ಕೆಸರು ಗದ್ದೆಯಲ್ಲಿನ ಆಟ ಆರೋಗ್ಯಕ್ಕೆ ಪೂರಕ: ಮಾಲತಿ ಡಿ.
ಪುತ್ತೂರು: ಕೆಸರು ಗದ್ದೆಯಲ್ಲಿ ಆಡುವುದು ಒಳ್ಳೆಯ ವಿಚಾರ. ಇದರ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಅಷ್ಟೇ ಅಲ್ಲ ಶೀತ, ನೆಗಡಿ ಇಂತಹ ಸೋಂಕುಗಳು ಯಾವುದೇ ಕಾರಣಕ್ಕೂ ಬಾಧಿಸುವುದಿಲ್ಲ ಎಂದು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ. ಹೇಳಿದರು.
ಅವರು ಕಾರ್ಜಾಲು ಕೊಡಿಪ್ಪಾಡಿಯ ಅಜಿತ್ ಕುಮಾರ್ ಜೈನ್ ಅವರ ಗದ್ದೆಯಲ್ಲಿ ಸಂಸ್ಥೆಯ ವತಿಯಿಂದ ಏರ್ಪಡಿಸಲಾದ ಕೆಸರು ಗದ್ದೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೋಮವಾರ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಕೆಸರುಗದ್ದೆಯಲ್ಲಿ ಹಗ್ಗ ಜಗ್ಗಾಟ, ವಾಲಿಬಾಲ್, ಟ್ರೆಷರ್ ಹಂಟ್, ಎರಡು ಕಾಲಿನ ಹಗ್ಗದ ಓಟ, ಮೂರು ಕಾಲಿನ ಹಗ್ಗದ ಓಟ ಹೀಗೆ ವಿವಿಧ ರೀತಿಯ ಆಟಗಳನ್ನು ಹಮ್ಮಿಕೊಳ್ಳಲಾಯಿತು. ಅಜಿತ್ ಕುಮಾರ್ ಜೈನ್, ಶಾಲಾ ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು.
ಎಂಟನೇ ತರಗತಿಯ ವಿದ್ಯಾರ್ಥಿಗಳಾದ ಸನ್ಮಯ್ ಹಾಗೂ ಶೌರಿ ತುಳು ಪ್ರಾರ್ಥನೆಯನ್ನು ಮಾಡಿದರು. ಕಾರ್ಯಕ್ರಮವನ್ನು ಶಿಕ್ಷಕಿಯರಾದ ಗೌರಿ ಸ್ವಾಗತಿಸಿ, ದೀಪ್ತಿ ವಂದಿಸಿದರು. ವಿದ್ಯಾರ್ಥಿನಿ ವೈಷ್ಣವಿ ಕಾರ್ಯಕ್ರಮವನ್ನು ನಿರ್ವಹಿಸಿದರು.