸ್ತಾಂತರಕ್ಕೆ ಪಡೆದುಕೊಂಡರೂ ಈ ಟ್ಯಾಂಕಿಗೆ ನೀರು ತುಂಬಿಸಲಿಲ್ಲ ಯಾಕೆ ? ಇಲ್ಲಿನವರಿಗೆ ಈಗ ಬೇರೆ ಟ್ಯಾಂಕ್‌ನಿಂದ ನೀರು ಸರಬರಾಜಾಗುತ್ತದೆ. ಆದ್ದರಿಂದ ಕೂಡಲೇ ಈ ಟ್ಯಾಂಕ್‌ಗೆ ನೀರು ತುಂಬಿಸಬೇಕು ಎಂಬ ಆಗ್ರಹ ಸಭೆಯಲ್ಲಿ ಕೇಳಿ ಬಂತು.

LEAVE A REPLY

Please enter your comment!
Please enter your name here