ಮಹಾಲಿಂಗೇಶ್ವರ ಸಭಾಭವನದ ವರಮಹಾಲಕ್ಷ್ಮೀ ಪೂಜೆಗೆ ಈ ಬಾರಿ ದೇವಳದಿಂದ ಅನ್ನಪ್ರಸಾದ ನೀಡಲು ನಿರಾಕರಣೆ: ಸೋಷಿಯಲ್ ಮೀಡಿಯಾ, ಸಾರ್ವಜನಿಕ ವಲಯದಲ್ಲಿ ಚರ್ಚೆ

0


ಪುತ್ತೂರು:ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಕಳೆದ 17 ವರ್ಷಗಳಿಂದ, ಸಮರ್ಪಣಾ ಮಹಿಳಾ ವೇದಿಕೆಯ ಗೌರವಾಧ್ಯಕ್ಷೆ ಮಾಜಿ ಶಾಸಕರಾಗಿರುವ ಶಕುಂತಳಾ ಟಿ ಶೆಟ್ಟಿಯವರ ನೇತೃತ್ವದಲ್ಲಿ ನಡೆಯುತ್ತಿರುವ ವರಮಹಾಲಕ್ಷ್ಮೀ ಪೂಜೆ ಆ.8ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ.ಆದರೆ ಕಾರ್ಯಕ್ರಮಕ್ಕೆ ಈ ಬಾರಿ ದೇವಳದಿಂದ ಅನ್ನಪ್ರಸಾದ ನೀಡಲಾಗುತ್ತಿಲ್ಲ ಎನ್ನುವ ವಿಚಾರ ಸಾಮಾಜಿಕ ಜಾಲತಾಣ ಮತ್ತು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.


ಸುಮಾರು 17 ವರ್ಷಗಳಿಂದ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಮರ್ಪಣಾ ಮಹಿಳಾ ವೇದಿಕೆ ಸಹಿತ ಇತರ ಸಂಘಗಳ ಸಹಭಾಗಿತ್ವ ಮತ್ತು ಮಹಾಲಿಂಂಗೇಶ್ವರ ದೇವಳದ ಆಶ್ರಯದಲ್ಲಿ ಶ್ರೀ ಸಾರ್ವಜನಿಕ ವರಮಹಾಲಕ್ಷ್ಮೀ ಪೂಜೆ ದೇವಳದ ಸಭಾಭವನದಲ್ಲಿ ನಡೆಯುತ್ತಿದ್ದು,ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ದೇವಳದಿಂದ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿತ್ತು.ಈ ಬಾರಿಯೂ ಆ.8ರಂದು ಶ್ರೀ ವರಮಹಾಲಕ್ಷ್ಮೀ ಪೂಜೆ ನಿಗದಿ ಆಗಿದೆ.ಆದರೆ ಕಾರ್ಯಕ್ರಮ ನಡೆಯುವ ಸಭಾಭವನಕ್ಕೆ ದೇವಳದಿಂದ ಅನ್ನಪ್ರಸಾದ ಸರಬರಾಜು ಮಾಡಲು ನಿರಾಕರಣೆ ಮಾಡಲಾಗಿದೆ ಎಂಬ ವಿಚಾರ ಚರ್ಚೆಗೆ ಕಾರಣವಾಗಿದೆ.


ಶ್ರೀಕೃಷ್ಣಲೋಕ, ಮೊಸರುಕುಡಿಕೆಯಂತಹ ಉತ್ಸವಕ್ಕೆ ದೇವಳದಿಂದ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ.ಆದರೆ ವರಮಹಾಲಕ್ಷ್ಮೀ ಪೂಜೆಗೆ ನಿರಾಕರಣೆ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ದೇವಳದ ಅನ್ನಛತ್ರದಲ್ಲಿ ಅನ್ನದಾನ ನಿರಂತರ ನಡೆಯುತ್ತಿದ್ದು,ಎಷ್ಟು ಮಂದಿ ಬಂದರೂ ಅಲ್ಲಿ ಅನ್ನದಾನ ನೀಡುವ ವ್ಯವಸ್ಥೆ ಇದೆ.ಆದರೆ ಯಾವುದೇ ಕಾರ್ಯಕ್ರಮಕ್ಕೂ ದೇವಳದ ಅನ್ನಛತ್ರದಿಂದ ಸಭಾಭವನಕ್ಕೆ ಅಥವಾ ಹೊರಗೆ ಸರಬರಾಜು ಮಾಡುವ ಪ್ರಶ್ನೆ ಇಲ್ಲ.ವರಮಹಾಲಕ್ಷ್ಮೀ ಪೂಜೆಗೆ ಬಂದವರು ಅಥವಾ ಹೊರಗಿನಿಂದ ಬಂದ ಭಕ್ತರಿಗೂ ದೇವಳದ ಅನ್ನಛತ್ರದಲ್ಲಿ ಅನ್ನಪ್ರಸಾದ ವಿತರಣೆ ನಿರಂತರ ಮಾಡಲಾಗುತ್ತದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.


ಹಾಲ್ ಕೇಳಿದ್ದರು-ಅನ್ನಪ್ರಸಾದಕ್ಕೆ ಮನವಿ ಮಾಡಿಲ್ಲ ಅನ್ನಪ್ರಸಾದ ಹೊರಗೆ ಸರಬರಾಜು ಇಲ್ಲವಷ್ಟೆ-ಪಂಜಿಗುಡ್ಡೆ:
ದೇವಳದ ಅನ್ನಛತ್ರದಲ್ಲಿ ನಿತ್ಯ ಸಾವಿರಾರು ಮಂದಿಗೆ ಅನ್ನಪ್ರಸಾದ ವಿತರಣೆ ಮಾಡಲಾಗುತ್ತಿದೆ.ಈ ನಡುವೆ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮಕ್ಕೆ ಹಾಲ್ ಬೇಕೆಂದು ದೇವಳಕ್ಕೆ ಅರ್ಜಿ ಸಲ್ಲಿಸಿದ್ದಾರೆ ಹೊರತು ಅನ್ನಪ್ರಸಾದ ನೀಡುವಂತೆ ಮನವಿ ಸಲ್ಲಿಸಿಲ್ಲ.ನಮಗೂ ಈ ಕುರಿತು ಮಾಹಿತಿ ಇಲ್ಲ.ದೇವಳದಿಂದ ಹೊರಗೆ ಅನ್ನಪ್ರಸಾದ ಸರಬರಾಜು ಮಾಡುತ್ತಿಲ್ಲ.ದೇವಳದ ಅನ್ನಛತ್ರಕ್ಕೆ ಎಷ್ಟು ಸಾವಿರ ಮಂದಿ ಭಕ್ತರು ಬಂದರೂ ಅನ್ನಪ್ರಸಾದ ವಿತರಣೆ ಮಾಡಲಾಗುತ್ತದೆ.ಬೇರೆ ಕೃಷ್ಣಲೋಕ, ಮೊಸರುಕುಡಿಕೆ ಉತ್ಸವಕ್ಕೆ ಅನ್ನಪ್ರಸಾದ ವಿತರಣೆಗೆ ಮನವಿ ಮಾಡಿದ್ದಾರೆ.ಅನ್ನಪ್ರಸಾದ ಯಾರಿಗೂ ಕೊಡುವುದಿಲ್ಲ ಎಂದು ಹೇಳಿಲ್ಲ.ಆದರೆ ಹೊರಗೆ ಸರಬರಾಜು ಮಾತ್ರ ಮಾಡಲಾಗುವುದಿಲ್ಲ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆರವರು ಪ್ರತಿಕ್ರಿಯೆ ನೀಡಿದ್ದಾರೆ.ವರಮಹಾಲಕ್ಷ್ಮೀ ಪೂಜೆಗೆ ಅನ್ನದಾನ ವಿಚಾರದಲ್ಲಿ ತಪ್ಪು ತಿಳುವಳಿಕೆಯಾಗಿ ಗೊಂದಲವಾಗಿದೆ ಎಂದು ಅವರು ತಿಳಿಸಿದ್ದಾರೆ.


ದೇವಸ್ಥಾನದ ಆಶ್ರಯದಲ್ಲೇ ನಡೆಯುವ ಕಾರ್ಯಕ್ರಮ:
ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅನ್ನಪ್ರಸಾದ ಅರಂಭ ಆಗುವ ಮೊದಲೇ ದೇವಳದ ವಠಾರದಲ್ಲಿ ವರಮಹಾಲಕ್ಷ್ಮೀ ಪೂಜೆ ಮಾಡಿಕೊಂಡು ಬಂದಿದ್ದೇವೆ.ಆಗಲೂ ಅನ್ನಪ್ರಸಾದವನ್ನು ನೀಡುತ್ತಿದ್ದೆವು.ಬಳಿಕದ ದಿನದಲ್ಲಿ ದೇವಳದಿಂದ ಅನ್ನಪ್ರಸಾದ ಆರಂಭಗೊಂಡಾಗ ನಾವು ಅಕ್ಕಿ ಸಹಿತ ಅಗತ್ಯ ಸಾಮಾಗ್ರಿಗಳನ್ನು ದೇವಸ್ಥಾನಕ್ಕೆ ನೀಡುತ್ತಿದ್ದೆವು.ಆ ಸಂದರ್ಭ ದೇವಸ್ಥಾನದ ಸಹಯೋಗವನ್ನೂ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗುತ್ತಿತ್ತು.ಈ ವರ್ಷವೂ ದೇವಸ್ಥಾನದ ಸಹಯೋಗವಿರುವ ವಿಚಾರ ಆಮಂತ್ರಣ ಪತ್ರಿಕೆಯಲ್ಲಿ ಇದೆ.ಹಾಗಾಗಿ ದೇವಳಕ್ಕೆ ಪ್ರತ್ಯೇಕ ಮನವಿ ಮಾಡುವ ಅಗತ್ಯವಿರಲಿಲ್ಲ.ಆದರೂ, ಪೂಜಾ ಸಮಿತಿಯ ಅಧ್ಯಕ್ಷರೇ ದೇವಳದ ಅಧ್ಯಕ್ಷರನ್ನು ಭೇಟಿ ಮಾಡಿ ವಿಷಯ ಪ್ರಸ್ತಾಪಿಸಿದ್ದರು.ಆದರೆ ಸರಿಯಾದ ಉತ್ತರ ಸಿಕ್ಕಿರಲಿಲ್ಲ.ಹಾಗಾಗಿ ವರಮಹಾಲಕ್ಷ್ಮೀ ಪೂಜೆಗೆ ಬಂದವರಿಗೆ ಸಮಿತಿಯಿಂದ ಪ್ರತ್ಯೇಕ ಅನ್ನದಾನಕ್ಕೆ ವ್ಯವಸ್ಥೆ ಕಲ್ಪಿಸಿದ್ದೇವೆ.ಈ ವಿಚಾರದಲ್ಲಿ ನಾನು ಏನೂ ಹೇಳುವುದಿಲ್ಲ.ಮಹಾಲಿಂಗೇಶ್ವರ ಇದ್ದಾನೆ.ಪತ್ರಿಕೆಯಲ್ಲಿ ಹಾಕುವುದಾದರೆ ನನ್ನದು ‘ನೋ ಕಮೆಂಟ್’ ಎಂದು ಸಮರ್ಪಣಾ ಮಹಿಳಾ ವೇದಿಕೆಯ ಗೌರವಾಧ್ಯಕ್ಷೆ ಶಕುಂತಳಾ ಟಿ.ಶೆಟ್ಟಿಯವರು ತಿಳಿಸಿದ್ದಾರೆ.

ಗೊಂದಲ ಇತ್ಯರ್ಥ?
ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯುವ ವರಮಹಾಲಕ್ಷ್ಮೀ ಪೂಜೆಯಲ್ಲಿ ಅನ್ನಪ್ರಸಾದ ವಿತರಣೆಗೆ ಸಂಬಂಧಿಸಿ ಉಂಟಾದ ಗೊಂದಲವನ್ನು ಬಗೆಹರಿಸುವ ನಿಟ್ಟಿನಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರ ನಡುವೆ ಪ್ರಮುಖ ನಾಯಕರೊಬ್ಬರು ಮಾತುಕತೆ ನಡೆಸಿ, ಗೊಂದಲಕ್ಕೆ ತೆರೆ ಎಳೆದಿದ್ದಾರೆ ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here