ಸಾರಿಗೆ ನೌಕರರ ಮುಷ್ಕರ ವಾಪಸ್ : ಪಿಐಎಲ್ ಇತ್ಯರ್ಥಪಡಿಸಿದ ಹೈಕೋರ್ಟ್

0

ಬೆಂಗಳೂರು:38 ತಿಂಗಳ ಬಾಕಿ ವೇತನ ಪಾವತಿ ಮತ್ತು ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರವನ್ನು ಹಿಂಪಡೆಯಲಾಗಿದೆ ಎಂದು ಕಾರ್ಮಿಕ ಸಂಘಟನೆಗಳು ನೀಡಿರುವ ಹೇಳಿಕೆ ಪರಿಗಣಿಸಿರುವ ಹೈಕೋರ್ಟ್, ಮುಷ್ಕರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.


ಮುಷ್ಕರದಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗುವುದರಿಂದ ಮುಷ್ಕರ ನಡೆಸದಂತೆ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಗೆ ಆದೇಶಿಸುವಂತೆ ಕೋರಿ ಬೆಂಗಳೂರಿನ ಜೆ.ಸುನಿಲ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಆ.7ರಂದು ವಿಚಾರಣೆ ನಡೆಸಿತು.


ಕಾರ್ಮಿಕ ಸಂಘಟನೆಗಳ ಪರ ವಕೀಲರು ಹಾಜರಾಗಿ, ಸದ್ಯ ಮುಷ್ಕರವನ್ನು ಹಿಂಪಡೆಯಲಾಗಿದೆ ಎಂದು ಮಾಹಿತಿ ನೀಡಿ, ಆ ಕುರಿತ ನಿರ್ಣಯವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.ಸರಕಾರದ ಪರ ವಕೀಲರು,ಕಾರ್ಮಿಕರ ಜತೆ ಸಂಧಾನ ಮುಂದುವರಿಯುತ್ತಿದೆ.ಇಂದೂ ಸಹ ಮಾತುಕತೆ ನಡೆದಿದ್ದು,ಆಗಸ್ಟ್ ೨೮ಕ್ಕೆ ಮತ್ತೆ ಸಂಧಾನ ಸಭೆ ನಡೆಯಲಿದೆ ಎಂದು ತಿಳಿಸಿದರು.ಅರ್ಜಿದಾರರ ಪರ ವಕೀಲೆ ದೀಕ್ಷಾ ಅಮೃತೇಶ್ ಅವರು, ಸದ್ಯ ಮುಷ್ಕರ ಹಿಂಪಡೆಯಲಾಗಿದೆಯಾದರೂ, ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ಮರುಕಳಿಸುವ ಸಾಧ್ಯತೆ ಇದೆ.ಆದ್ದರಿಂದ, ಪ್ರಕರಣ ಸಂಬಂಧ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಕಾಲಮಿತಿ ನಿಗದಿಪಡಿಸಬೇಕು ಎಂದು ಮನವಿ ಮಾಡಿದರು.ಸರ್ಕಾರ ಮತ್ತು ಕಾರ್ಮಿಕರ ನಡುವೆ ಸಂಧಾನ ಮುಂದುವರಿಯಲಿ.ಸದ್ಯ ಮುಷ್ಕರ ಹಿಂಪಡೆಯಲಾಗಿದೆ.ಆದ್ದರಿಂದ, ಪಿಐಎಲ್ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದ ನ್ಯಾಯಪೀಠ ಅರ್ಜಿ ವಿಲೇವಾರಿ ಮಾಡಿತು.


38 ತಿಂಗಳ ಬಾಕಿ ವೇತನ ನೀಡುವುದು, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆಯಂತೆ ಸಾರಿಗೆ ನೌಕರರು ಆ.೫ರಂದು ರಾಜ್ಯವ್ಯಾಪಿ ಮುಷ್ಕರ ಆರಂಭಿಸಲು ಕರೆ ನೀಡಿದ್ದರು.ಸಾರಿಗೆ ನೌಕರರ ಉದ್ದೇಶಿತ ಮುಷ್ಕರ ಪ್ರಶ್ನಿಸಿ ಜೆ.ಸುನಿಲ್ ಮತ್ತಿತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.ಆ.೪ರಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಹಾಗೂ ನ್ಯಾಯಮೂರ್ತಿ ಎಂ.ಜಿ.ಎಸ್.ಕಮಾಲ್ ಅವರಿದ್ದ ದ್ವಿಸದಸ್ಯ ವಿಭಾಗೀಯ ನ್ಯಾಯಪೀಠ, ಆ.೫ರಂದು ನಡೆಸಲುದ್ದೇಶಿಸಿದ್ದ ಮುಷ್ಕರವನ್ನು ಒಂದು ದಿನದ ಮಟ್ಟಿಗೆ ಮುಂದೂಡುವಂತೆ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಗೆ ಆದೇಶಿಸಿತು.ಪಿಐಎಲ್‌ಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ನ್ಯಾಯಪೀಠ ಇಂದು ಕಾರ್ಯನಿರ್ವಹಣೆ ಮಾಡುತ್ತಿಲ್ಲ.ಅರ್ಜಿಯು ಸಿಜೆ ನೇತೃತ್ವದ ನಿಗದಿತ ನ್ಯಾಯಪೀಠದ ಮುಂದೆಯೇ ಬರಲಿ.ಅಲ್ಲಿಯವರೆಗೆ ಮುಷ್ಕರವನ್ನು ಒಂದು ದಿನದ ಮಟ್ಟಿಗೆ ಮುಂದೂಡುವಂತೆ ನೌಕರರ ಸಂಘಟನೆಗೆ ನ್ಯಾಯಪೀಠ ಆದೇಶಿಸಿತ್ತು.ಅರ್ಜಿ ಸಂಬಂಧ ರಾಜ್ಯ ಸರಕಾರ, ಸಾರಿಗೆ ನಿಗಮ, ನಿಗಮಗಳ ಜಂಟಿ ಕ್ರಿಯಾ ಸಮಿತಿ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಆ.5ಕ್ಕೆ ಮುಂದೂಡಿತ್ತು.ಆ.7ರಂದು ಮುಖ್ಯನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ಪಿಐಎಲ್ ಅರ್ಜಿಯ ವಿಚಾರಣೆ ನಡೆಸಿ ಇತ್ಯರ್ಥ ಪಡಿಸಿತು.

LEAVE A REPLY

Please enter your comment!
Please enter your name here