ಶೃದ್ಧೆ, ನಂಬಿಕೆಯಿಂದ ನೈತಿಕ ಬಲ ಪ್ರಾಪ್ತಿ: ಡಾ. ತಾಳ್ತಜೆ ವಸಂತ ಕುಮಾರ
ಉಪ್ಪಿನಂಗಡಿ: ಶೃದ್ಧೆ, ನಂಬಿಕೆ ನಮಗೆ ನೈತಿಕ ಬಲವನ್ನು ತುಂಬುತ್ತದೆ. ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಇದನ್ನು ಮೈಗೂಡಿಕೊಂಡರೆ ಆ ಮೂಲಕ ಫಲ ದೊರಕಲಿದೆ ಎಂದು ಹಿರಿಯ ಸಾಹಿತಿ, ವಸುಧಾ ಪ್ರತಿಷ್ಠಾನದ ಮುಖ್ಯಸ್ಥ ಡಾ. ತಾಳ್ತಜೆ ವಸಂತಕುಮಾರ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಘಟಕ ಮತ್ತು ವಸುಧಾ ಪ್ರತಿಷ್ಠಾನದ ವತಿಯಿಂದ ಆ.9ರಂದು ಇಂದ್ರಪ್ರಸ್ಥ ವಿದ್ಯಾಲಯದ ಇಂದ್ರಪ್ರಭ ಅಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾದ ಕನ್ನಡ ಕಲರವ-2 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತ್ಯದಲ್ಲಿ, ಕಾವ್ಯ ರಾಶಿಯಲ್ಲಿ ಜೀವನ ಉತ್ತೇಜಕವಾದ ಅಂಶ ಇದೆ. ವಿದ್ಯಾರ್ಥಿಗಳು ಸಾಹಿತ್ಯದ ಭಾಗವನ್ನು ಮತ್ತು ಅದರಲ್ಲಿರುವ ಸಂಪತ್ತನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಕೊಡುಗೆ ನೀಡಿದ ಚೇತನಗಳಾದ ಯಕ್ಷಕನ್ಯೆ ಪಾತಾಳ ವೆಂಕಟರಮಣ ಭಟ್, ವೈದ್ಯ ಕೆ. ಶೀನಪ್ಪ ಶೆಟ್ಟಿ, ಡಾ. ಮುದ್ರಜೆ ರಾಮಚಂದ್ರ ಭಟ್ ಇವರುಗಳ ಸಾಧನೆ ಅತ್ಯಮೂಲ್ಯವಾಗಿತ್ತು ಮತ್ತು ಅವರು ಹೃದಯ ಸಂವಾದಕ್ಕೆ ಕಾರಣರಾಗಿದ್ದರು. ಇವರುಗಳ ಸ್ಥಾನವನ್ನು ತುಂಬಿಸಲು ಪರ್‍ಯಾಯ ವ್ಯಕ್ತಿ ಕಾಣುವುದಿಲ್ಲ ಎಂದರು.
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಪುತ್ತೂರು ಮಾತನಾಡಿ, ಸಾಹಿತ್ಯದೊಂದಿಗೆ ಇದ್ದ 3 ಮಂದಿ ದಿಗ್ಗಜರು ಪ್ರೀತಿ, ಬದ್ಧತೆಯನ್ನು ತೋರುತ್ತಿದ್ದರು. ಇಂತಹ ಕಾರ್ಯಕ್ರಮಗಳ ಮೂಲಕ ಸಾಹಿತ್ಯ ಸಂಘಟನೆಗೂ ಇದು ಸಹಕಾರಿ ಆಗಿದೆ ಎಂದರು.
ಉಪ್ಪಿನಂಗಡಿಯ ಡಾ. ಗೋವಿಂದಪ್ರಸಾದ್ ಕಜೆ ಅಗಲಿದ ಚೇತನಗಳಾದ ಯಕ್ಷಕನ್ಯೆ ಪಾತಾಳ ವೆಂಕಟರಮಣ ಭಟ್, ವೈದ್ಯ ಕೆ. ಶೀನಪ್ಪ ಶೆಟ್ಟಿ, ಡಾ. ಮುದ್ರಜೆ ರಾಮಚಂದ್ರ ಭಟ್ ಇವರುಗಳಿಗೆ ನುಡಿ ನಮನ ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕದ ಅಧ್ಯಕ್ಷ ಕರುಣಾಕರ ಸುವರ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಘಟಕದ ವತಿಯಿಂದ ಪ್ರತೀ ತಿಂಗಳು ಸಾಹಿತ್ಯ ಕಾರ್ಯಕ್ರಮ ನಡೆಸುತ್ತಿದ್ದು, ಅದರಲ್ಲೂ ಮನೆ ಮನೆ ಸಾಹಿತ್ಯಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಕಥೆ, ಕವನ ಮೊದಲಾದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾೖಕ್, ಸದಸ್ಯರಾದ ಎ. ಕೃಷ್ಣ ರಾವ್ ಅರ್ತಿಲ, ಪ್ರಮುಖರಾದ ಡಾ. ರಾಜಾರಾಮ್ ಕೆ.ಬಿ., ಡಾ. ಕೆ.ಜಿ. ಭಟ್, ಡಾ. ಸುಪ್ರೀತ್ ಲೋಬೋ, ಗೋಪಾಲ ಹೆಗ್ಡೆ, ಯು.ಜಿ. ರಾಧಾ, ನಂದೀಶ್, ರಾಮಚಂದ್ರ ಮಣಿಯಾಣಿ, ಜಯಂತ ಪೊರೋಳಿ, ವಿದ್ಯಾಧರ ಜೈನ್, ಲೋಕೇಶ್ ಬೆತ್ತೋಡಿ, ಸುಧಾಕರ ಶೆಟ್ಟಿ, ಸುಂದರ ಗೌಡ, ಸುನಿಲ್ ನಾಯ್ಕ್ ಉಪಸ್ಥಿತರಿದ್ದರು.
ಘಟಕದ ಕಾರ್ಯದರ್ಶಿ ಯು.ಎಲ್. ಉದಯಕುಮಾರ್ ಸ್ವಾಗತಿಸಿದರು. ಅಬ್ದುಲ್ ರಹಿಮಾನ್ ಯುನಿಕ್ ವಂದಿಸಿದರು. ಶೀಲಾ ಹರೀಶ್, ಸುಂದರಿ ನಿರೂಪಿಸಿದರು.