ನೇಜಿ ನಾಟಿ ಪ್ರಾತ್ಯಕ್ಷಿಕೆ, ಕೃಷಿಯ ಕುರಿತು ಮಾಹಿತಿ ಶಿಬಿರ
‘ಹಸಿರು ಸಿರಿ’ ಇಕೋ ಕ್ಲಬ್ ನಿಂದ ಕಾರ್ಯಕ್ರಮ ಆಯೋಜನೆ
ಕಾಣಿಯೂರು: ಅಲ್ಲೊಂದು ಇಲ್ಲೊಂದು ಬೇಸಾಯ ಮಾಡುವ ಗದ್ದೆಗಳು ಕಾಣ ಸಿಗುತ್ತವೆ. ಇಂದಿನ ಪೀಳಿಗೆಗೆ ಭತ್ತದ ಬೇಸಾಯ ಎಂದರೆ ಪ್ರಾತ್ಯಕ್ಷಿಕೆ ಮಾಡಿ ತೋರಿಸಬೇಕಾದ ಅನಿವಾರ್ಯತೆಯೂ ಇದೆ. ಎಲ್ಲಡೆ ವಾಣಿಜ್ಯ ಬೆಳೆಯಾದ ಅಡಕೆ, ರಬ್ಬರ್ ವ್ಯಾಪಿಸಿಕೊಂಡು ಗದ್ದೆ ಬೇಸಾಯವನ್ನು ಕಾಣುವುದು ಅಪರೂಪ ಎನ್ನುವ ಸನ್ನಿವೇಶ ಇರುವಾಗ
ಕಲಿಯುತ್ತಿರುವ ಮಕ್ಕಳಿಗೆ ಕೃಷಿಯ ಬಗ್ಗೆ ಒಲವು ತೋರಿಸುವ ನಿಟ್ಟಿನಲ್ಲಿ ಬೊಬ್ಬೆಕೇರಿ ಶಾಲೆಯಲ್ಲಿ ವಿಶಿಷ್ಠವಾದ ಕಾರ್ಯಕ್ರಮ ಆ 9ರಂದು ನಡೆಯಿತು.
ಬೊಬ್ಬೆಕೇರಿ ಸ. ಹಿ. ಪ್ರಾ. ಶಾಲೆಯ ಹಸಿರ ಸಿರಿ ಇಕೋ ಕ್ಲಬ್ ವತಿಯಿಂದ ವನಭೇಟಿ – ಪ್ರಕೃತಿ ನಡಿಗೆ ಕಾರ್ಯಕ್ರಮ, ಶಾಲೆಯ ಮಕ್ಕಳಿಗೆ ಬೊಬ್ಬೆಕೇರಿ ಸಮೀಪ ಬೇಂಗಡ್ಕ ರಾಮಣ್ಣ ನಾಯ್ಕ ಅವರ ಗದ್ದೆಯಲ್ಲಿ ನೇಜಿ ಕೃಷಿಯ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಮಕ್ಕಳ ಮೂಲಕ ನೇಜಿ ನಾಟಿ ಮಾಡುವ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು. ರಮ್ಯ ಮನೋಹರವಾದ ಪ್ರಕೃತಿಯ ಸುಂದರ ಮಡಿಲಲ್ಲಿ ಭತ್ತ ಬೇಸಾಯದ ಶಿಕ್ಷಣ ಪಡೆಯುವ ಮಕ್ಕಳ ಹುಮ್ಮಸ್ಸು ನೋಡುವವರ ಮನ ತಣಿಯುತ್ತಿತ್ತು. ಶಾಲಾ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಉತ್ಸಾಹದಿಂದ ಪಾಲ್ಗೊಂಡರು. ಗದ್ದೆ ಬೇಸಾಯ ಅಳಿವಿನಂಚಿಗೆ ಬಂದು ನಿಂತಿದೆ. ಅಲ್ಲೊಂದು ಇಲ್ಲೊಂದು ಗದ್ದೆಗಳನ್ನು ಕೆಲವೇ ಕೆಲವು ಮಂದಿ ಕೃಷಿಯ ಪ್ರೀತಿಗಾಗಿ ಭತ್ತ ಬೇಸಾಯವನ್ನು ಮುಂದುವರಿಸಿಕೊಂಡು ಬರುತ್ತಾ ಇದ್ದಾರೆ. ಕಲಿಕೆಯ ಸಮಯದಲ್ಲಿ ಇಂತಹ ಕಾರ್ಯಕ್ರಮ ಆಯೋಜನೆ ಶ್ಲಾಘನೀಯವಾಗಿದೆ. ಮಕ್ಕಳಿಗೆ ಭತ್ತ ಬೆಳೆಯುವ ಕೃಷಿಯ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಮಕ್ಕಳ ಮೂಲಕ ಭತ್ತ ನಾಟಿ ಮಾಡುವ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು. ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರಲ್ಲಿ ಆಸಕ್ತಿಯಿಂದ ಮಾಹಿತಿಯನ್ನು
ಪಡೆದುಕೊಂಡರು.

ಶಾಲಾ ಮಕ್ಕಳ ಜೊತೆಗೆ ಎಸ್ ಡಿ ಎಂ ಸಿ ಸದಸ್ಯರು, ಶಿಕ್ಷಕರು ನೇಜಿ ನಾಟಿ ಮಾಡುವ ಪ್ರಾತ್ಯಕ್ಷಿಕೆಯಲ್ಲಿ ಸಾಥ್ ನೀಡಿದರು. ಬೊಬ್ಬೆಕೇರಿ ಸ.ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಸುನೀತಾ ಗಣೇಶ್, ಉಪಾಧ್ಯಕ್ಷ ರಮೇಶ್ ಉಪ್ಪಡ್ಕ, ಶಾಲಾ ಮುಖ್ಯಗುರು ಶಶಿಕಲಾ, ಶಿಕ್ಷಕರಾದ ಜನಾರ್ದನ ಹೇಮಳ, ಶೋಭಿತಾ, ಎಸ್ ಡಿ ಎಂ ಸಿ ಸದಸ್ಯ ಸುಧಾಕರ್ ಕಾಣಿಯೂರುರವರು ನೇಜಿ ನಾಟಿ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿದ್ದರು.