ಪುತ್ತೂರು: ಕೆದಿಲ ಗ್ರಾಮದ ಕಾಂತುಕೋಡಿ ತೋಡಿನಲ್ಲಿ ಮಹಿಳೆಯ ಮೃತದೇಹ ಪತ್ತೆಯಾದ ದಿನದಿಂದ ನಾಪತ್ತೆಯಾಗಿದ್ದ ಆಕೆಯ ಬಾವ ಆ.10 ರಂದು ಬೆಳಗ್ಗೆ ಮನೆಯಂಗಳದಲ್ಲಿ ದಿಢೀರ್ ಪ್ರತ್ಯಕ್ಷಗೊಂಡಿದ್ದಾರೆ.
ಕೆದಿಲ ವಳಂಕುಮೇರಿ ನಿವಾಸಿ ಗಣಪತಿ ಯಾನೆ ರಾಮಣ್ಣ ಗೌಡ ಅವರ ಪತ್ನಿ ಮಮತಾ ಅವರ ಮೃತದೇಹ ಆ.6 ರಂದು ಕೆದಿಲ ಗ್ರಾಮದ ಕಾಂತುಕೋಡಿ ಮಳೆ ನೀರು ಹರಿಯುವ ತೋಡಿನಲ್ಲಿ ಪತ್ತೆಯಾಗಿತ್ತು. ಅದೇ ದಿನ ರಾಮಣ್ಣ ಗೌಡ ಅವರ ಅಣ್ಣ ಸುಂದರ ಯಾನೆ ಲೋಕಯ್ಯ ಗೌಡ ಅವರು ನಾಪತ್ತೆಯಾಗಿದ್ದರು. ಮಮತಾ ಅವರ ಸಾವಿನ ಮೇಲೆ ಶಂಕೆ ವ್ಯಕ್ತಪಡಿಸಿ ಲೋಕಯ್ಯ ಯಾನೆ ಸುಂದರ ಕೊಲೆ ಮಾಡಿರುವುದಾಗಿ ಆರೋಪಿಸಿ ಮಮತಾ ಅವರ ಪತಿ ಗಣಪತಿ ಯಾನೆ ರಾಮಣ್ಣ ಗೌಡ ಅವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು.
‘ನನ್ನ ಪತ್ನಿ ಮಮತಾಳನ್ನು ನನ್ನ ಸಹೋದರನಾದ ಲೋಕಯ್ಯ ಯಾನೆ ಸುಂದರ, ಆತನ ವಿವಾಹ ವಿಚ್ಚೇದನದ ಪರಿಹಾರ ಹಣದ ವಿಚಾರದಲ್ಲಿ ನನ್ನ ಪತ್ನಿಯನ್ನು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿ, ಪ್ರಜ್ಞೆ ತಪ್ಪಿದ ನಂತರ ಹರಿಯುವ ನೀರಿಗೆ ದೂಡಿ ಹಾಕಿರುವುದರಿಂದ ಮಮತಾ ಮೃತಪಟ್ಟಿರುವುದಾಗಿ ದೂರಿನಲ್ಲಿ ಅವರು ತಿಳಿಸಿದ್ದರು.
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯ ಪತ್ತೆಗೆ ಕೆದಿಲ ಪರಿಸರದ ಕಾಡಿನಲ್ಲಿ ಪತ್ತೆ ಕಾರ್ಯ ಆರಂಭಿಸಿದ್ದರು. ಆದರೆ ಲೋಕಯ್ಯ ಗೌಡ ಅವರು ಪತ್ತೆಯಾಗಿರಲಿಲ್ಲ. ಇದೀಗ ಆ.10 ರಂದು ಬೆಳಗ್ಗೆ ಲೋಕಯ್ಯ ಗೌಡ ಅವರು ತನ್ನ ಮನೆಯ ಮುಂದೆ ಪ್ರತ್ಯಕ್ಷವಾಗಿದ್ದಾರೆ. ಅವರನ್ನು ನೋಡಿ ಮನೆ ಮಂದಿ ಹಿಡಿದಿಟ್ಟುಕೊಂಡು ಮಮತಾ ಅವರ ಕೊಲೆ ನಡೆದಿರುವ ಕುರಿತು ವಿಚಾರಿಸುತ್ತಿದ್ದಾರೆ. ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆಂದು ಮಾಹಿತಿ ಲಭ್ಯವಾಗಿದೆ.