ಬಡಗನ್ನೂರು: ಗಿಡ, ಮರ ಉಳಿಸಿ ಬೆಳೆಸಿ ಅನ್ನುವ ಅರಣ್ಯ ಇಲಾಖೆ ವಿದ್ಯುತ್ ಕಂಬದ ಅಡಿಯಲ್ಲಿ ಲೈನ್ ಹಾದು ಹೋಗಿರುವ ಜಾಗದ ಕೆಳಭಾಗದ ರಸ್ತೆಯ ಅಂಚಿನಲ್ಲಿ ಗಿಡ ನೆಟ್ಟು ವಿನೂತನ ರೀತಿಯಲ್ಲಿ ಪರಿಸರ ಸಂರಕ್ಷಣೆ ಅಭಿಯಾನ ನಡೆಸಿಕೊಂಡಿದೆ.
ಪುತ್ತೂರು ಉಪವಿಭಾಗದ ಅರಣ್ಯ ವ್ಯಾಪ್ತಿಯ ರಸ್ತೆ ಬದಿಯ ಹಲವು ಭಾಗದಲ್ಲಿ ಇಂತಹ ದೃಶ್ಯಗಳು ಕಂಡು ಬರುತ್ತಿದೆ. ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಹಾನಿಯಾಗದಂತೆ ಮತ್ತು ಇನ್ನಿತರ ಯಾವುದೇ ಸಮಸ್ಯೆಗಳು ಆಗದ ಹಾಗೆ ಸುರಕ್ಷಿತ ಕ್ರಮಗಳಲ್ಲಿ ರಸ್ತೆ ಬದಿಗಳಲ್ಲಿ ಗಿಡ ನೆಡುವ ಬದಲು ಮುಂದಾಲೋಚನೆ ಇಲ್ಲದೆ ಅಸುರಕ್ಷಿತ ನಾಟಿಮಾಡಿ ಸಾರ್ವಜನಿಕ ಹಣ ಪೋಲು ಮಾಡುತ್ತಿದೆ.
ತಂತಿ ಅಡಿಯಲ್ಲೇ ಗಿಡ
ಪುತ್ತೂರು – ದೇವಸ್ಯ- ಉಪ್ಪಳಿಗೆ – ರಸ್ತೆ, ಪುತ್ತೂರು – ದೇವಸ್ಯ – ವಿಟ್ಲ ರಸ್ತೆ ಸೇರಿದಂತೆ ಹಲವು ಭಾಗಗಳಲ್ಲಿ ಎಚ್ಟಿ ಲೈನ್ ಗಳ ಅಡಿಯಲ್ಲಿಯೇ ಗಿಡ ನೆಡಲಾಗಿದೆ. ಭವಿಷ್ಯದಲ್ಲಿ ಸಾಲು ಸಾಲು ನಾಟಿ ಮಾಡಿದ ಗಿಡಗಳು ಬೆಳೆದು ನಿಂತರೆ ಅವು ನೇರವಾಗಿ ವಿದ್ಯುತ್ ತಂತಿಗಳನ್ನು ಸ್ಪರ್ಶಿಸುವ ಅಪಾಯ ಇದೆ. ಇಂತಹ ಕನಿಷ್ಠ ಅರಿವು ಇಲ್ಲದ ರೀತಿಯಲ್ಲಿ ಗಿಡ ನಾಟಿ ಮಾಡಿರುವ ಅರಣ್ಯ ಇಲಾಖೆ ಕ್ರಮದ ವಿರುದ್ಧ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ. ವಿದ್ಯುತ್ ತಂತಿ ಅಡಿಯಲ್ಲಿಯೇ ಗಿಡ ನೆಟ್ಟಿರುವುದು ಕಾಟಾಚಾರದ ಪರಿಸರ ಸಂರಕ್ಷಣೆಯಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಸಸಿ ನೆಟ್ಟು ಬದುಕಿರುವ ಪುರಾವೆಗಳೇ ಇಲ್ಲ
ಪ್ರತೀ ವರ್ಷ ರಸ್ತೆ ಬದಿ, ಇನ್ನಿತರ ಭಾಗದಲ್ಲಿ ಆರಣ್ಯ ಇಲಾಖೆ ವತಿಯಿಂದ ಗಿಡ ನೆಡುವ ಕಾರ್ಯ ನಡೆಯುತ್ತಲೇ ಇರುತ್ತದೆ ಆದರೆ ಗಿಡ ನೆಟ್ಟು ಬಳಿಕ ಮತ್ತೆ ಅದರ ಬುಡಕ್ಕೆ ಹೋಗುವುದು ಮತ್ತೆ ವನಮಹೋತ್ಸವ ಆಚರಣೆ ಸಂದರ್ಭದಲ್ಲಿ ಮಾತ್ರ.
ರಸ್ತೆ ಬದಿ ನೆಟ್ಟಿರುವ ಸಸಿಗಳು ಅಳಿದುಳಿದು ಬದುಕಿದ್ದರೂ ಅದನ್ನು ರಸ್ತೆ ಅಭಿವೃದ್ಧಿ ಸಂದರ್ಭದಲ್ಲಿ ಬುಡ ಸಮೇತ ಕಿತ್ತು ತೆಗೆಯುತ್ತಾರೆ. ವಿದ್ಯುತ್ ತಂತಿ ಅಡಿಯಲ್ಲಿ ಬೆಳೆದ ಸಸಿಗಳು ಅಪಾಯಕಾರಿಯಾಗಿ ಪರಿಣಮಿಸಿದಾಗ ಮಳೆಗಾಲದಲ್ಲಿ ಇಲಾಖೆ ವತಿಯಿಂದ ತೆರವು ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡುವುದಾದರೆ ರಸ್ತೆ ಮಾರ್ಜಿನ್ ಬಿಟ್ಟು ಮತ್ತು ವಿದ್ಯುತ್ ತಂತಿ ಹಾಗೂ ಕಂಬದ ಅಡಿಭಾಗದಲ್ಲಿ ನೆಡದೆ ಇನ್ನಿತರ ವಿಶಾಲ ಪ್ರದೇಶದಲ್ಲಿ ನೆಟ್ಟು ಪೋಷಣೆ ಮಾಡಬೇಕಾಗಿದೆ ಹೊರತು ಕಾಟಾಚಾರಕ್ಕೆ ಈ ರೀತಿ ಮಾಡಬಾರದು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಪುತ್ತೂರು ತಾಲೂಕಿನ ಎಲ್ಲಾ ಭಾಗದಲ್ಲಿ ಅರಣ್ಯ ಇಲಾಖೆ ಅರಣ್ಯೀಕರಣ ಕೆಲಸ ಕೈಗೊಂಡಿದೆ. ಇದು ಎಲ್ಲೋ ಒಂದು ಕಡೆ ಯಾರದ್ದೊ ದುಡ್ಡು ಯಲ್ಲಮ್ಮನ ಜಾತ್ರೆ ಆನುವ ರೀತಿಯಲ್ಲಿ ಕೆಲಸ ನಡೆದಿದೆ. ಯಾವುದೇ ಒಂದು ಇಲಾಖೆ ಕೆಲಸ ಮಾಡುವಾಗ ದೂರದೃಷ್ಟಿ ಯೋಜನೆ ಹಾಕಿಕೊಂಡು ಕೆಲಸ ಮಾಡಿಸಬೇಕಾಗಿದೆ. ಆದರೆ ಅರಣ್ಯ ಇಲಾಖೆ ಕೈಗೂಂಡ ಅರಣ್ಯೀಕರಣ ಕಾಮಗಾರಿಯಡಿ ರಸ್ತೆಯ ಅಂಚುಗಳಲ್ಲಿ ಮತ್ತು ವಿದ್ಯುತ್ ತಂತಿಗಳ ಅಡಿಭಾಗದಲ್ಲಿ ಗಿಡಗಳನ್ನು ನಟ್ಟಿದ್ದು ಇದು ಭ್ರಷ್ಟಾಚಾರಕ್ಕೆ ಎಡೆಮಾಡಿ ಕೊಟ್ಟಂತಾಗಿದೆ. ಸರಕಾರದ ದುಡ್ಡು ಬೇಕಾಬಿಟ್ಟಿಯಾಗಿ ಖರ್ಚು ಮಾಡಬಹುದೆಂಬ ರೀತಿಯಲ್ಲಿ ಕಾಮಗಾರಿ ನಡೆದಿದೆ. ಲೋಕೋಪಯೋಗಿ ಇಲಾಖೆ ರಸ್ತೆ ಚರಂಡಿ ತಡೆಗಳನ್ನು ತೆಗಿಯುವ ಸಂದರ್ಭದಲ್ಲಿ ಗಿಡಗಳು ನಾಶವಾಗಬಹುದು, ಅಲ್ಲದೆ ಗಿಡಗಳು ಬೆಳೆದು ಮರವಾದ ಬಳಿಕ ಅಪಾಯಕಾರಿಯಾಗಿ ಪರಿಣಮಿಸಿದಾಗ ಮಸ್ಕಾಂ ಇಲಾಖೆ ಕಡಿಯಾಬೇಕಾಗುತ್ತದೆ. ಅದು ಅಲ್ಲದೆ ಮಾವು, ಹಲಸು ಗಿಡಗಳನ್ನು ನೆಟ್ಟಿದ್ದಾರೆ ಇದು ದೊಡ್ಡ ಗ್ರಾತ್ರದಲ್ಲಿ ಬೆಳೆದು ರಸ್ತೆಯ ಅಡಿ ಭಾಗಕ್ಕೆ ಬೇರು ನುಗ್ಗಿ ರಸ್ತೆ ಹಾಳಾಗುವ ಸಾಧ್ಯತೆಯೂ ಇದೆ. ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳು ತಕ್ಷಣ, ಪರಿಶೀಲನೆ ಮಾಡಿ ಎಲ್ಲೆಲ್ಲಿ ವಿದ್ಯುತ್ ತಂತಿ ಅಡಿಯಲ್ಲಿ ಗಿಡ ನೆಡಲು ಕಾರಣಕರ್ತರಾದವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಒಳಮೊಗ್ರು ಗ್ರಾ.ಪಂ ಸದಸ್ಯ ಮಹೇಶ ರೈ ಕೇರಿ ಆಗ್ರಹಿಸಿದ್ದಾರೆ.