ಯುವ ಕವಿಗಳು ಸಾಮಾಜಿಕ ಬದಲಾವಣೆಯ ಹರಿಕಾರರಾಗಬೇಕು: ನಾರಾಯಣ ರೈ ಕುಕ್ಕುವಳ್ಳಿ
ಪುತ್ತೂರು: ಸಾಹಿತ್ಯವು ನಾಡನ್ನು ಬೆಳಗುವ ಅಮೂಲ್ಯ ಕ್ಷೇತ್ರವಾಗಿದ್ದು ಯುವ ಕವಿಗಳು ಸಮಾಜದ ಕಣ್ಣು ತೆರೆಸುವ ಕವನಗಳ ಮೂಲಕ ಸಾಮಾಜಿಕ ಬದಲಾವಣೆಯ ಹರಿಕಾರರಾಗಬೇಕೆಂದು ಹಿರಿಯ ಸಾಹಿತಿ, ಪತ್ರಕರ್ತ ನಾರಾಯಣ ರೈ ಕುಕ್ಕುವಳ್ಳಿ ಹೇಳಿದರು.
ಪುತ್ತೂರು ಸಿಟಿ ಸೆಂಟರ್ ಕಟ್ಟಡದಲ್ಲಿ ನೂತನವಾಗಿ ಆರಂಭಗೊಂಡ ” ಹೋಟೆಲ್ ರಾಯಲ್ ಮ್ಯಾಕ್ಸ್ “ಉದ್ಘಾಟನೆಯ ಅಂಗವಾಗಿ ನಡೆದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಸಾಹಿತ್ಯವು ಧರ್ಮ, ಜಾತಿ ಎಂಬ ತಾರತಮ್ಯವಿಲ್ಲದ ಸ್ಪಟಿಕ ಶುದ್ಧ ರೂಪದಲ್ಲಿರುವ ಕಾರಣ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಯಾವುದೇ ಭಿನ್ನ ಸ್ವರಗಳು ಇರುವುದಿಲ್ಲ.
ಕವಿ,ಲೇಖಕರು ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡರೆ ಸಮಾಜವನ್ನು ಯಾರಿಗೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಕವಿಗಳಾದ ಅಬ್ದುಲ್ ಸಮದ್ ಬಾವ ಪುತ್ತೂರು, ನಾರಾಯಣ ಕುಂಬ್ರ, ಎಂ.ಎ.ಮುಸ್ತಫಾ ಬೆಳ್ಳಾರೆ, ಎ.ಅಬೂಬಕರ್ ಅನಿಲಕಟ್ಟೆ, ವಿಟ್ಲ, ಸಲೀಂ ಮಾಣಿ,ಎಂ.ಪಿ.ಬಶೀರ್ ಅಹ್ಮದ್ ಬಂಟ್ವಾಳ, ಶಾರುಖ್ ಕೊಪ್ಪಳ,ಅನಾರ್ಕಲಿ ಸಲೀಂ, ಕೆ.ಪಿ.ಬಾತಿಷ್ ತೆಕ್ಕಾರ್ ಮೊದಲಾದವರು ಕವನ ವಾಚನ ಮಾಡಿದರು. ಅಬ್ದುಲ್ ಜಬ್ಬಾರ್ ಪುಣಚ, ಮುಹಮ್ಮದ್ ಹನೀಫ್ ಆಲಂತಡ್ಕ, ಹೋಟೆಲ್ ರಾಯಲ್ ಮ್ಯಾಕ್ಸ್ ಮಾಲಕ ಲತೀಫ್ ಪುಣಚ ಉಪಸ್ಥಿತಿತರಿದ್ದರು. ಎಂ.ಎ.ಮುಸ್ತಫಾ ಬೆಳ್ಳಾರೆ ಸ್ವಾಗತಿಸಿದರು. ಕೆ.ಎ.ಅಬ್ದುಲ್ ಅಝೀಝ್ ಪುಣಚ ಕಾರ್ಯಕ್ರಮ ನಿರೂಪಿಸಿದರು.