ಅಳೇರಿಗುತ್ತು ಪಠೇಲ್ ಕೃಷ್ಣ ರೈಯವರ 95ನೇ ಹುಟ್ಟುಹಬ್ಬ ಆಚರಣೆ

0

ದೀಪ ಬೆಳಗಿಸಿ ಆಚರಿಸುವುದು ನಮ್ಮಸಂಸ್ಕೃತಿ-ಪಂಜಿಗುಡ್ಡೆ ಈಶ್ವರ ಭಟ್
ನಮ್ಮ ಯುವ ಪೀಳಿಗೆಗೆ ಪ್ರೇರಣೆಯಾಗಿದೆ- ಕುಂಬ್ರ ದುರ್ಗಾಪ್ರಸಾದ್ ರೈ

ಪುತ್ತೂರು: ಬಂಟ್ರ ಗ್ರಾಮದ ಅಳೇರಿಗುತ್ತು ಪಠೇಲ್ ಕೃಷ್ಣ ರೈಯವರ 95ನೇ ಹುಟ್ಟುಹಬ್ಬ ಆಚರಣೆಯು ಆ.9 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ಜರಗಿತು.

ಅಲೇರಿಗುತ್ತು ಪಠೇಲ್ ಕೃಷ್ಣ ರೈಯವರನ್ನು ಕುಂಬ್ರ ಜನನ ಹಾಗೂ ಅಳೇರಿಗುತ್ತು ಕುಟುಂಬಸ್ಥರ ಪರವಾಗಿ ಸನ್ಮಾನಿಸಲಾಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯರುಗಳಾದ ಮಹಾಬಲ ರೈ ಒಳತ್ತಡ್ಕ ಹಾಗೂ ವಿನಯ ಸುವರ್ಣ, ಅಲೇರಿಗುತ್ತು ಕೃಷ್ಣ ರೈಯವರ ಭಾವಂದಿರಾದ ಕುಂಬ್ರ ನಡುಮೊಗರುಗುತ್ತು ವಿಠಲ ಶೆಟ್ಟಿ ಕೆ.ಎನ್ ಮತ್ತು ಕುಂಬ್ರ ದೋಳ್ತೋಡಿ ವೆಂಕಪ್ಪ ರೈರವರುಗಳು ಅಳೇರಿಗುತ್ತು ಕೃಷ್ಣ ರೈಯವರ ಸನ್ಮಾನ ಸಮಾರಂಭವನ್ನು ನಡೆಸಿಕೊಟ್ಟರು. ಸನ್ಮಾನ ಪತ್ರ ನೀಡಿ, ಹಾರ ಹಾಕಿ, ಅದ್ದೂರಿಯಾಗಿ ಸನ್ಮಾನಿಸಲಾಯಿತು. ಕುಟುಂಬಸ್ಥರು ಸೇರಿಕೊಂಡು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.


ಬಳಿಕ ಮಾತನಾಡಿದ ಪಂಜಿಗುಡ್ಡೆ ಈಶ್ವರ್ ಭಟ್‌ರವರು ಮಾತನಾಡಿ ಕೃಷ್ಣ ರೈ ಅವರು ಮಾಡಿದ ಅನೇಕ ಕಾರ್ಯಗಳ ಬಗ್ಗೆ ಹಲವು ಮೂಲಗಳಿಂದ ತಿಳಿದಿದ್ದೇನೆ. ಅವರು ನಮ್ಮ ಸಂಸ್ಕೃತಿಯನ್ನು ಉಳಿಸಿದ್ದಾರೆ. ಜನ್ಮದಿನದಂದು ದೀಪ ಆರಿಸುವ ಸಂಸ್ಕೃತಿ ನಮ್ಮದಲ್ಲ. ದೀಪ ಬೆಳಗಿಸಿ ಆಚರಿಸುವುದು ನಮ್ಮಸಂಸ್ಕೃತಿ. ಈ ಸಂಸ್ಕೃತಿಯನ್ನು ಕೃಷ್ಣ ರೈ ಅವರ ಜನ್ಮ ದಿನಾಚರಣೆಯಲ್ಲಿ ಪಾಲಿಸಲಾಗಿದೆ. ಸಾಮಾಜಿಕ, ರಾಜಕೀಯ, ಕೃಷಿ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರ ಜೀವನದಲ್ಲಿ ದೇವರು ಎಲ್ಲವನ್ನೂ ಅವರಿಗೆ ಕರುಣಿಸಿದ್ದಾರೆ. ಅವರ ಕುಟುಂಬ ಇಂದು ಸಂತೋಷವಾಗಿದೆ ಎಂದರೆ ಅದಕ್ಕೆ ಕೃಷ್ಣ ರೈ ಅವರು ಮಾಡಿದ ಪುಣ್ಯದ ಫಲವೇ ಕಾರಣ ಎಂದು ಹೇಳಿ ಜನ್ಮ ದಿನಾಚರಣೆಗೆ ಶುಭಹಾರೈಸಿದರು.

ನಮ್ಮ ಯುವ ಪೀಳಿಗೆಗೆ ಪ್ರೇರಣೆಯಾಗಿದೆ- ಕುಂಬ್ರ ದುರ್ಗಾಪ್ರಸಾದ್ ರೈ
ನ್ಯಾಯವಾದಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡಿ ಕೃಷ್ಣ ರೈಯವರು ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿದ್ದಾರೆ. ಮಂಡಲ ಪಂಚಾಯತ್ ಪ್ರಧಾನರಾಗಿ, ಬಂಟ್ರ ಗ್ರಾಮ ಪಂಚಾಯತ್ ಸದಸ್ಯರಾಗಿ, ಕಡಬ ಸಿ.ಎ, ಬ್ಯಾಂಕ್ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ರಾಜಕೀಯ, ಸಾಮಾಜಿಕ, ಸಹಕಾರ ಕ್ಷೇತ್ರದಲ್ಲಿ ತನ್ನನು ತಾನು ತೊಡಗಿಸಿಕೊಂಡು, ಉತ್ತಮ ವ್ಯಕ್ತಿಯಾಗಿ ಸಮಾಜ ಮತ್ತು ಬಂಧುಬಳಗದಲ್ಲಿ ಗೌರವವನ್ನು ಪಡೆದುಕೊಂಡಿದ್ದಾರೆ. ಅವರು ಬದುಕು ನಮ್ಮ ಯುವ ಪೀಳಿಗೆಗೆ ಪ್ರೇರಣೆಯಾಗಿದೆ ಎಂದು ಹೇಳಿ, ಕೃಷ್ಣ ರೈಯವರು ನೂರಾರು ವರ್ಷ ಸುಖವಾಗಿ ಬಾಳಲಿ ಎಂದು ಶುಭಹಾರೈಸಿದರು.


ಆದರ್ಶಪ್ರಾಯ- ಯಶವಂತ್ ರೈ
ನಿವೃತ್ತ ಶಿಕ್ಷಕ ಯಶವಂತ ರೈರವರು ಮಾತನಾಡಿ ಕೃಷ್ಣ ರೈರವರು ಮಾತನಾಡಿ ಕಳೆದ 55 ವರ್ಷಗಳಿಂದ ಕೃಷ್ಣ ರೈ ಅವರೊಂದಿಗೆ ಒಡನಾಟ ಹೊಂದಿದ್ದೇನೆ. ಅವರು ಸರ್ಕಾರಿ ಕೆಲಸಕ್ಕೆ ಹೋಗದೆ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಪ್ರಧಾನೇರ್ ಎಂದೇ ಖ್ಯಾತಿ ಪಡೆದಿರುವ ಇವರು ಸಮಾಜಕ್ಕೆ ಆದರ್ಶ ಪ್ರಾಯರಾಗಿದ್ದಾರೆ ಎಂದು ಶುಭಹಾರೈಸಿದರು.


ಹಿರಿಯರಾದ ಅಂಬಾ ಜಗನ್ನಾಥ ರೈರವರು ಮಾತನಾಡಿ ಇಂತಹ ಕಾರ್ಯಕ್ರಮಗಳಿಂದ ಮನಸ್ಸಿಗೆ ಸಂತೋಷವಾಗುತ್ತದೆ. ಕೃಷ್ಣ ರೈ ಅವರು ನೇರ ನಡೆ, ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ. ರಾಜಕೀಯವಾಗಿ ಎಲ್ಲಾ ಪಕ್ಷದವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಹೀಗಾಗಿ ಮಂಡಲ ಪಂಚಾಯತ್ನಲ್ಲಿ ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು ಎಂದು ಹೇಳಿದರು.
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ. ಮಂಗಳೂರು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಒಪರೇಟಿವ್ ಸೊಸೈಟಿಯ ನಿರ್ದೇಶಕರುಗಳಾದ ಅರಿಯಡ್ಕ ಚಿಕ್ಕಪ್ಪ ನಾೖಕ್‌, ಕುಂಬ್ರ ದಯಾಕರ್ ಆಳ್ವ, ಪುತ್ತೂರು ಕೋಟಿ-ಚೆನ್ನಯ್ಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ್ ಶೆಟ್ಟಿ, ಹೆಗ್ಡೆಹಿತ್ಲು ಸೀತಾರಾಮ ಶೆಟ್ಟಿ ಸಹಿತ ಅನೇಕ ಮಂದಿ ಶುಭಹಾರೈಸಿದರು.


ಕುಂಬ್ರ ದೋಳ್ತೋಡಿ ವೆಂಕಪ್ಪ ರೈ ಸ್ವಾಗತಿಸಿ, ಕೃಷ್ಣ ರೈಯವರ ಪುತ್ರ ಪ್ರಶಾಂತ್ ರೈ ಸನ್ಮಾನ ಪತ್ರ ವಾಚಿಸಿದರು. ಇನ್ನೋರ್ವ ಪುತ್ರ ಪ್ರದೀಪ್ ರೈ ವಂದಿಸಿದರು. ಕೃಷ್ಣ ರೈಯವರ ಪುತ್ರಿಯರಾದ ವೀಣಾ ರೈ, ವಿದ್ಯಾ ರೈ, ಸೊಸೆಯಂದಿರಾದ ಸುಶ್ಮಾ ರೈ, ಪ್ರತಿಮಾ ರೈ, ಅಳಿಯಂದಿರಾದ ಅರುಣ್ ರೈ, ರವಿಶಂಕರ್ ಶೆಟ್ಟಿ ಮತ್ತು ಮೊಮ್ಮಕ್ಕಳು ಹಾಗೂ ಕುಂಬ್ರ ಜನನ ಹಾಗೂ ಅಳೇರಿಗುತ್ತು ಕುಟುಂಬಸ್ಥರು, ಹಿತೈಷಿಗಳು ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here