ಪುತ್ತೂರು: 79ನೇ ಸ್ವಾತಂತ್ರ್ಯೋತ್ಸವ ದಿನದ ಅಂಗವಾಗಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ಸುಮಾರು 20 ನಿವೃತ್ತ ಬಿ.ಎಸ್.ಎಫ್ ಯೋಧರನ್ನು ಆಹ್ವಾನಿಸಿ, ಅವರ ಜೊತೆಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ 37 ವರ್ಷಗಳ ಕಾಲ ಬಿ.ಎಸ್.ಎಫ್ ಯೋಧರಾಗಿ ಕಾರ್ಯನಿರ್ವಹಿಸಿ, ಕಮಾಂಡೆಂಟ್ ಹುದ್ದೆಯಲ್ಲಿ ನಿವೃತ್ತರಾದ ಚಂದಪ್ಪ ಮೂಲ್ಯ ಉಪಸ್ಥಿತರಿದ್ದರು. ಬಳಿಕ ಮಾತನಾಡಿದ ಅವರು, ಕೇವಲ ಪುಸ್ತಕ ಪಾಂಡಿತ್ಯ ಉಪಯೋಗಕ್ಕೆ ಬರಲಾರದು. ಧರ್ಮವು ಶಿಕ್ಷಣದ ಬುನಾದಿಯಾಗಿ ಬೆಳೆದಾಗ ಮಾತ್ರ ಸುಸಜ್ಜಿತ, ಸುಸಂಸ್ಕೃತ ಭಾರತವನ್ನು ಕಾಣಲು ಸಾಧ್ಯ. ವಿದ್ಯಾರ್ಜನೆಗೆ ಸಹಕಾರ ನೀಡುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುತ್ತಿರುವ ವಿವೇಕಾನಂದ ವಿದ್ಯಾಸಂಸ್ಥೆ ಸಮಾಜದಲ್ಲಿ ಅತ್ಯುತ್ತಮ ಮಾದರಿ ಎನಿಸಿದೆ. ಇಂದು ನಮ್ಮ ದೇಶದ ಸ್ವಾಭಿಮಾನಕ್ಕೆ ಯಾವುದೇ ರೀತಿಯ ಧಕ್ಕೆ ಬಂದರೆ ಅದನ್ನು ಎದುರಿಸುವ ಧೈರ್ಯ ಈ ನೆಲಕ್ಕಿದ್ದು, ಭಾರತವು ಇಂದು ತನ್ನ ಸ್ವರೂಪವನ್ನು ಬದಲಿಸಿಕೊಂಡು ನವ ಭಾರತವೆನಿಸಿದೆ. ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಮಾತಾ-ಪಿತೃಗಳಿಗೆ, ಕಲಿಸಿಕೊಟ್ಟ ಗುರುಗಳಿಗೆ, ದೇಶ ಕಾಯುವ ಯೋಧರಿಗೆ, ಅನ್ನ ನೀಡುವ ರೈತರಿಗೆ ಸದಾ ಋಣಿಗಳಾಗಿರಬೇಕು ಎಂದು ಈ ಸಂದರ್ಭದಲ್ಲಿ ಕಿವಿಮಾತನ್ನಿತ್ತು, ಬಳಿಕ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇವರು ಪ್ರಸ್ತುತ ಕೇಂದ್ರೀಯ ಸಶಸ್ತ್ರ ಪಡೆ ನಿವೃತ್ತ ಯೋಧರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ರಾಜ್ಯದ ರಾಜ್ಯಾಧ್ಯಕ್ಷರಾಗಿರುತ್ತಾರೆ.
ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರಾದ ಡಾ. ಕೃಷ್ಣಪ್ರಸನ್ನ ಕೆ ಉಪಸ್ಥಿತರಿದ್ದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬ ಪ್ರಜೆಯಲ್ಲಿಯೂ ಸ್ವದೇಶ, ಸ್ವಧರ್ಮದ ಬಗ್ಗೆ ಪೀತಿ-ಗೌರವಗಳಿರಬೇಕು ಎನ್ನುತ್ತಾ, ವಿದ್ಯಾರ್ಥಿಗಳಿಗೆ ಭಾರತ ಸೈನ್ಯದ ಶಿಸ್ತು, ದೇಶಕ್ಕಾಗಿ ಅವರು ಮಾಡುವ ತ್ಯಾಗದ ವಿವರಣೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸುಮಾರು 20 ನಿವೃತ್ತ ಬಿ.ಎಸ್.ಎಫ್ ಯೋಧರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಬಳಿಕ ಗಡಿಯಲ್ಲಿ ಬಿ.ಎಸ್.ಎಫ್ ಯೋಧರು ನಿರ್ವಹಿಸುವ ಕಾರ್ಯವೈಖರಿಯ ಕುರಿತಾಗಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜು ಹಾಗೂ ವಿವೇಕಾನಂದ ಮಹಾ ವಿದ್ಯಾಲಯದ ಎನ್.ಸಿ.ಸಿ ವಿದ್ಯಾರ್ಥಿಗಳು, ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಪಾಲ್ಗೊಂಡರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ ಎಂ ಸ್ವಾಗತಿಸಿದರು. ರಸಾಯನಶಾಸ್ತ್ರ ವಿಭಾಗದಉಪನ್ಯಾಸಕಿದಯಾಮಣಿ ಟಿಕೆ ಕಾರ್ಯಕ್ರಮದಲ್ಲಿ ನಿರೂಪಿಸಿ, ವಂದಿಸಿದರು.