ಅ.5 : ಪುತ್ತೂರಿನಲ್ಲಿ ವಿಶ್ವ ಬನ್ನಂಜೆ 90ರ ನಮನ

0

ಪುತ್ತೂರು: ಬಹುಶ್ರುತ ವಿದ್ವಾಂಸರು, ಪತ್ರಿಕಾ ಸಂಪಾದಕರು, ಪ್ರಖ್ಯಾತ ಪ್ರವಚನಕಾರರು, ಭಾಷಾಂತರಕಾರರು ಮತ್ತು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದ ಬನ್ನಂಜೆ ಗೋವಿಂದಾಚಾರ್ಯರ 90ರ ಸಂಸ್ಮರಣ ಕಾರ್ಯಕ್ರಮವು ಬೆಂಗಳೂರು ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಮತ್ತು ಬಹುವಚನಂ ಪುತ್ತೂರು ಇದರ ಆಶ್ರಯದಲ್ಲಿ ಅ.5ರಂದು ತೆಂಕಿಲ ಸ್ವಾಮಿ ಕಲಾಮಂದಿರದಲ್ಲಿ ನಡೆಯಲಿದೆ ಎಂದು ಡಾ. ಶ್ರೀಶ ಕುಮಾರ್ ಎಂ.ಕೆ ಹೇಳಿದರು.


ಅ.3ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಬನ್ನಂಜೆ 90ರ ನಮನ ಕಾರ್ಯಕ್ರಮವು ದೇಶದಾದ್ಯಂತ ಸುಮಾರು 20ಕಾರ್ಯಕ್ರಮಗಳು ನಡೆಯಲಿದೆ. ಈಗಾಗಲೇ ಉಡುಪಿ, ಮಂಗಳೂರು ಮೂಡಬಿದ್ರೆ ಸುಬ್ರಹ್ಮಣ್ಯ ಮೊದಲಾದ ಸ್ಥಳಗಳಲ್ಲಿ ನಡೆದಿದ್ದು 6ನೇ ಕಾರ್ಯಕ್ರಮ ಪುತ್ತೂರಿನಲ್ಲಿ ನಡೆಯುತ್ತಿದೆ. ಬೆಳಗ್ಗೆಯಿಂದ ಸಂಜೆ ತನಕ ನಮನ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ. ಬೆಳಿಗ್ಗೆ ನಡೆಯುವ ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್‌ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜಿ.ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಬಲರಾಮ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ ರೈ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅತಿಥಿಗಳಾಗಿ ಆಗಮಿಸಲಿದ್ದಾರೆ. ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಕಾರ್ಯಾಧ್ಯಕ್ಷರು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳು ಆಗಿರುವ ಡಾ. ಮಲ್ಲೇಪುರಂ ಜಿ ವೆಂಕಟೇಶ ಪ್ರಸ್ತಾವಣೆಗೈಯಲಿದ್ದಾರೆ.‌


ನಂತರ ಬನ್ನಂಜೆ ಗೋವಿಂದಾಚಾರ್ಯರ ಬಗ್ಗೆ ಎರಡು ವಿಚಾರಗೋಷ್ಠಿಗಳು ನಡೆಯಲಿದ್ದು ಖ್ಯಾತ ಸಾಹಿತಿಗಳು ಮತ್ತು ಅಧ್ಯಾತ್ಮ ಚಿಂತಕರಾಗಿರುವ ಲಕ್ಷ್ಮೀಶ ತೋಳ್ವಾಡಿ ‘ಬನ್ನಂಜೆ ಸ್ಮರಣೆ’, ಅಪರಾಹ್ನದ ಗೋಷ್ಠಿಯಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಬೆಂಗಳೂರು ಇದರ ಪ್ರಾಧ್ಯಾಪಕ ವಿದ್ವಾನ್ ಕೃಷ್ಣರಾಜ ಕುತ್ಪಾಡಿ ‘ಗುರು ಬನ್ನಂಜೆ’ ಹಾಗೂ ಬೆಂಗಳೂರಿನ ಚಿಂತಕಿ ಭಾರತಿ ಕಲ್ಲೂರಾಯ ‘ವಿಶ್ವತೋಮುಖ ಬನ್ನಂಜೆ’ ಎಂಬ ವಿಚಾರದಲ್ಲಿ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಬನ್ನಂಜೆಯವರ ಹಾಡುಗಬ್ಬಗಳನ್ನು ಕವಿತಾ ಉಡುವ ಮತ್ತು ಸುಮಾ ಶಾಸ್ತಿ ನಡೆಸಿಕೊಡಲಿದ್ದಾರೆ. ನಂತರ ಕರ್ನಾಟಕದ ಖ್ಯಾತ ಸಿನಿಮಾ ನಿರ್ದೇಶಕ ಸುಚೇಂದ್ರ ಪ್ರಸಾದ್ ತಂಡದಿಂದ ‘ನನ್ನ ಪಿತಾಮಹ’ ಎಂಬ ನಾಟಕ ಪ್ರದರ್ಶನ ನಡೆಯಲಿದೆ.


ಸಂಜೆ ನಡೆಯಲಿರುವ ಆಚಾರ್ಯಾರ್ಪಣ ಸಮಾರೋಪ ಸಮಾರಂಭದಲ್ಲಿ ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಲ್ಲಿಕಾ ಪ್ರಸಾದ್ ಮತ್ತು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನ್ಯಾಕ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಖ್ಯಾತ ವಿದ್ವಾಂಸ ಜಗದೀಶ ಶರ್ಮ ಸಂಪ ಅಧ್ಯಕ್ಷತೆ ವಹಿಸಲಿದ್ದಾರೆ. ಬನ್ನಂಜೆಯವರ ಪುತ್ರಿ ಖ್ಯಾತ ವಾಗ್ಮಿ ಡಾ. ವೀಣಾ ಬನ್ನಂಜೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ವಿದ್ಯಾಭೂಷಣ ಮತ್ತು ತಂಡ ಬೆಂಗಳೂರು ಇವರಿಂದ ಬನ್ನಂಜೆ ಗಾನ ಲೋಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಹೇಳಿದರು.
ವಿಶ್ವ ಬನ್ನಂಜೆ 90ರ ನಮನ ಪುತ್ತೂರು ಸಮಿತಿ ಕಾರ್ಯಾಧ್ಯಕ್ಷ ಮಾಧವ ಸ್ವಾಮಿ, ಉಪಾಧ್ಯಕ್ಷ ಐ.ಕೆ ಬೊಳುವಾರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here