ಉಪ್ಪಿನಂಗಡಿ: ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕದ ಆಶ್ರಯದಲ್ಲಿ ವಿದ್ಯಾರ್ಥಿಗಳಲ್ಲಿನ ಸಾಹಿತ್ಯಾಸಕ್ತಿ ಅರಳಿಸುವ ಸಲುವಾಗಿ ಆಯೋಜಿಸಲಾದ ‘ಕನ್ನಡ-ಕಲರವ’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳನ್ನು ಶನಿವಾರದಂದು ಉಪ್ಪಿನಂಗಡಿಯ ಇಂದ್ರಪ್ರಭ ಆಡಿಟೋರಿಯಂ ನಲ್ಲಿ ಉದ್ಘಾಟಿಸಲಾಯಿತು.
ಉದ್ಘಾಟನೆಯನ್ನು ನೆರವೇರಿಸಿದ ವೈದ್ಯ ಡಾ . ಗೋವಿಂದಪ್ರಸಾದ್ ಕಜೆಯವರು, ಕನ್ನಡ ನಾಡು ನುಡಿ ರಕ್ಷಣೆಗೆ ರಾಜ್ಯದಲ್ಲಿ ಹೋರಾಟ ಸಮಿತಿ ರಚನೆಯಾಗಿರುವುದು ವಿಪರ್ಯಾಸ . ಭಾಷಾ ಪ್ರೇಮ ನಮ್ಮಲ್ಲಿ ರಕ್ತಗತವಾಗಿ ಮೂಡಿಬರಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕದ ಅಧ್ಯಕ್ಷ ಕರುಣಾಕರ ಸುವರ್ಣ ಮಾತನಾಡಿ , ವಿದ್ಯಾರ್ಥಿ ಜೀವನದಲ್ಲೇ ಯುವ ಪ್ರತಿಭೆಗಳು ಸಾಹಿತ್ಯದತ್ತ ಆಕರ್ಷಿತವಾಗುವಂತಾಗಲು ಕನ್ನಡ ಕಲರವ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಸದಸ್ಯ , ಹೋಬಳಿ ಘಟಕದ ಕಾರ್ಯದರ್ಶಿ ಉದಯ ಕುಮಾರ್, ಸದಸ್ಯ ನವೀನ್ ಬ್ರ್ಯಾಗ್ಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಸ್ವರಚಿತ ಕವನ ವಾಚನ , ಭಾಷಣ , ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಶಾಂತಾ ಕುಂಟಿನಿ, ಸತ್ಯಭಾಮ ಎ ನೈತಡ್ಕ, ಗೀತಾಲಕ್ಷ್ಮಿ ತಾಳ್ತಜೆ , ಲವಿನಾ ಪಿಂಟೋ, ತೇಜಶ್ವಿನಿ ಅಂಬೆಕಲ್ಲು ಹಾಗೂ ಡಾ. ಗೋವಿಂದಪ್ರಸಾದ್ ಕಜೆ ತೀರ್ಪುಗಾರರಾಗಿ ಭಾಗವಹಿಸಿದ್ದರು. ಇಂದ್ರಪ್ರಸ್ಥ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವೀಣಾ ಪ್ರಸಾದ್ ಸ್ವಾಗತಿಸಿದರು.