ಪುತ್ತೂರು: ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪ್ರತಿಯೊಂದು ಕ್ಷಣವನ್ನು ತಮ್ಮ ಕೌಶಲ್ಯ ವೃದ್ಧಿಗಾಗಿ ಉಪಯೋಗಿಸಬೇಕಾಗಿದ್ದು , ಪ್ರತಿ ವಿದ್ಯಾರ್ಥಿಯೂ ತನ್ನ ಸಾಮರ್ಥ್ಯಕ್ಕೆ ತಕ್ಕುದಾದ ಪ್ರದರ್ಶನವನ್ನು ನೀಡಬೇಕಾಗಿದೆ. ವಿಪುಲ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಯಶಸ್ಸನ್ನು ಗಳಿಸಬೇಕು ಎಂದು ಸುಳ್ಯ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೆರಾಲು ಹೇಳಿದರು.

ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಆಗಸ್ಟ್ 6 ರಂದು ಕಾಲೇಜಿನ ಬೆಳ್ಳಿ ಹಬ್ಬದ ಸಭಾಂಗಣದಲ್ಲಿ ನಡೆದ ಪ್ರೌಢ ಶಾಲಾ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಲು ಆಯೋಜಿಸಲಾದ ಜಿಲ್ಲಾಮಟ್ಟದ ‘ಫಿಲೋ ಪ್ರತಿಭಾ – 2025’ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದ ಅವರು ಸಂತ ಫಿಲೋಮಿನಾ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳ ಪ್ರತಿಭಾ ಅನಾವರಣಕ್ಕೆ ವೇದಿಕೆಯಾಗಿದ್ದು, ಪುತ್ತೂರಿನ ಹಲವಾರು ಪ್ರತಿಭೆಗಳು ಈ ಶಿಕ್ಷಣ ಸಂಸ್ಥೆಗಳ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗಳನ್ನು ಮಾಡಿದ್ದಾರೆ. ಇಂದಿನ ಫಿಲೋ ಪ್ರತಿಭಾ ಕೂಡ ಇಂತಹುದೇ ಒಂದು ವೇದಿಕೆಯಾಗಿದ್ದು, ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಇಂದಿನ ಶಿಕ್ಷಣವು ಕೇವಲ ಜ್ಞಾನಾಧರಿತವಾಗಿರದೆ, ಕೌಶಲ್ಯ ಆಧಾರಿತ ಶಿಕ್ಷಣವಾಗಿದ್ದು, ಕೌಶಲ್ಯ ವೃದ್ಧಿಯು ನಿರಂತರ ಅಭ್ಯಾಸದ ಮೂಲಕವಷ್ಟೇ ಆಗುವಂತದ್ದು. ಹಾಗಾಗಿ ವಿದ್ಯಾರ್ಥಿಗಳು ಯಾವುದೇ ಕ್ಷಣವನ್ನು ವ್ಯರ್ಥ ಗೊಳಿಸದೆ ರಚನಾತ್ಮಕ ಕೆಲಸಗಳಿಗೆ ಸಮಯವನ್ನು ಮುಡಿಪಾಗಿಟ್ಟು ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ರೆ.ಫಾ. ಲಾರೆನ್ಸ್ ಮಸ್ಕರೇನಸ್ ಮಾತನಾಡಿ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಫಿಲೊ ಪ್ರತಿಭಾ ಒಂದು ಅತ್ಯುತ್ತಮ ವೇದಿಕೆಯಾಗಿದ್ದು, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಹಲವಾರು ವರ್ಷಗಳಿಂದ ನಮ್ಮ ಸಂಸ್ಥೆ ಗುಣಮಟ್ಟದ ವಿದ್ಯಾಭ್ಯಾಸದ ಜೊತೆಗೆ, ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಒತ್ತು ನೀಡುತ್ತಿದ್ದು, ನಮ್ಮ ವಿದ್ಯಾರ್ಥಿಗಳು ಹಲವಾರು ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ್ದಾರೆ. ಇಲ್ಲಿಯ ಉಪನ್ಯಾಸಕರು ಪಾಠ ಪ್ರವಚನದ ಜೊತೆಗೆ, ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ಸೂಕ್ತ ಮಾರ್ಗದರ್ಶನವನ್ನು ನೀಡುತ್ತಿದ್ದು, ವಿದ್ಯಾರ್ಥಿಗಳ ಪ್ರಗತಿಗೆ ಇದು ಪೂರಕವಾಗಿದೆ. ಇಂದಿನ ಸ್ಪರ್ಧೆಗೆ ಆಗಮಿಸಿದ ತಾವೆಲ್ಲರೂ ಉತ್ತಮ ಪ್ರದರ್ಶನವನ್ನು ನೀಡುವುದರ ಮೂಲಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.
ವೇದಿಕೆಯಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಜೆರಾಲ್ಡ್ ಡಿ’ ಕೋಸ್ಟಾ, ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ದಿವ್ಯಾ ಅನಿಲ್ ರೈ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ 36 ಪ್ರೌಢಶಾಲೆಗಳ 900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ರಸಪ್ರಶ್ನೆ, ಇಂಗ್ಲಿಷ್ ವಿಚಾರ ಸಂಕಿರಣ, ಪೆನ್ಸಿಲ್ ಸ್ಕೆಚ್, ಮಣ್ಣಿನ ಮಾದರಿ ತಯಾರಿ, ವಿಜ್ಞಾನ ಮಾದರಿ ತಯಾರಿ, ದೇಶ ಭಕ್ತಿ ಗಾಯನ, ಕೊಲಾಜ್ ತಯಾರಿಕೆ, ತ್ಯಾಜ್ಯದಿಂದ ಉಪಯುಕ್ತ ವಸ್ತು ತಯಾರಿ , ಫೇಸ್ ಪೈಂಟಿಂಗ್, ಛದ್ಮ ವೇಷ, ಲಾಂಚಿಂಗ್ ಪ್ರಾಡಕ್ಟ್, ಕನ್ನಡ ಕಂಠ ಪಾಠ, ರಂಗೋಲಿ ಹಾಗೂ ಜಾನಪದ ನೃತ್ಯ ಹೀಗೆ 14 ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರೌಢಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು, ಕಾಲೇಜಿನ ಬೋಧಕ ಹಾಗೂ ಬೋಧಕೇತರ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ‘ಫಿಲೋ ಪ್ರತಿಭಾ 2025’ ಇದರ ನಿರ್ದೇಶಕರಾದ ಸುಮಾ ಪಿ. ಆರ್ ವಂದಿಸಿ, ಉಪನ್ಯಾಸಕರಾದ ಸವಿತಾ ಮೊಂತೇರೋ ಕಾರ್ಯಕ್ರಮವನ್ನು ನಿರೂಪಿಸಿದರು.