ಪುತ್ತೂರು: ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಇಲ್ಲಿನ ವಿವೇಕಾನಂದ ಶಿಶು ಮಂದಿರದ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದಲ್ಲಿ ಆ.16ರಂದು ನಡೆದ 27ನೇ ವರ್ಷದ ‘ಶ್ರೀಕೃಷ್ಣಲೋಕ’ ಕಾರ್ಯಕ್ರಮವು ಶ್ರೀಕೃಷ್ಣನ ಬಾಲಲೀಲೆಗಳನ್ನು ನೆನಪಿಸಿತು.
ಪರ್ಲಡ್ಕ ಶಿವಪೇಟೆಯಲ್ಲಿರುವ ಶಿಶು ಮಂದಿರದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳಿಂದ ಪ್ರಾರ್ಥನೆ ನಡೆದು, ಕೃಷ್ಣ ರಾಧೆಯರ ನೊಂದಾವಣೆಯು ಪ್ರಾರಂಭಗೊಂಡಿತು. ವಿದ್ಯಾರ್ಥಿಗಳಿಂದ ಭಜನೆ ಬಳಿಕ ತೊಟ್ಟಲ ಸಂಭ್ರಮದ ಮಗುವಿನ ಅಮ್ಮನಿಗೆ ಆರತಿ ಬೆಳಗಿ ಬಾಗಿನ ಅರ್ಪಿಸಲಾಯಿತು. ಆರು ತಿಂಗಳ ಮಗು ಶ್ರೇಷ್ಠಾನ್ ನನ್ನು ತೊಟ್ಟಿಲಲ್ಲಿ ಮಲಗಿಸಿ, ಬೆಣ್ಣೆ ತಿನ್ನಿಸಿ, ಮಾತೃ ಮಂಡಳಿಯ ಸದಸ್ಯರು, ಮಾತೆಯರು ಬಾಲಕೃಷ್ಣನ ತೊಟ್ಟಿಲ ತೂಗಿ, ಜೋಗುಳ ಹಾಡಿ ಸಂಭ್ರಮಿಸಿದರು.

ನಂತರ ನಡೆದ ಶ್ರೀಕೃಷ್ಣ-ರಾಧೆಯರ ಶೋಭಾಯಾತ್ರೆಗೆ ಮಾಜಿ ಶಾಸಕ ಸಂಜೀವ ಮಠಂದೂರು ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್ ಧ್ವಜ ಹಸ್ತಾಂತರಿಸಿದರು. ಶಿವಪೇಟೆಯ ಶಿಶು ಮಂದಿರದ ಆವರಣದಿಂದ ಹೊರಟ ಮೆರವಣಿಗೆಯು ಎಂ.ಟಿ ರಸ್ತೆಯಾಗಿ ಮುಖ್ಯ ರಸ್ತೆಯ ಮೂಲಕ ಪ್ರಧಾನ ಅಂಚೆ ಕಚೇರಿಯ ಬಳಿಯಿಂದಾಗಿ ಸಾಗಿ ಮಹಾಲಿಂಗೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ ಸಮಾಪನಗೊಂಡಿತು.
ಕೃಷ್ಣ ರಾಧೆಯ ವೇಷ ಧರಿಸಿದ ಸಾವಿರಾರು ಪುಟಾಣಿಗಳ ವೈಭವದ ಮೆರವಣಿಗೆಯಲ್ಲಿ ಮಕ್ಕಳ ಪೋಷಕರು ಜತೆಯಾಗಿ ಸಾಗಿದರು. ಶ್ರೀಕೃಷ್ಣ ಹಾಗೂ ರಾಧೆಯ ವೇಷ ಭೂಷಣದೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿ ಮಗುವಿನಲ್ಲಿಯೂ ಕೃಷ್ಣನನ್ನು ಕಾಣುವ ಖುಷಿ ಪೋಷಕರದ್ದು ಆಗಿತ್ತು. ಕೆಲವು ಮಕ್ಕಳು ಕೊಳಲು ಹಿಡಿದು ಕುಣಿದು ಸಂಭ್ರಮಿಸಿದರೆ ಇನ್ನು ಕೆಲವು ಮಕ್ಕಳ ಆಟ, ತುಂಟಾಟವು ನೋಡುಗರ ಗಮನ ಸೆಳೆಯಿತು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ನರೇಂದ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಕುಣಿತ ಭಜನೆ, ಬ್ಯಾಂಡ್, ವಾಲಗ ಮೆರವಣಿಗೆಯಲ್ಲಿ ಮೇಳೈಸಿತು. ಮೆರವಣಿಗೆಯಲ್ಲಿ ಸಾಗುತ್ತಿದ್ದ ಪುಟಾಣಿಗಳಿಗೆ ಅಲ್ಲಲ್ಲಿ ಪುಷ್ಪಾರ್ಚಣೆ ನಡೆಯಿತು. ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಸಹಕರಿಸಿದ್ದರು. ಬಳಿಕ ಸಭಾ ಕಾರ್ಯಕ್ರಮ ನೆರವೇರಿತು.