ವಾದ ಮಂಡಿಸಿದ ಸರಕಾರಿ ಅಭಿಯೋಜಕ ಜನಾರ್ದನ್ ಪುತ್ತೂರು
ಪುತ್ತೂರು: ಮೈಸೂರು ನಗರ ಕೆ.ಆರ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾರಣ್ಯಪುರಂನ, ಮೈಸೂರು ಮಾನಂದವಾಡಿ ರಸ್ತೆಯಲ್ಲಿ ಯನ್.ಐ.ಇ ಕಾಲೇಜ್ ಆವರಣದ ಉತ್ತರ ಭಾಗದಲ್ಲಿರುವ ಕೆನರಾ ಬ್ಯಾಂಕ್ ಎ.ಟಿ ಎಂ ಎದುರು ದಿನಾಂಕ 23/05/2021ರಂದು ಕೇಸಿನ ದೂರುದಾರ ತಾಂಡು ಮೂರ್ತಿ ಎನ್ನುವವರು ಮೋಟಾರ್ ವಾಹನವನ್ನು ನಿಲ್ಲಿಸಿ ನಿಂತುಕೊಂಡಿದ್ದಾಗ ಅದೇ ಸಮಯಕ್ಕೆ ಜಾಪಾರ್ ಷರೀಫ್ ಹಾಗೂ ಇನ್ನೊಬ್ಬರು ಪ್ರವೀಣ್ ಮತ್ತು ವಿಜಯಕುಮಾರ್ ಎಂಬವರು ಸಹ ಅವರ ತಂಗಿ ಮತ್ತು ಸಣ್ಣ ಮಗುವನ್ನು ಮೋಟರು ವಾಹನದಲ್ಲಿ ಕುಳ್ಳಿರಿಸಿಕೊಂಡು ಎ ಟಿ ಎಂ ನ ನಿಲ್ಲಲು ಬರುತ್ತಿದ್ದಾಗ ಮಾನಂದವಾಡಿ ರಸ್ತೆಯಲ್ಲಿ ಮೈಸೂರಿನ ಕನಕದಾಸ ನಗರ ನಿವಾಸಿ ಆರೋಪಿ ಕಿರಣ ಕೆ ಎಂಬುವವರು ತನ್ನ ಹುಂಡೈ ಐ20 ಕಾರನ್ನು ಅತೀ ವೇಗ ಮತ್ತು ನಿರ್ಲಕ್ಷ್ಯತೆಯಿಂದ ಎಡಕ್ಕೆ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿ ಎಡಕ್ಕೆ ಹೋಗಿ ರಸ್ತೆ ಎಡ ಭಾಗದಲ್ಲಿದ್ದ ನಿಲುಗಡೆ ನಿಷೇಧ ಸೂಚನ ಫಲಕಕ್ಕೆ ಡಿಕ್ಕಿ ಮಾಡಿಕೊಂಡು ತನ್ನ ಮೋಟಾರ್ ವಾಹನದ ಹತ್ತಿರ ನಿಂತಿದ್ದ ಜಾಫರ್ ಷರೀಫ್ ಹಾಗೂ ಪ್ರವೀಣ್ (ಮೃತ) ಚಾಲನೆ ಮಾಡಿಕೊಂಡು ಬಂದಿದ್ದ ಹೀರೋ ಹೋಂಡಾ ಮೋಟರು ವಾಹನಕ್ಕೆ ಡಿಕ್ಕಿ ಮಾಡಿ ನಂತರ ಕಾಂಪೌಂಡ್ ಮೂಲೆಗೆ ಡಿಕ್ಕಿ ಮಾಡಿದ ಪರಿಣಾಮ ಹೀರೋ ಹೋಂಡಾ ಸವಾರರಾಗಿರುವ ಪ್ರವೀಣ್ ಹಾಗೂ ಇನ್ನೊಂದು ಮೋಟಾರು ವಾಹನ ಸವಾರ ವಿಜಯ ಕುಮಾರ್ ಅವರ ಸಾವಿಗೆ ಕಾರಣರಾಗಿದ್ದರು.
ವಿಜಯ್ ಕುಮಾರ್ ಎಂಬವರ ತಂಗಿ ಹಾಗೂ ಒಂದು ವರ್ಷದ ಪುಟ್ಟ ಮಗುವಿಗೆ ತೀವ್ರ ಸ್ವರೂಪದ ಗಾಯ ಉಂಟಾಗಿತ್ತು. ಈ ಬಗ್ಗೆ ಆರೋಪಿ ಕಿರಣ್ ಎಂಬವರ ವಿರುದ್ಧ ಐಪಿಸಿ ಕಲಾಂ 279, 338, 304ರಂತೆ ಪ್ರಕರಣ ದಾಖಲಿಸಿ ತನಿಖೆ ಮಾಡಿ, ಕೆ ಆರ್ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ನ್ಯಾಯಾಲಯಕ್ಕೆ ದೋಷರೋಪಣ ಪತ್ರ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮೈಸೂರಿನ ಮೂರನೇ ಅಧಿಕ ಸಿ.ಜೆ (ಹಿ.ವಿ ) ಮತ್ತು ಸಿ.ಜೆ.ಎಂ ನ್ಯಾಯಾಲಯದ ನ್ಯಾಯಧೀಶರಾದ ಸಂದೇಶ್ ಪ್ರಭು ಅವರು ಆರೋಪಿಯ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 10,000/ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಜನಾರ್ಧನ್ ಪುತ್ತೂರು ಅವರು ಸಾಕ್ಷಿಗಳ ವಿಚಾರಣೆ ನಡೆಸಿ ವಾದ ಮಂಡಿಸಿದ್ದಾರೆ. ಕೋರ್ಟ್ ಪೊಲೀಸರಾದ ಕೆ. ಆರ್ ಸಂಚಾರ ಪೊಲೀಸ್ ಠಾಣೆಯ ಸೋಮಶೇಖರ್, ಕುಮಾರ್, ಮಂಜುನಾಥ್ ಇವರು ಸಾಕ್ಷಿಗಳನ್ನು ನ್ಯಾಯಾಲಕ್ಕೆ ಹಾಜರು ಪಡಿಸುವಲ್ಲಿ ಶ್ರಮ ವಹಿಸಿದ್ದರು.