ಪುತ್ತೂರು: ಸಂಪ್ಯ ಶ್ರೀ ಮಹಾವಿಷ್ಣುಮೂತಿ ದೇವಸ್ಥಾನ ಹಾಗೂ ಆರೋಗ್ಯ ರಕ್ಷಾ ಸಮಿತಿಯ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿ ತಿಂಗಳು ನಡೆಯುವ ಉಚಿತ ವೈದ್ಯಕೀಯ ಶಿಬಿರದ 41ನೇ ಶಿಬಿರವು ಆ.3ರಂದು ನಡೆಯಿತು.
ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಹಾವೀರ ಆಸ್ಪತ್ರೆಯ ಡಾ.ಅಶೋಕ್ ಪಡಿವಾಳ್ ಮಾತನಾಡಿ, ಆರೋಗ್ಯಕ್ಕಿಂತ ದೊಡ್ಡದು ಯಾವುದೂ ಇಲ್ಲ. ಅನಾರೋಗ್ಯ ಬಂದಾಗಲೇ ಅರೋಗ್ಯ ಮಹತ್ವದ ಅರಿವಾಗುವುದು. ಅನಾರೋಗ್ಯವಿದ್ದರಿಗೆ ಆರೋಗ್ಯವೇ ಮಹತ್ವವಾಗಿರುತ್ತದೆಯೇ ವಿನಃ ಅವರಿಗೆ ಹಣ ಕೊಟ್ಟರೂ ಬೇಡ ಎಂದರು. ಕಳೆದ ಮೂರೂವರೆ ವರ್ಷಗಳಿಂದ ಸಂಪ್ಯ ದೇವಸ್ಥಾನದಲ್ಲಿ ನಿರಂತರವಾಗಿ ನಡೆಯುತ್ತಿರುವ ಉಚಿತ ವೈದ್ಯಕೀಯ ಶಿಬಿರವು ಬಹುದೊಡ್ಡ ಸೇವೆಯಾಗಿದೆ. ದೇವರಿಗೆ ಇದಕ್ಕಿಂತ ದೊಡ್ಡ ಸೇವೆ ಬೇಕಾಗಿಲ್ಲ. ಶಿಬಿರವು ನಿರಂತರವಾಗಿ ನಡೆದು ಇನ್ನಷ್ಟು ಮಂದಿ ಶಿಬಿರದ ಪ್ರಯೋಜನ ಪಡೆದುಕೊಳ್ಳಲಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಮನುಷ್ಯರಿಗೆ ಖಾಯಿಲೆ ಬಾರದಂತೆ ಮುಂಜಾಗ್ರತೆ ವಹಿಸುವುದು ಬಹುಮುಖ್ಯವಾಗಿದೆ. ಇದಕ್ಕಾಗಿ ಕೆಲವೊಂದು ಸುಲಭ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಜಾಗೃತಿ ಮೂಡಿಸಿದಾಗ ಹಲವು ರೀತಿಯ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಬಹುದು. ಎಲ್ಲರ ಸಹಕಾರದಿಂದ ಶಿಬಿರ ಯಶಸ್ವಿಯಾಗಿ ನಡೆಯುತ್ತಿದ್ದು ಇದು ಎಲ್ಲರಿಗೂ ಸ್ಪೂರ್ತಿಯಾಗಿದೆ. ದೇವಸ್ಥಾನಕ್ಕೆ ಮಹಾವೀರ ಆಸ್ಪತ್ರೆಯಿಂದ ಜನರೇಟರ್ ಕೊಡುಗೆ ನೀಡಿದ್ದು ಎಲ್ಲಾ ಕಾರ್ಯಕ್ರಮಗಳಿಗೆ ಸಹಕಾರಿಯಾಗಲಿದೆ ಎಂದರು.
ಜನರೇಟರ್ ಉದ್ಘಾಟನೆ:
ಬೊಳುವಾರು ಮಹಾವೀರ ಮೆಡಿಕಲ್ ಸೆಂಟರ್ನಿಂದ ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದ ಜನರೇಟರ್ ಕಾರ್ಯಕ್ರಮದಲ್ಲಿ ಉದ್ಘಾಟನೆಗೊಂಡಿತು. ಮಹಾವೀರ ಮೆಡಿಕಲ್ ಸೆಂಟರ್ನ ಮ್ಹಾಲಕ ಡಾ.ಅಶೋಕ್ ಪಡಿವಾಳ್ ಜನರೇಟರ್ನ್ನು ಉದ್ಘಾಟಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ಬಿ.ಪಿ ಪರೀಕ್ಷಿಸುವ ಯಂತ್ರ ಕೊಡುಗೆ:
ದೇವಸ್ಥಾನದಲ್ಲಿ ನಡೆಯುವ ವೈದ್ಯಕೀಯ ಶಿಬಿರಕ್ಕೆ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರು ಕಲ್ಲಾರೆಯ ರಾಜೇಶ್ರವರು ಬಿ.ಪಿ ಪರೀಕ್ಷೆ ಮಾಡುವ ಯಂತ್ರವನ್ನು ಕೊಡುಗೆಯಾಗಿ ನೀಡಿದರು.
ಮೈಥಿಲಿ ಪ್ರಾರ್ಥಿಸಿದರು. ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಉದಯ ಕುಮಾರ್ ರೈ ಸಂಪ್ಯ ಸ್ವಾಗತಿಸಿದರು. ನವಚೇತನ ಯುವಕ ಮಂಡಲದ ಅಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ ವಂದಿಸಿದರು. ಹರಿಣಿ ಪುತ್ತೂರಾಯ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ತಜ್ಞರಿಂದ ಸಾಮಾನ್ಯ ವೈದ್ಯಕೀಯ ತಪಾಸಣೆ, ಆಯುರ್ವೇದ ವೈದ್ಯಕೀಯ ತಪಾಸಣೆ, ಇಸಿಜಿ, ಫಿಜಿಯೋಥೆರಪಿ, ಮಧುಮೇಹ ರಕ್ತಪರೀಕ್ಷೆ, ಔಷಧಿಗಳನ್ನು ವಿತರಿಸಲಾಯಿತು. ನೂರಾರು ಮಂದಿ ಭಾಗವಹಿಸಿ ಶಿಬಿರ ಪ್ರಯೋಜನ ಪಡೆದುಕೊಂಡರು. ನವಚೇತನ ಯುವಕ ಮಂಡಲ ಸಂಪ್ಯ, ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮುಕ್ರಂಪಾಡಿ, ಐಕ್ಯ ಕಲಾ ಸೇವಾ ಟ್ರಸ್ಟ್ ಪುತ್ತೂರು, ಮಹಾವೀರ ಆಸ್ಪತ್ರೆ ಪುತ್ತೂರು, ಭಾರತೀಯ ಜನೌಷಧಿ ಕೇಂದ್ರಗಳು ಪುತ್ತೂರು, ಹಲವು ಔಷಧಿ ಕಂಪೆನಿಗಳು ಹಾಗೂ ಭಕ್ತಾದಿಗಳು ಸಹಕರಿಸಿದರು.