ಆಲಂಕಾರು: ವಿಶೇಷಚೇತನರ ಮನೆ ಬಾಗಿಲಿಗೆ ಯುಡಿಐಡಿ ಆಗಸ್ಟ್ ತಿಂಗಳ ಮಾಸಾಚರಣೆಯನ್ನು ಆ.12ರಂದು ಆಲಂಕಾರು ಗ್ರಾ.ಪಂ.ಸಭಾಂಗಣದಲ್ಲಿ ನಡೆದ ಆಲಂಕಾರು ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಆಚರಿಸಲಾಯಿತು.
ಪಂಚಾಯತ್ ಅಭಿವೃದ್ದಿ ಅಧಿಕಾರಿ ಸುಜಾತ ಕೆ.ಅವರು ವಿಶೇಷಚೇತನರು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಕಡ್ಡಾಯವಾಗಿ ಯುಡಿಐಡಿ ಪಡೆದಿರಬೇಕು. ಮಾಸಾಚರಣೆಯ ಮೂಲಕ ವಿಶೇಷ ಚೇತನರಲ್ಲಿ ಅರಿವು ಮೂಡಿಸುವುದು ಉದ್ದೇಶವಾಗಿದೆ ಎಂದರು. ಕಾರ್ಯದರ್ಶಿ ವಸಂತ ಶೆಟ್ಟಿ ರವರು ವಿಶೇಷಚೇತನ ಮಾಶಾಸನ, ವಿದ್ಯಾರ್ಥಿ ವೇತನ, ಸಾಧನ ಸಲಕರಣೆಗಳ ಸೌಲಭ್ಯಗಳಿಗೆ ಯುಡಿಐಡಿ ಕಾರ್ಡ್ ನ ಮಹತ್ವದ ಬಗ್ಗೆ ತಿಳಿಸಿದರು.
ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಮೋನಪ್ಪರವರು ಕೇಂದ್ರ ಸರ್ಕಾರವು 2017ರಲ್ಲಿ ಏಕ ರೂಪದ ವಿಶಿಷ್ಟ ಗುರುತಿನ ಚೀಟಿ ಜಾರಿಗೆ ತಂದಿರುತ್ತದೆ. ಆರೋಗ್ಯ ಇಲಾಖೆಯ ಮೂಲಕ ತಾಲೂಕು ಮತ್ತು ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಪ್ರಮಾಣ ಪತ್ರದ ಶಿಬಿರದಲ್ಲಿ ಯುಡಿಐಡಿ ಮಾಡುವುದೆಂದು ತಿಳಿಸಿದರು. ಸಭೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಸುಶೀಲ, ಉಪಾಧ್ಯಕ್ಷ ರವಿ ಪೂಜಾರಿ, ಸದಸ್ಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಪಂಚಾಯತ್ ಸಿಬ್ಬಂದಿಗಳಾದ ಹೇಮಾವತಿ, ಭವ್ಯ, ಸುಶ್ಮಿತಾ, ವಸಂತ, ಕರಿಯಪ್ಪ, ಗಿರಿಯಪ್ಪ ಉಪಸ್ಥಿತರಿದ್ದರು.