ಮೊಳಹಳ್ಳಿ ಶಿವರಾವ್ ಅವರು, ಸಹಕಾರ ಕ್ಷೇತ್ರವಲ್ಲದೆ ಶಿಕ್ಷಣ ಹಾಗೂ ಸ್ಥಳೀಯಾಡಳಿತ ಕ್ಷೇತ್ರಕ್ಕೂ ಕೊಡುಗೆ ಸಲ್ಲಿಸಿದ್ದಾರೆ – ಡಾ.ಎಂ.ಎನ್ ರಾಜೇಂದ್ರ ಕುಮಾರ್
ಮಂಗಳೂರು: ಮೊಳಹಳ್ಳಿ ಶಿವರಾವ್ ಜನ್ಮದಿನಾಚರಣೆ ಅಂಗವಾಗಿ ಸಹಕಾರಿಗಳು ಇಂದು ತೆಗೆದುಕೊಂಡ ಪ್ರಮಾಣವಚನದಲ್ಲಿ ಬೋಧಿಸಿದಂತೆ ಸಹಕಾರಿಗಳು ನಡೆದುಕೊಂಡರೆ ದೇಶದಲ್ಲೇ ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯವಿದೆ. ಕರಾವಳಿ ಭಾಗದಲ್ಲಿ ಅದರಲ್ಲೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಗಟ್ಟಿಯಾಗಿ ತಳವೂರಲು ಕರಾವಳಿ ಸಹಕಾರ ಕ್ಷೇತ್ರದ ಪಿತಾಮಹ ಮೊಳಹಳ್ಳಿ ಶಿವರಾವ್ ಅವರು ಹಾಕಿಕೊಟ್ಟ ಗಟ್ಟಿ ಅಡಿಪಾಯ ಕಾರಣ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರು ಹೇಳಿದರು.

ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡ ದಿ.ಮೊಳಹಳ್ಳಿ ಶಿವರಾವ್ ಅವರ 145ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೊಳಹಳ್ಳಿ ಶಿವರಾವ್ ಅವರು, ಸಹಕಾರ ಕ್ಷೇತ್ರವಲ್ಲದೆ ಶಿಕ್ಷಣ ಹಾಗೂ ಸ್ಥಳೀಯಾಡಳಿತ ಕ್ಷೇತ್ರಕ್ಕೂ ಕೊಡುಗೆ ಸಲ್ಲಿಸಿದ್ದಾರೆ. ಆ ಕ್ಷೇತ್ರದಲ್ಲೂ ಅನೇಕರನ್ನು ಬೆಳೆಸಿದ್ದಾರೆ. ಆದರೆ ಅವರ ಹೆಸರನ್ನು ನೆನಪು ಮಾಡಿಕೊಳ್ಳುತ್ತಿರುವುದು ಸಹಕಾರ ಕ್ಷೇತ್ರದವರು ಮಾತ್ರ. ಸಹಕಾರ ಕ್ಷೇತ್ರದವರು ಎಲ್ಲ ಕ್ಷೇತ್ರದವರನ್ನೂ ಬೆಳೆಸುವ ಛಾತಿ ಉಳ್ಳವರು ಎಂದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಸಾಲ ಶೇ.100ಕ್ಕೆ 100ರಷ್ಟೂ ಮರುಪಾವತಿಯಾಗುತ್ತದೆ. ಇಲ್ಲಿನ ರೈತರು ರೂಢಿಸಿಕೊಂಡಿರುವ ಶಿಸ್ತು ಇದಕ್ಕೆ ಕಾರಣ. ದೇಶದಲ್ಲಿ ಶೇ.100 ಕೃಷಿ ಸಾಲ ಮರುಪಾವತಿಯಾಗುವ ಜಿಲ್ಲೆಯೊಂದಿದ್ದರೆ ಅದು ಅವಿಭಜಿತ ದಕ್ಷಿಣ ಕನ್ನಡ ಮಾತ್ರ ಎಂದು ಡಾ.ರಾಜೇಂದ್ರ ಕುಮಾರ್ ಶ್ಲಾಘಿಸಿದರು. ನಮ್ಮ ಜಿಲ್ಲೆ ವಾಣಿಜ್ಯ ಬ್ಯಾಂಕುಗಳ ತವರೂರು ಎಂದು ಕರೆಯಲ್ಪಟ್ಟಿದೆ. ಆದರೆ ಇಲ್ಲಿನ ಬ್ಯಾಂಕುಗಳು ಪರಸ್ಪರ ವಿಲೀನಗೊಳ್ಳುತ್ತಿವೆ. ಆದರೆ ಇಲ್ಲಿನ ಸಹಕಾರ ಸಂಘಗಳು ಜನರ ಬಳಿ ಹೋಗಿ ಸೇವೆ ನೀಡುತ್ತಿವೆ. ನಮ್ಮ ಜಿಲ್ಲೆಯಲ್ಲಿ ಸಹಕಾರಿ ಬ್ಯಾಂಕುಗಳು ಮೊದಲ ಆದ್ಯತೆ ನೀಡುವುದು ಕೃಷಿ ಕ್ಷೇತ್ರಕ್ಕೆ. ಅನಂತರ ವಾಣಿಜ್ಯ ಉದ್ದೇಶಗಳಿಗೆ ಸಾಲ ನೀಡುತ್ತವೆ. ನಾವು ಇನ್ನಷ್ಟು ಬೆಳೆಯಬೇಕು. ವಾಣಿಜ್ಯ ಬ್ಯಾಂಕುಗಳನ್ನು ಮೀರಿಸಿ ಸಹಕಾರ ಬ್ಯಾಂಕ್‌ಗಳು ಅಭಿವೃದ್ಧಿ ಹೊಂದಬೇಕು ಎಂಬ ಬಗ್ಗೆ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಆಶಯ ವ್ಯಕ್ತಪಡಿಸಿದರು.
ವಿಶ್ರಾಂತ ಪ್ರಾಂಶುಪಾಲ ಡಾ.ಉದಯ ಕುಮಾರ್ ಇರ್ವತ್ತೂರು ಮೊಳಹಳ್ಳಿ ಶಿವರಾವ್ ಬಗ್ಗೆ ಉಪನ್ಯಾಸ ನೀಡಿದರು. ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಸ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ್ ಹೆಗ್ಡೆ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು. ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅಧ್ಯಕ್ಷತೆ ವಹಿಸಿ, ಪಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಸಹಕಾರಿ ಯೂನಿಯನ್‌ನ ಉಪಾಧ್ಯಕ್ಷ ನೀಲಯ ಎಂ ಅಗರಿ, ನಿರ್ದೇಶಕರಾದ ಚಿತ್ತರಂಜನ್ ಬೋಳಾರ್, ಸುಧಾಕರ ಶೆಟ್ಟಿ, ಬಿ.ಪದ್ಮಶೇಖರ್ ಜೈನ್, ಸತೀಶ್ ಕೆ ಪೆರಾಡಿ, ವಿಷ್ಣು ಭಟ್, ಮಂಜುನಾಥ ಎನ್ ಎಸ್, ಸಂಜೀವ ಪೂಜಾರಿ, ಸವಿತಾ ಎನ್ ಶೆಟ್ಟಿ, ಜಾಯ್ಲಸ್ ವಿಲ್ಫ್ರೆಡ್ ಡಿಸೋಜ, ಪ್ರವೀಣ್ ಪಿಂಟೋ, ಸಾವಿತ್ರಿ ರೈ, ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಎಚ್.ಎನ್ ರಮೇಶ್, ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬೆಳಪು ದೇವಿಪ್ರಸಾದ್ ಶೆಟ್ಟಿ, ಸದಾಶಿವ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು. ಯೂನಿಯನ್‌ನ ಸಿಇಒ ಎಸ್.ವಿ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಯೂನಿಯನ್‌ನ ನಿರ್ದೇಶಕ ಡಾ. ಎಸ್ ಆರ್ ಹರೀಶ್ ಆಚಾರ್ಯ ವಂದಿಸಿದರು.

ಕರಾವಳಿ ಸಹಕಾರಿ ಮಾಸಪತ್ರಿಕೆ ಬಿಡುಗಡೆ
ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ವತಿಯಿಂದ ಹೊರತರಲಾದ ಮಾಸಪತ್ರಿಕೆ ಕರಾವಳಿ ಸಹಕಾರಿಯನ್ನು ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರು ಬಿಡುಗಡೆ ಮಾಡಿದರು. ಬಳಿಕ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ವತಿಯಿಂದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಮೊಳಹಳ್ಳಿ ಶಿವರಾವ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ನಂತರ ಸಹಕಾರ ಪ್ರತಿಜ್ಞೆ ಕೈಗೊಳ್ಳಲಾಯಿತು.
ಕರಾವಳಿ ಸಹಕಾರಿ ಪತ್ರಿಕೆ ಉಪಯುಕ್ತ ದಾಖಲೆ
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್‌ನಿಂದ ಹೊರತಂದಿರುವ ಕರಾವಳಿ ಸಹಕಾರಿ ಮಾಸಪತ್ರಿಕೆಯು ಉಪಯುಕ್ತ ದಾಖಲೆಯಾಗಿ ಹೊರಹೊಮ್ಮಲಿ ಎಂದು ಡಾ.ಉದಯಕುಮಾರ್ ಇರ್ವತ್ತೂರು ಹಾರೈಸಿದರು. ಇತಿಹಾಸದ ಬಗ್ಗೆ ಅರಿವಿಲ್ಲದೆ ಇದ್ದರೆ ಭವಿಷ್ಯದ ನಿರ್ಮಾಣ ಕಷ್ಟ. ಕರಾವಳಿ ಸಹಕಾರಿ ಮಾಸಪತ್ರಿಕೆಯು ಭವಿಷ್ಯದ ದಿನಗಳಲ್ಲಿ ಈ ಕಾಲದ ಸಹಕಾರ ಚಳುವಳಿಗಳ ಬಗ್ಗೆ ಮಾಹಿತಿ ನೀಡುವಂತೆ ಮೂಡಿಬರಲಿ ಎಂದು ಸಲಹೆ ನೀಡಿದರು.