ಪುತ್ತೂರು: ಅಡಿಕೆಗೆ ಉಪಬೆಳೆಯಾಗಿ ಕಾಳುಮೆಣಸು ಮತ್ತು ಕಾಫಿ ಬೆಳೆಯ ಕುರಿತು ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಕಾಳುಮೆಣಸು ಮತ್ತು ಕಾಫಿಬೆಳಗಾರರ ಒಕ್ಕೂಟದಿಂದ ಉಚಿತವಾಗಿ ಮಾಹಿತಿ ಶಿಬಿರ ಮತ್ತು ಸಮಾವೇಶವು ಆ.10ರಂದು ಮುಕ್ರಂಪಾಡಿ ಸುಭದ್ರ ಸಭಾ ಮಂದಿರದಲ್ಲಿ ನಡೆಯಲಿದೆ ಎಂದು ಒಕ್ಕೂಟದ ಅಧ್ಯಕ್ಷ ಶಶಿಕುಮಾರ್ ಭಟ್ ಪಡಾರು ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಅಡಿಕೆಗೆ ಬಾಧಿಸುತ್ತಿರುವ ಹಳದಿ ರೋಗ, ಎಲೆಚುಕ್ಕಿ ರೋಗ, ಎಳೆ ನಳ್ಳಿ ಉದುರುವಿಕೆಯಂತಹ ಸಮಸ್ಯೆಗಳು, ಅಡಿಕೆ ಕೊಯ್ಯಲು, ಔಷಧ ಸಿಂಪಡಣೆಗೆ ನುರಿತ ಕಾರ್ಮಿಕರ ಅಭಾವ ಉಂಟಾಗುತ್ತರುವ ಸಂದರ್ಭದಲ್ಲಿ ಅಡಿಕೆ ಕೃಷಿಕರನ್ನನು ನಿಧಾನಕ್ಕೆ ಅಡಿಕೆ ಕೃಷಿಯಿಂದ ಕಾಳುಮೆಣಸು, ಕಾಫಿಯಂತಹ ಬೆಳೆಗಳೆಡೆಗೆ ದೃಷ್ಟಿ ಹಾಯಿಸುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಕಾಳುಮೆಣಸು ಮತ್ತು ಕಾಫಿಬೆಳೆಯಲ್ಲಿ ತೊಡಗಿಕೊಳ್ಳುವ ಚಿಂತನೆಯಲ್ಲಿರುವವರನ್ನು ಮುಖ್ಯವಾಗಿ ಇರಿಸಿಕೊಂಡು ಮಾಹಿತಿ ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ. ಮಾಹಿತಿ ಮತ್ತು ಸಮಾವೇಶ ಉಚಿತವಾಗಿ ನಡೆಯಲಿದೆ. ಬೆಳಿಗ್ಗೆ ಗಂಟೆ 9.30ಕ್ಕೆ ಮಾಹಿತಿ ಕಾರ್ಯಕ್ರಮ ಆರಂಭಗೊಳ್ಳಲಿದೆ. ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೂಡ್ಗಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಖಿಲ ಭಾರತ ಕಾಳುಮೆಣಸು ಬೆಳೆಗಾರರ ಸಂಘದ ವಿಜ್ಞಾನಿ ಡಾ. ವೇಣುಗೋಪಾಲ್ ಸಮಗ್ರ ಕಾಳುಮೆಣಸು ಬೆಳೆಯುವ ಮಾಹಿತಿ ಮತ್ತು ಸಂರಕ್ಷಣಾ ವಿಧಾನದ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ. 7 ಬಿನ್ ಟೀಮ್‌ನ ಮುಖ್ಯಸ್ಥ ಡಾ. ಎಚ್ ಎಸ್ ಧರ್ಮರಾಜ್ ಸಕಲೇಶಪುರ ಅವರು ಕಾಫಿ ಮತ್ತು ಕಾಳುಮೆಣಸಿಗೆ ನೀಡುವ ಪೋಷಕಾಂಶಗಳ ಕುರಿತು ಸಮಗ್ರ ಮಾಹಿತಿ ನೀಡಲಿದ್ದಾರೆ. ಇಂದೋರ್‌ನ ಶ್ರೀ ಸದ್ಧಿ ಅಗ್ರಿ ಕಂಪೆನಿಯ ಮುಖ್ಯಸ್ಥ ಪೆರುವೊಡಿ ನಾರಾಯಣ ಭಟ್ ಅವರು ಅಡಿಕೆ ಬೆಳೆಯುವ ವಿಧಾನ ಮತ್ತು ಪೋಷಕಾಂಶಗಳ ಸಮಗ್ರ ಮಾಹಿತಿ ನೀಡಲಿದ್ದಾರೆ. ಅಡಿಕೆ ಮತ್ತು ಕಾಳುಮೆಣಸು ಕೃಷಿಕ ಸುರೇಶ್ ಬಲ್ನಾಡು, ಅರವಿಂದ ಮುಳ್ಳಂಕೊಚ್ಚಿ ಆಲಂಕಾರು, ಪ್ರಗತಿಪರ ಕಾಳುಮೆಣಸು ಕೃಷಿಕ ಡಾ. ವೇಣುಗೋಪಾಲ್ ಕಳೇಯತೋಡಿ, ಧೂಪದ ಮರದಲ್ಲಿ ಕಾಳುಮೆಣಸು ಕೃಷಿ ಮಾಡಿದ ಸಾಧಕ ಅನಂತರಾಮಕೃಷ್ಣ ಪಳ್ಳತ್ತಡ್ಕ, ಅಡಿಕೆಮರ ಏರುವ ಯಂತ್ರವನ್ನು ಅವಿಷ್ಕರಿಸಿದ ಕೋಮಲೆ ಗಣಪತಿ ಭಟ್, ಕಾಳುಮೆಣಸು ಕಸಿ ಕಟ್ಟಿ ಬೆಳೆಸಿದ ಅನುಭವಿ ಸ್ವಪ್ನಾ ಸೇಡಿಯಾಪು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
ಸನ್ಮಾನ
ಕಾಳುಮೆಣಸು ಮತ್ತು ಕಾಫಿ ಬೆಳೆಯಲ್ಲಿ ಪ್ರಗತಿಪರ ಕೃಷಿಕರಾಗಿರುವ ಅಜಿತ್ ಪ್ರಸಾದ್ ರೈ ದಂಪತಿ ಮತ್ತು ಪೆರುವೋಡಿ ನಾರಾಯಣ ಭಟ್ ಅವರನ್ನು ಸನ್ಮಾನಿಸಲಾಗುವುದು ಎಂದ ಶಶಿಕುಮಾರ್ ಭಟ್ ಅವರು ಕಾರ್ಯಾಗಾರದಲ್ಲಿ ಹಲವು ಹಣ್ಣುಗಳ ಗಿಡಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಎಸ್.ಆರ್.ಕೆ.ಲ್ಯಾಡರ್‍ಸ್ ಅವರಿಂದ ಕಾಳುಮೆಣಸು ಪ್ರತ್ಯೇಕಿಸುವ ಯಂತ್ರ ಮತ್ತು ಆಕರ್ಷನ್ ಇಂಡಸ್ಟ್ರೀಸ್ ಅವರಿಂದ ಕಾಳುಮೆಣಸು ಬೆಳೆಯುವ ಸಿಮೆಂಟ್ ಕಂಬಗಳ ಮಳಿಗೆಗಳು ಸಹಿತ ಹಲವಾರು ಉಪಕರಣಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಒಕ್ಕೂಟದ ಸದಸ್ಯರಾದ ವಕೀಲರ ಗೋವಿಂದ ಭಟ್ ಬಾಯಾಡಿ, ಕಾಳುಮೆಣಸು ಕೃಷಿಕ ಅಜಿತ್ ಪ್ರಸಾದ್ ರೈ, ಸೇಡಿಯಾಪು ಜನಾರ್ದನ ಭಟ್, ಒಕ್ಕೂಟದ ಕಾರ್ಯದರ್ಶಿ ಅಭಿಜೀತ್ ಬಿ ಪುತ್ತೂರು ಉಪಸ್ಥಿತರಿದ್ದರು.