ಪುತ್ತೂರು: ಒಳ್ಳೆಯ ಗುಣ ಮನುಷ್ಯನನ್ನು ಎತ್ತರಕ್ಕೆ ಏರಿಸುತ್ತದೆ. ಗುಣ ಇದ್ದಾಗ ಹಣ ಬರ್ತದೆ ಆದರೆ ಹಣ ಇದ್ದಾಗ ಗುಣ ಇರುವುದಿಲ್ಲ. ಆದುದರಿಂದ ಎಲ್ಲರೂ ಸದ್ಗುಣವಂತರಾಗಿ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ 2024-25ನೇ ಸಾಲಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ನಡೆಸಿದ ಇಂಜಿನಿಯರಿಂಗ್ ವಿಭಾಗಗಳ ಅಂತಿಮ ವರ್ಷದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಪದವೀಧರರಾದ ಅರ್ಹ ವಿದ್ಯಾರ್ಥಿಗಳ ಪದವಿ ಪ್ರದಾನ ಕಾರ್ಯಕ್ರಮ ಸಮಾವರ್ತನ ಸಮಾರಂಭದಲ್ಲಿ ಮಾತಾಡಿದರು.
ಕಾಲೇಜಿನಲ್ಲಿ ಇದುವರೆಗಿನ ಬೇರೆ ಬೇರೆ ವಿಭಾಗಗಳಲ್ಲಿ ವಿದ್ಯಾರ್ಜನೆಯನ್ನು ಮಾಡಿದ್ದೀರಿ. ಆದರೆ ಮುಂದೆ ಇರುವ ಸಮಾಜ ಎನ್ನುವುದು ಬೇರೆಯದೇ ವಿಭಾಗ ಇದರಿಂದ ಕಲಿಯುವುದು ಸಾಕಷ್ಟಿದೆ. ಅದರಲ್ಲಿ ಸಫಲರಾದರೆ ಜೀವನವನ್ನು ಸಾರ್ಥಕಪಡಿಸಿದಂತೆ ಎಂದು ಹೇಳಿದರು. ವಿವಿಧ ವಿಷಯಗಳಲ್ಲಿ ಸಂಶೋಧನೆಗಳನ್ನು ಮಾಡುವತ್ತ ಗಮನಹರಿಸಬೇಕು. ಹಣದ ಹಿಂದೆ ಓಡುವುದಲ್ಲ ಕೊಡುವುದರಲ್ಲಿಯೂ ಮುಂದಾಗಬೇಕು. ಸಮಾಜಕ್ಕೋಸ್ಕರ ಬದುಕುವುದರಿಂದ ಮಾನಸಿಕ ನೆಮ್ಮೆದಿ ಸಿಗುತ್ತದೆ ಎಂದರು. ಬರುವ ಸವಾಲುಗಳನ್ನು ಮೆಟ್ಟಿ ನಿಲ್ಲುವ ಛಾತಿಯನ್ನು ಬೆಳೆಸಿಕೊಂಡು ದೇಶದ ಉನ್ನತಿಯ ನೀತಿ ರಚನೆಯ ಹರಿಕಾರರಾಗಬೇಕು ಎಂದು ನುಡಿದರು.
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಪರೀಕ್ಷೆಯಲ್ಲಿ ಡಾಟಾ ಸೈನ್ಸ್ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಸುಚಿತಾ, ದ್ವಿತೀಯ ರ‍್ಯಾಂಕ್ ಗಳಿಸಿದ ಪ್ರಜ್ಞಾಶಂಕರಿ, 3ನೇ ರ‍್ಯಾಂಕ್ ಗಳಿಸಿದ ಸಿಂಚನಲಕ್ಷ್ಮಿ, 8ನೇ ರ‍್ಯಾಂಕ್ ಗಳಿಸಿದ ಶ್ರೀಲಕ್ಷ್ಮಿ.ವಿ, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ವಿಭಾಗದಲ್ಲಿ ದ್ವಿತೀಯ ರ‍್ಯಾಂಕ್ ಪಡೆದುಕೊಂಡ ರವಿನಾರಾಯಣ.ಕೆ.ಎಸ್, ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ 7ನೇ ರ‍್ಯಾಂಕ್ ಗಳಿಸಿದ ರಾಹುಲ್.ಕೆ ಮತ್ತು 9ನೇ ರ‍್ಯಾಂಕ್ ಗಳಿಸಿದ ಲಿಖಿತ.ಕೆ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಪ್ರತಿ ವಿಭಾಗದಲ್ಲಿ ಶೈಕ್ಷಣಿಕವಾಗಿ ಉನ್ನತ ಸಾಧನೆಯನ್ನು ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ನಿರ್ದೇಶಕ ಬಲರಾಮ ಆಚಾರ್ಯ.ಜಿ, ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ, ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್, ನಿರ್ದೇಶಕರಾದ ಸತ್ಯನಾರಾಯಣ.ಬಿ, ಸಂತೋಷ್ ಕುತ್ತಮೊಟ್ಟೆ, ಡಾ.ಯಶೋದಾ ರಾಮಚಂದ್ರ, ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ, ದಾಖಲಾತಿ ಮತ್ತು ನೇಮಕಾತಿ ವಿಭಾಗ ಮುಖ್ಯಸ್ಥೆ ಪ್ರೊ.ವಂದನಾ ಶಂಕರ್, ವಿವಿಧ ವಿಭಾಗ ಮುಖ್ಯಸ್ಥರುಗಳು, ಕಾರ್ಯಕ್ರಮ ಸಂಯೋಜಕರಾದ ಪ್ರೊ.ಪ್ರಶಾಂತ, ಪ್ರೊ.ರೂಪಾ.ಜಿ.ಕೆ, ಪ್ರೊ.ಪ್ರದೀಪ್ ಕುಮಾರ್.ಕೆ.ಜಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ಸ್ವಾಗತಿಸಿದರು. ಪ್ರೊ.ಪ್ರದೀಪ್ ಕುಮಾರ್.ಕೆ.ಜಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಪ್ರೊ.ನಿಶಾ.ಜಿ.ಆರ್ ಹಾಗೂ ಪ್ರೊ.ಶ್ರೀಶರಣ್ಯ ಕಾರ್ಯಕ್ರಮ ನಿರ್ವಹಿಸಿದರು.