ಕೌಶಲ್ಯಕ್ಕೆ ತಕ್ಕ ವೃತ್ತಿಯನ್ನು ಆರಿಸಿಕೊಳ್ಳಿ: ನಿತಿನ್
ಪುತ್ತೂರು: ಸ್ನಾತಕೋತ್ತರ ಶಿಕ್ಷಣ ವಿದ್ಯಾರ್ಥಿಗಳಲ್ಲಿರುವ ಕೌಶಲ್ಯಗಳನ್ನು ಅಭಿವೃದ್ಧಿಗೊಳಿಸುತ್ತದೆ. ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿದ ನಂತರ ತಮ್ಮ ಕೌಶಲ್ಯಗಳಿಗನುಸಾರವಾಗಿ ವಿಭಿನ್ನ ಹಾದಿಯಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕು. ಜೀವನದಲ್ಲಿ ಯಶಸ್ಸು ಪಡೆಯುವ ಮಾರ್ಗಗಳನ್ನು ಅನುಸರಿಸಬೇಕು ಎಂದು ಅಮೇರಿಕಾದ ಝಿಂಟೆಕ್ ಹೂಸ್ಟನ್ ಕಂಪನಿ ಉದ್ಯೋಗಿ ನಿತಿನ್ ಹೇಳಿದರು.
ಅವರು ನಗರದ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಸ್ವಾಯತ್ತ ಮಹಾವಿದ್ಯಾಲಯದ ಐಕ್ಯೂಎಸಿ ಘಟಕ ಹಾಗೂ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಜಂಟಿ ಆಶ್ರಯದಲ್ಲಿ ಗುರುವಾರದಂದು ನಡೆದ ಪಯಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅನುಭವೀ ವ್ಯಕ್ತಿಗಳ ಜತೆಗೆ, ಸಮಯವನ್ನು ಕಳೆದು ವೃತ್ತಿಜೀವನದ ಬಗೆಗೆ ಗಂಭೀರವಾಗಿ ಯೋಚಿಸಬೇಕು. ತಮ್ಮ ತಮ್ಮ ಸಾಮರ್ಥ್ಯ ಅರಿತುಕೊಂಡು, ಉದ್ಯೋಗದ ಕ್ಷೇತ್ರವನ್ನು ಜಾಣ್ಮೆಯಿಂದ ಆರಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಶ್ರೀಧರ ನಾಯಕ್ ಮಾತನಾಡಿ, ಶಿಕ್ಷಣ ಪಡೆದು ಸಂಸ್ಥೆಯಿಂದ ತೆರೆಳಿದ ಹಳೆ ವಿದ್ಯಾರ್ಥಿಗಳ ಜತೆಗೆ ಸಂಸ್ಥೆಯ, ಶಿಕ್ಷಕರ ಬಾಂಧವ್ಯ ವೃದ್ಧಿಯಾಗಬೇಕು. ಇದರಿಂದ ಸಂಸ್ಥೆ ಬೆಳೆಯುತ್ತದೆ. ತನ್ಮೂಲಕ ಸಮಾಜ ಬೆಳವಣಿಗೆ ಹೊಂದಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಂ. ಕಾಂ ವಿದ್ಯಾರ್ಥಿ ಪ್ರತಿನಿಧಿ ನವೀನಕೃಷ್ಣ ಉಪಸ್ಥಿತರಿದ್ದರು. ದ್ವಿತೀಯ ಎಂ.ಕಾಂ ವಿದ್ಯಾರ್ಥಿನಿ ಸುಷ್ಮಿತಾ ಸ್ವಾಗತಿಸಿ, ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯಸರಸ್ವತಿ ಪ್ರಸ್ತಾವಿಸಿದರು. ದ್ವಿತೀಯ ಎಂ.ಕಾಂ ವಿದ್ಯಾರ್ಥಿಗಳಾದ ಯಶ್ವಿತಾ ವಂದಿಸಿ, ವಿದ್ಯಾರ್ಥಿ ಪವನ್ ಕಾರ್ಯಕ್ರಮವನ್ನು ನಿರೂಪಿಸಿದರು.