ಪುತ್ತೂರು: ಆನೆ ಹಾವಳಿಯಿಂದಾಗಿ ಕೃಷಿಕರು ಕಂಗಲಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಒಂಟಿ ಸಲಗವೊಂದು ಕೆಯ್ಯೂರು ಗ್ರಾಮದ ವಿವಿಧ ಕಡೆಗಳಲ್ಲಿ ಕೃಷಿ ಹಾನಿಯುಂಟು ಮಾಡುತ್ತಿದೆ. ಆನೆ ಬಂದಾಗ ಅರಣ್ಯ ಇಲಾಖೆಯವರು ಬಂದು ಓಡಿಸ್ತಾರೆ ಆದರೆ ಓಡಿಸಿದ ಮರುದಿನ ಮತ್ತೆ ಬರುತ್ತದೆ. ಗ್ರಾಮಸ್ಥರಿಗೆ ಭಯ ಒಂದು ಕಡೆಯಾದರೆ, ಕೃಷಿ ಹಾನಿಯಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಆನೆಯನ್ನು ಶಾಶ್ವತವಾಗಿ ಅಭಯಾರಣ್ಯ ಅಥವಾ ದುಬಾರೆಗೆ ಕಳುಹಿಸುವ ವ್ಯವಸ್ಥೆಯನ್ನು ಅರಣ್ಯ ಇಲಾಖೆ ಮಾಡಬೇಕಾಗಿದೆ. ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳುವ ಎಂದು ಗ್ರಾಮಸ್ಥರು ಕೆಯ್ಯೂರು ಗ್ರಾಮಸಭೆಯಲ್ಲಿ ಒತ್ತಾಯಿಸಿದರು. ಅದರಂತೆ ನಿರ್ಣಯ ಕೈಗೊಳ್ಳಲಾಯಿತು.

ಗ್ರಾಮಸಭೆಯು ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರ ಅಧ್ಯಕ್ಷತೆಯಲ್ಲಿ ಆ.5 ರಂದು ಕೆಯ್ಯೂರು ಗ್ರಾಪಂ ಸಭಾಂಗಣದಲ್ಲಿ ನಡೆಯಿತು. ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ ಮಾರ್ಗದರ್ಶಿ ಅಧಿಕಾರಿಯಾಗಿ ಸಭೆ ನಡೆಸಿಕೊಟ್ಟರು.
ಅರಣ್ಯ ಇಲಾಖೆಯ ಮಾಹಿತಿ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿಸಿದ ಕೃಷಿಕ ಶಿವಶ್ರೀರಂಜನ್ ರೈ ದೇರ್ಲರವರು, ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಆನೆ ಬಂದು ಕೃಷಿ ಹಾನಿ ಮಾಡಿ ಹೋಗುತ್ತಿದೆ. ಕೃಷಿ ತೋಟಕ್ಕೆ ಆನೆ ದಾಳಿ ಮಾಡಿದರೆ ಅದೆಷ್ಟು ಕೃಷಿ ಹಾನಿ ಸಂಭವಿಸುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಆದ್ದರಿಂದ ಆನೆಯನ್ನು ಓಡಿಸುವ ಬದಲು ಅದನ್ನು ಹಿಡಿದು ಅಭಯಾರಣ್ಯಕ್ಕೆ ಕಳುಹಿಸುವ ವ್ಯವಸ್ಥೆ ಆಗಬೇಕು ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳುವ ಎಂದು ತಿಳಿಸಿದರು. ಇದಕ್ಕೆ ಕಿಟ್ಟ ಅಜಿಲ ಕಣಿಯಾರು ಸಹಿತ ಹಲವು ಮಂದಿ ಧ್ವನಿಗೂಡಿಸಿದರು.
ಹಂದಿಗಳನ್ನು ಕೊಲ್ಲಲು ಅನುಮತಿ ಕೊಡಿ…!?
ಕೃಷಿಕರಿಗೆ ಕಾಡು ಪ್ರಾಣಿಗಳಿಂದ ಉಪಟಳ ತಪ್ಪಿದ್ದಲ್ಲ ಒಂದು ಕಡೆಯಲ್ಲಿ ಆನೆ ದಾಳಿ ಮಾಡಿ ಕೃಷಿ ನಾಶ ಮಾಡುತ್ತಿದ್ದರೆ ಇನ್ನೊಂದು ಕಡೆಯಲ್ಲಿ ಹಂದಿಗಳ ಕಾಟ, ಮತ್ತೊಂದು ಕಡೆಯಲ್ಲಿ ಮಂಗಗಳ ಹಾವಳಿ ಇದರಿಂದಾಗಿ ಕೃಷಿಕ ಎಲ್ಲಾ ಕಡೆಯಿಂದಲೂ ನಷ್ಟವನ್ನೆ ಹೊಂದುತ್ತಿದ್ದಾನೆ ಎಂದು ತಿಳಿಸಿದ ಕೃಷಿಕ ಶಿವಶ್ರೀರಂಜನ್ ರೈ ದೇರ್ಲರವರು, ಆನೆಯನ್ನು ಏನು ಮಾಡಲೂ ಸಾಧ್ಯವಿಲ್ಲ ಆದರೆ ಹಂದಿಗಳನ್ನಾದರೂ ಕೊಲ್ಲಲು ಅನುಮತಿಯನ್ನು ಕೊಡಿ ಎಂದು ಕೇಳಿಕೊಂಡರು. ಕೇರಳ ಸರಕಾರ ಹಂದಿಗಳನ್ನು ಹೊಡೆಯಲು ಅನುಮತಿಯನ್ನು ಕೊಟ್ಟಿದೆ ಅದೇ ರೀತಿ ಕರ್ನಾಟಕ ಸರಕಾರ ಕೂಡ ಅನುಮತಿಯನ್ನು ಕೊಡಲೇಬೇಕು ಎಂದು ಆಗ್ರಹಿಸಿದ ಅವರು, ಹಂದಿಗಳಿಂದ ನಿರಂತರವಾಗಿ ಕೃಷಿ ಹಾನಿಯುಂಟಾಗುತ್ತಿದೆ ಎಂದು ಸಭೆಗೆ ತಿಳಿಸಿದರು.
ಕಳ್ಳ ಬಂದೂಕುಗಳು ಬಹಳಷ್ಟಿವೆ…?
ಚುನಾವಣೆ ಇತ್ಯಾದಿ ಸಮಯದಲ್ಲಿ ರೈತರ ಪರವಾನಿಗೆ ಇರುವ ಬಂದೂಕುಗಳನ್ನು ಕೊಂಡೋಗಿ ಪೊಲೀಸ್ ಠಾಣೆಯಲ್ಲಿ ಇಡಬೇಕಾಗುತ್ತದೆ. ಈ ರೀತಿ ಠಾಣೆಯಲ್ಲಿ ರಾಶಿ ಹಾಕುವುದರಿಂದ ಬಂದೂಕುಗಳು ಹಾಳಾಗುವ ಸಾಧ್ಯತೆಯೂ ಹೆಚ್ಚಿದೆ. ರೈತರ ಬಂದೂಕುಗಳಿಂದ ಯಾವುದೇ ತೊಂದರೆಯಾಗುವುದಿಲ್ಲ ಆದರೆ ಗ್ರಾಮದಲ್ಲಿ ಅದೆಷ್ಟೋ ಮಂದಿಯಲ್ಲಿ ಕಳ್ಳ ಬಂದೂಕುಗಳಿವೆ ಈ ಬಗ್ಗೆ ಪೊಲೀಸರು ಗಮನ ಹರಿಸಬೇಕಾಗಿದೆ. ಅದು ಬಿಟ್ಟು ರೈತರ ಬಂದೂಕುಗಳನ್ನು ತಿಂಗಳುಗಟ್ಟಲೆ ಠಾಣೆಯಲ್ಲಿಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕೃಷಿಕ ಶಿವಶ್ರೀರಂಜನ್ ರೈ ದೇರ್ಲ ತಿಳಿಸಿದರು.
ಸಾಕು ಪ್ರಾಣಿಗಳನ್ನು ಬೀದಿಗೆ ಬಿಡುವಂತಿಲ್ಲ…!
ಸಾಕು ಪ್ರಾಣಿಗಳನ್ನು ರಸ್ತೆಗೆ ಬಿಡುತ್ತಿರುವುದರಿಂದ ತೊಂದರೆಯಾಗುತ್ತಿದೆ. ರಸ್ತೆ ತುಂಬಾ ಬೀದಿ ನಾಯಿಗಳು ತುಂಬಿಕೊಂಡಿವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಶಿವಶ್ರೀರಂಜನ್ ರೈ ದೇರ್ಲ ಸಭೆಗೆ ತಿಳಿಸಿದರು. ಇದಕ್ಕೆ ಉತ್ತರಿಸಿದ ಪೊಲೀಸ್ ಇಲಾಖೆಯ ಅಧಿಕಾರಿ ವೆಂಕಪ್ಪರವರು, ಕರ್ನಾಟಕ ಪೊಲೀಸ್ ಕಾಯ್ದೆಯ ಪ್ರಕಾರ ಯಾವುದೇ ಸಾಕು ಪ್ರಾಣಿಗಳನ್ನು ಬೀದಿಗೆ ಬಿಡುವಂತಿಲ್ಲ ಎಂದು ಕಾನೂನು ಇದೆ. ದನ, ಕರು, ಆಡು, ನಾಯಿ ಯಾವುದೇ ಸಾಕು ಪ್ರಾಣಿಯಾದರೂ ಅದನ್ನು ಕಟ್ಟಿ ಹಾಕಿ ಮನೆಯ ಕೌಂಪೌಂಡ್ ಒಳಗೆಯೇ ಸಾಕಬೇಕು ಅದನ್ನು ಕೌಂಪೌಂಡ್‌ನಿಂದ ಹೊರಕ್ಕೆ ಬೀದಿ, ರಸ್ತೆಗೆ ಬಿಡುವಂತಿಲ್ಲ, ಒಂದು ವೇಳೆ ಬಿಟ್ಟು ಇದರಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಇದು ಕಾನೂನು ಪ್ರಕಾರ ಅಪರಾಧ ಆಗುತ್ತದೆ ತಿಳಿಸಿದರು.
ಅಪ್ರಾಪ್ತರಿಂದ ವಾಹನ ಚಾಲನೆ ಜಾಸ್ತಿಯಾಗುತ್ತಿದೆ…?
18 ರಿಂದ ಕಡಿಮೆ ವಯಸ್ಸಿನ ಮಕ್ಕಳು ಬೈಕ್, ಸ್ಕೂಟರ್ ಚಾಲನೆ ಮಾಡುತ್ತಿರುವುದು ಜಾಸ್ತಿಯಾಗುತ್ತಿದೆ. ಬೆಳಗ್ಗೆ ಮತ್ತು ಸಂಜೆ ಹೊತ್ತಲ್ಲಿ ಹೆಚ್ಚು ಇರುತ್ತದೆ ಈ ಸಮಯದಲ್ಲಿ ಪೊಲೀಸರು ಒಂದು ರೌಂಡ್ ಬಂದರೆ ತುಂಬಾ ಒಳ್ಳೆಯದು ಎಂದು ರಾಮಕೃಷ್ಣ ಭಟ್‌ರವರು ಸಲಹೆ ನೀಡಿದರು. ಇದಕ್ಕೆ ಉತ್ತರಿಸಿದ ಪಿಸಿ ವೆಂಕಪ್ಪರವರು, ಈ ಬಗ್ಗೆ ಗಮನ ಹರಿಸಲಾಗುವುದು ಅಲ್ಲದೆ ಅಪ್ರಾಪ್ತರು ವಾಹನ ಚಾಲನೆ ಮಾಡುವುದು ಕಂಡು ಬಂದರೆ ಆ ವಾಹನದ ಮಾಲೀಕರಿಗೆ ರೂ.25 ಸಾವಿರ ತನಕ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು.
ಸ್ವಿಪ್ಟ್ ಕಾರಲ್ಲಿ ಬಂದು ರೇಷನ್ ಅಕ್ಕಿ ತೆಗೆದುಕೊಂದು ಹೋಗ್ತಾರೆ…!?
ಬಿಪಿಎಲ್ ಕಾರ್ಡ್ ಬಗ್ಗೆ ಮಾಹಿತಿ ಕೇಳಿದ ರಾಮಕೃಷ್ಣ ಭಟ್‌ರವರು ಗ್ರಾಮದಲ್ಲಿ ಶ್ರೀಮಂತರಲ್ಲೂ ಬಿಪಿಎಲ್ ಕಾರ್ಡ್ ಇದೆ. ಬಿಪಿಎಲ್ ಕಾರ್ಡ್ ಹೊಂದಿರಬೇಕಾದರೆ ಒಂದಷ್ಟು ಮಾನದಂಡಗಳು ಬೇಕು ಆದರೆ ಅದ್ಯಾವುದೂ ಇಲ್ಲದೆಯೋ ಬಿಪಿಎಲ್ ಕಾರ್ಡ್‌ಗಳು ಬೇಕಾದಷ್ಟು ಜನರಲ್ಲಿ ಇದೆ. ಸ್ವಿಪ್ಟ್ ಕಾರಲ್ಲಿ ಬಂದು ರೇಷನ್ ಅಕ್ಕಿ ಪಡೆದುಕೊಂಡು ಹೋಗುತ್ತಿದ್ದಾರೆ ಅಂದ ಮೇಲೆ ಈ ಬಿಪಿಎಲ್ ಕಾರ್ಡ್ ಬೆಲೆ ಎಲ್ಲೋಯ್ತು? ಆದ್ದರಿಂದ ಬಿಪಿಎಲ್ ಕಾರ್ಡ್ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಕಾರ್ಯ ಆಗಬೇಕು ಎಂದು ಅವರು ಒತ್ತಾಯಿಸಿದರು. ಇದಕ್ಕೆ ಶಿವಶ್ರೀರಂಜನ್ ರೈ ದೇರ್ಲ ಕೂಡ ಧ್ವನಿಗೂಡಿಸಿದರು. ಖದೀಮ ವರ್ಗ ಜಾಗ ಹೊಂದಿದ ರೈತರಿಗೆ ಸಣ್ಣ ರೈತ ಸರ್ಟಿಫಿಕೇಟ್ ಇಷ್ಟರ ತನಕ ಸಿಕ್ಕಿಲ್ಲ ಆದ್ದರಿಂದ ಮತ್ತೊಮ್ಮೆ ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ಶಿವಶ್ರೀರಂಜನ್ ರೈ ದೇರ್ಲ ಒತ್ತಾಯಿಸಿದರು.
ಸ್ಥಳೀಯರಿಗೆ ಮೆಸ್ಕಾಂನಲ್ಲಿ ಕೆಲಸ ನಿರ್ವಹಿಸಲು ಅವಕಾಶ ಕೊಡಬೇಕು
ಈಗಾಗಲೇ ಮೆಸ್ಕಾಂನಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸ್ಥಳೀಯ ಹಲವು ಮಂದಿ ಕೆಲಸ ಮಾಡುತ್ತಿದ್ದಾರೆ. ಹೀಗೆ ಕೆಲಸ ಮಾಡುತ್ತಿರುವವರನ್ನು ಸರಕಾರ ಸ್ಥಳೀಯವಾಗಿಯೇ ಪರ್ಮನೆಂಟ್ ಮಾಡಬೇಕು ಅಲ್ಲದೆ ಸ್ಥಳೀಯರಿಗೆ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ಮೆಸ್ಕಾಂಗೆ ಬರೆದುಕೊಳ್ಳಬೇಕು ಎಂದು ಕಿಟ್ಟ ಅಜಿಲ ಕಣಿಯಾರು ತಿಳಿಸಿದರು. ಗ್ರಾಮದ ಕೆಲವೊಂದು ಕಡೆಗಳಲ್ಲಿ ಹಳೆಯದಾದ ವಿದ್ಯುತ್ ತಂತಿಗಳನ್ನು ಬದಲಾಯಿಸುವಂತೆ ಗ್ರಾಪಂ ಸದಸ್ಯರುಗಳಾದ ಜಯಂತ ಪೂಜಾರಿ ಕೆಂಗುಡೇಲು, ಅಬ್ದುಲ್ ಖಾದರ್ ಮೇರ್ಲ ತಿಳಿಸಿದರು.
ಕೆಯ್ಯೂರು ಸೋಲಾರ್ ಮಾಡೆಲ್ ವಿಲೇಜ್
ಸೋಲಾರ್ ಮಾಡೆಲ್ ವಿಲೇಜ್ ಆಗಿ ಕೆಯ್ಯೂರು ಗ್ರಾಮವನ್ನು ಆಯ್ಕೆ ಮಾಡಲಾಗಿದ್ದು ಜುಲೈ ತಿಂಗಳಿನಿಂದ ಡಿಸೆಂಬರ್ ತಿಂಗಳಾಂತ್ಯಕ್ಕೆ ಅತೀ ಹೆಚ್ಚು ಸೋಲಾರ್ ಬಳಕೆಯನ್ನು ಮಾಡಿಕೊಂಡರೆ ಗ್ರಾಮಕ್ಕೆ 1 ಕೋಟಿ ರೂ.ಅನುದಾನ ಬಹುಮಾನವಾಗಿ ಸಿಗಲಿದೆ. ಇದನ್ನು ಗ್ರಾಪಂ ದಾರಿ ದೀಪ, ಕುಡಿಯುವ ನೀರು ಯೋಜನೆಗೆ ಬಳಸಿಕೊಳ್ಳಬಹುದಾಗಿದೆ. ಇದು ಕೇಂದ್ರ ಸರಕಾರದ ಯೋಜನೆಯಾಗಿದ್ದು ಈ ನಿಟ್ಟಿನಲ್ಲಿ ಗ್ರಾಮವನ್ನು ಸಂಪೂರ್ಣವಾಗಿ ಸೋಲಾರ್ ಮಾಡೆಲ್ ವಿಲೇಜ್ ಆಗಿ ಮಾಡುವಂತೆ ಮೆಸ್ಕಾಂ ಕುಂಬ್ರ ಶಾಖೆಯ ಎಇಇ ಸಿ.ಎಚ್.ಶಿವಶಂಕರ್‌ರವರು ತಿಳಿಸಿ, ಸೋಲಾರ್ ಮಾಡೆಲ್ ವಿಲೇಜ್ ಬಗ್ಗೆ ಮಾಹಿತಿ ನೀಡಿದರು.
ಮೆಸ್ಕಾಂ ಜೆಇ ರವೀಂದ್ರ ಮತ್ತು ತಂಡಕ್ಕೆ ಅಭಿನಂದನೆ
ಈ ವರ್ಷದ ಮಳೆಗಾಲದಲ್ಲಿ ಅತ್ಯಧಿಕ ಮಳೆ ಹಾಗೂ ಗಾಳಿಗೆ ಗ್ರಾಮದ ವಿವಿಧ ಕಡೆಗಳಲ್ಲಿ ಮರ ಬಿದ್ದು ವಿದ್ಯುತ್ ತಂತಿ, ಕಂಬಗಳಿಗೆ ಹಾನಿಯುಂಟಾಗಿದೆ. ಇಂತಹ ಸಂದರ್ಭದಲ್ಲಿ ತುರ್ತಾಗಿ ದುರಸ್ತಿ ಕಾರ್ಯ ನೆರವೇರಿಸಿ ಗ್ರಾಹಕರೊಂದಿಗೆ ಸ್ಪಂದಿಸಿದ ಮೆಸ್ಕಾಂ ಜೆಇ ರವೀಂದ್ರರವರಿಗೆ ಹಾಗೂ ಅವರ ತಂಡಕ್ಕೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು. ಯಾವುದೇ ಸಂದರ್ಭದಲ್ಲೂ ಕರೆ ಸ್ವೀಕರಿಸಿ ಸಾರ್ವಜನಿಕರಿಗೆ ಒಳ್ಳೆಯ ಸ್ಪಂದನೆ ನೀಡುತ್ತಿದ್ದಾರೆ ಎಂದು ಶಿವಶ್ರೀರಂಜನ್ ರೈ ದೇರ್ಲ,ಕಿಟ್ಟ ಅಜಿಲ ಕಣಿಯಾರು ಮತ್ತಿತರರು ತಿಳಿಸಿದರು.
15 ಮಂದಿ ಫಲಾನುಭವಿಗಳಿಗೆ ಚೆಕ್ ವಿತರಣೆ
ಗ್ರಾಮದ ವಿವಿಧ ಫಲಾನುಭವಿಗಳಿಗೆ ಚೆಕ್ ವಿತರಣೆ ಮಾಡಲಾಯಿತು. ಎಸ್.ಸಿ ಮತ್ತು ಎಸ್.ಟಿ ಫಲಾನುಭವಿಗಳಿಗೆ ಮದುವೆ, ವೈದ್ಯಾಕೀಯ ವೆಚ್ಚಕ್ಕೆ ಸಹಾಯಧನ, ವಿಶೇಷಚೇತನರಿಗೆ ಮನೆ ದುರಸ್ತಿಗೆ ಸಹಾಯಧನ, ವಿದ್ಯಾರ್ಥಿಗಳಿಗೆ ಕಲಿಕಾ ಸಹಾಯಧನ ಸೇರಿದಂತೆ ಒಟ್ಟು 15 ಮಂದಿ ಫಲಾನುಭವಿಗಳಿಗೆ ಗ್ರಾಪಂನಿಂದ ಚೆಕ್ ವಿತರಣೆ ಮಾಡಲಾಯಿತು.
ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಸುಮಿತ್ರಾ ಪಲ್ಲತ್ತಡ್ಕ, ಸದಸ್ಯರುಗಳಾದ ಅಮಿತಾ ಹೆಚ್ ರೈ, ಅಬ್ದುಲ್ ಖಾದರ್ ಮೇರ್ಲ, ಸುಭಾಷಿಣಿ ಕೆ, ತಾರಾನಾಥ ಕಂಪ, ವಿಜಯ ಕುಮಾರ್ ಸಣಂಗಳ, ಜಯಂತಿ ಎಸ್.ಭಂಡಾರಿ, ಮೀನಾಕ್ಷಿ ವಿ.ರೈ, ಜಯಂತ ಪೂಜಾರಿ ಕೆಂಗುಡೇಲು, ಗಿರಿಜಾ ಕೆ, ಶೇಷಪ್ಪ ದೇರ್ಲ, ಮಮತಾ ರೈ, ಬಟ್ಯಪ್ಪ ರೈ ದೇರ್ಲ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆಯವರು ವರದಿ ಮಂಡನೆ ಮಾಡಿದರು. ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಸ್ವಾಗತಿಸಿ, ಗತ ಸಭೆಯ ನಿರ್ಣಯ ಹಾಗೇ ಹಾಲಿ ಸಭೆಯ ನಿರ್ಣಯಗಳನ್ನು ದಾಖಲಿಸಿಕೊಂಡು ಕೊನೆಯಲ್ಲಿ ವಂದಿಸಿದರು. ಸಿಬ್ಬಂದಿಗಳಾದ ಶಿವಪ್ರಸಾದ್, ಮಾಲತಿ ರೈ, ಜ್ಯೋತಿ ಎಸ್, ರಾಕೇಶ್ ಎಂ, ಧರ್ಮಣ್ಣ, ರಫೀಕ್ ತಿಂಗಳಾಡಿ, ಅನುಷಾ ಎಂ ಸಹಕರಿಸಿದ್ದರು. ಸಭೆಯ ಕೊನೆಯಲ್ಲಿ ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವುರವರ ವತಿಯಿಂದ ಗ್ರಾಮಸ್ಥರಿಗೆ ವೆಜ್ ಆಂಡ್ ನಾನ್ ವೆಜ್ ಊಟದ ವ್ಯವಸ್ಥೆಯನ್ನು ಮಾಡಿಸಲಾಗಿತ್ತು.
ಹಂದಿ ಮಾಂಸ ಬೇಡ, ಆದರೆ ಕೊಲ್ಲಲು ಅನುಮತಿ ಬೇಕು…!
ಕಾಡು ಹಂದಿಗಳ ಉಪಟಳದಿಂದಾಗಿ ಕೃಷಿಕರು ಕಂಗಲಾಗಿದ್ದಾರೆ. ಕಾನೂನು ಪ್ರಕಾರ ಕಾಡು ಪ್ರಾಣಿಗಳನ್ನು ಕೊಲ್ಲುವ ಹಾಗಿಲ್ಲ ಆದರೆ ಕಾಡು ಹಂದಿಗಳು ಕೊಡುವ ಉಪದ್ರ ನೋಡಿದರೆ ಅದನ್ನು ಕೊಲ್ಲದೆ ಬೇರೆ ದಾರಿ ಇಲ್ಲದಂತಾಗಿದೆ. ಕೇರಳ ಸರಕಾರ ಕಾಡು ಹಂದಿಗಳನ್ನು ಕೊಲ್ಲಲು ಅನುಮತಿ ಕೊಟ್ಟಿದೆ. ನಮಗೆ ಮಾಂಸ ಬೇಡ ಆದರೆ ಕೊಲ್ಲಲು ಅನುಮತಿ ಬೇಕು ಎಂದು ಕೃಷಿಕ ಶಿವಶ್ರೀರಂಜನ್ ರೈ ದೇರ್ಲರವರು ಸಭೆಯಲ್ಲಿ ಆಗ್ರಹಿಸಿದರು. ಈ ಬಗ್ಗೆ ಕೆಲ ಸಮಯ ಚರ್ಚೆ ನಡೆಯಿತು.
ಮನೆಮನೆಗೆ ಬರ್‍ತಾರೆ ಪೊಲೀಸ್…ಭಯ ಬಿಟ್ಟು ಮಾಹಿತಿ ಕೊಡಿ
ಪೊಲೀಸರ ಬಗ್ಗೆ ಯಾವುದೇ ಭಯ ಬೇಡ ಅವರೇನು ದೇವಲೋಕದಿಂದ ಬಂದವರಲ್ಲ ಅಥವಾ ಭೂಮಿಯಡಿಯಿಂದ ಎದ್ದು ಬಂದವರೂ ಅಲ್ಲ ಅವರು ಕೂಡ ಮನುಷ್ಯರೆ ಎಂದು ಮಾತುಗಳನ್ನಾರಂಭಿಸಿದ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಕಾನ್ಸ್‌ಸ್ಟೇಬಲ್ ವೆಂಕಪ್ಪರವರು ಮಾದಕ ವಸ್ತುಗಳ ಬಗ್ಗೆ ಮನಮುಟ್ಟುವಂತೆ ಮಾಹಿತಿ ನೀಡಿದರು. ಸರಕಾರದ ಆದೇಶದಂತೆ ಇದೀಗ `ಮನೆ ಮನೆಗೆ ಪೊಲೀಸ್’ ಎಂಬ ಕಾರ್ಯಕ್ರಮ ಆರಂಭವಾಗಿದ್ದು ಗ್ರಾಮದ ಪ್ರತಿ ಮನೆಗೂ ಪೊಲೀಸ್ ಅಧಿಕಾರಿಗಳು ಬರಲಿದ್ದಾರೆ. ಗ್ರಾಮದಲ್ಲಿ ಯಾವುದೇ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೆ ಈ ಬಗ್ಗೆ ಅಂಜಿಕೆ ಬಿಟ್ಟು ಮಾಹಿತಿ ಕೊಡಿ ಎಂದು ಅವರು ತಿಳಿಸಿದರು. ಇದಲ್ಲದೆ ಯಾವುದೆ ತೊಂದರೆ ಸಂಭವಿಸಿದರೆ 112 ಗೆ ಕಾಲ್ ಮಾಡಿ ಎಂದರು.
`ನಮ್ಮ ಅವಧಿಯ ಕೊನೇಯ ಗ್ರಾಮಸಭೆ ಇದಾಗಿದೆ. ಇಷ್ಟರ ತನಕ ಯಾವುದೇ ರಾಜಕೀಯವಿಲ್ಲದೆ ಗ್ರಾಮದ ಅಭಿವೃದ್ಧಿಗಾಗಿ ಎಲ್ಲಾ ಸದಸ್ಯರು ಶ್ರಮಪಟ್ಟಿದ್ದೇವೆ. ತೆರಿಗೆ ಸಂಗ್ರಹದಲ್ಲಿ ಗ್ರಾಪಂ ತಾಲೂಕಿನಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಐಎಸ್‌ಓ ಪ್ರಾಮಾಣಿಕೃತ ಗ್ರಾಪಂ ಆಗಿ ಮೂಡಿಬರುವಲ್ಲಿ ಮೈಸೂರಿನಲ್ಲಿ ತರಬೇತಿ ಪಡೆದುಕೊಂಡಿದ್ದೇವೆ.ಅರಿವು ಕೇಂದ್ರವು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಈ ಎಲ್ಲಾ ಸಾಧನೆಗಳಿಗೆ ಗ್ರಾಪಂ ಅಧಿಕಾರಿ ವರ್ಗ, ಸಿಬ್ಬಂದಿ ವರ್ಗಕ್ಕೆ ಹಾಗೇ ಗ್ರಾಮಸ್ಥರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಮುಂದೆಯೂ ಗ್ರಾಮಸ್ಥರ ಸಹಕಾರವನ್ನು ಬಯಸುತ್ತೇವೆ.’
ಶರತ್ ಕುಮಾರ್ ಮಾಡಾವು, ಅಧ್ಯಕ್ಷರು ಕೆಯ್ಯೂರು ಗ್ರಾಪಂ