ಸಂಘಟನೆಗಳ ಮುಖಂಡರೊಂದಿಗೆ ಇಂದು ಸಿಎಂ ಸಭೆ
ಬೆಂಗಳೂರು: 38 ತಿಂಗಳ ವೇತನ ಬಾಕಿ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸಾರಿಗೆ ನೌಕರರ ಸಂಘಟನೆಗಳು ಆ.5ಕ್ಕೆ ರಾಜ್ಯವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಈ ಕುರಿತು ಚರ್ಚಿಸಲು ಆ.4ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರ ಉಪಸ್ಥಿತಿಯಲ್ಲಿ ಸಾರಿಗೆ ನಿಗಮಗಳ ನೌಕರ ಸಂಘಟನೆಗಳ ಪದಾಽಕಾರಿಗಳೊಂದಿಗೆ ಮಹತ್ವದ ಸಭೆ ಕರೆಯಲಾಗಿದೆ.
ವೇತನ ಹಿಂಬಾಕಿಯನ್ನು ಶೇ.15ರಷ್ಟು ಹೆಚ್ಚಳದೊಂದಿಗೆ ಸಾರಿಗೆ ನೌಕರರಿಗೆ ಪಾವತಿ ಮಾಡಬೇಕು. 2023ರಲ್ಲಿದ್ದ ಸಾರಿಗೆ ನೌಕರರ ಮೂಲವೇತನಕ್ಕೆ ಶೇ.31ರಷ್ಟು ತುಟ್ಟಿ ಭತ್ಯೆಯನ್ನು ವಿಲೀನಗೊಳಿಸಿ, 2024ರ ಜ.೧1ರಿಂದ ಶೇ.25ರಷ್ಟು ವೇತನವನ್ನು ಹೆಚ್ಚಳ ಮಾಡಬೇಕು ಎಂದು ಸಾರಿಗೆ ನೌಕರರ ಸಂಘಟನೆಗಳು ಸರಕಾರವನ್ನು ಒತ್ತಾಯಿಸಿವೆ. ಸಾರಿಗೆ ನೌಕರರ ಈ ಬೇಡಿಕೆಗಳನ್ನು ಹಲವಾರು ಬಾರಿ ಸರಕಾರದ ಗಮನಕ್ಕೆ ತಂದರೂ ಸರಕಾರವು ಬೇಡಿಕೆಗಳನ್ನು ಈಡೇರಿಸಿಲ್ಲ. 2021ರ ಮುಷ್ಕರದ ವೇಳೆ ವಜಾ ಮಾಡಲಾದ ನೌಕರರ ಮರು ನೇಮಕವನ್ನೂ ಮಾಡಿಲ್ಲ. ಹೀಗಾಗಿ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದ್ದು,ಸಾರಿಗೆ ನಿಗಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 1.15 ಲಕ್ಷ ಸಿಬ್ಬಂದಿ ಈ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎಚ್ಚರಿಕೆ ನೀಡಲಾಗಿದೆ. ಮುಷ್ಕರ ನಡೆದರೆ ಸರಕಾರಿ ಬಸ್ ಸೇವೆ ಆ ದಿನ ಸಂಪೂರ್ಣ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ಇಂದು ಸಿಎಂ ನೇತೃತ್ವದಲ್ಲಿ ಸಭೆ:
ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಚರ್ಚಿಸಲು ಸಿಎಂ ಅಧ್ಯಕ್ಷತೆಯಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ಆ.4ರಂದು ಮಹತ್ವದ ಸಭೆ ನಡೆಯಲಿದೆ. ಮಧ್ಯಾಹ್ನ ಕೆಎಸ್ಆರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಹಾಗೂ ಕೆಎಸ್ಆರ್ಟಿಸಿ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳ ಜತೆ ಸಭೆ ನಡೆಯಲಿದೆ.