ನೆಲ್ಯಾಡಿ: ನಿವೃತ್ತ ತಹಶೀಲ್ದಾರ್, ಬಜತ್ತೂರು ಗ್ರಾಮದ ಡೆಂಬಳೆ ನಿವಾಸಿ ಕೃಷ್ಣಪ್ಪ ಪೂಜಾರಿ(79ವ.)ರವರು ಆ.18ರಂದು ಬೆಳಿಗ್ಗೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕೃಷ್ಣಪ್ಪ ಪೂಜಾರಿಯವರು 15 ದಿನದ ಹಿಂದೆ ಅಸ್ವಸ್ಥರಾಗಿದ್ದು ಚಿಕಿತ್ಸೆಗಾಗಿ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆಯಲ್ಲಿದ್ದವರು ಹೃದಯಾಘಾತಕ್ಕೆ ಒಳಗಾಗಿ ನಿಧನರಾದರು ಎಂದು ವರದಿಯಾಗಿದೆ.
ಮೂಲತ: ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಬೆದ್ರಾಡಿ ನಿವಾಸಿಯಾಗಿದ್ದ ಕೃಷ್ಣಪ್ಪ ಪೂಜಾರಿಯವರು ಕಂದಾಯ ಇಲಾಖೆಯಲ್ಲಿ 33 ವರ್ಷ ಸೇವೆ ಸಲ್ಲಿಸಿ, ನಿವೃತ್ತಿಯ ಬಳಿಕ ಡೆಂಬಳೆಯ ಪತ್ನಿ ಮನೆಯಲ್ಲಿ ವಾಸವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಜೊಯಿಡಾ ಸಹಿತ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದ ಕೃಷ್ಣಪ್ಪ ಪೂಜಾರಿಯವರು ಕೊನೆಗೆ ಬಂಟ್ವಾಳ ತಾಲೂಕು ಕಚೇರಿಯಲ್ಲಿ ನಾಲ್ಕು ವರ್ಷ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಪತ್ನಿ ಯೋಗೀಶ್ವರಿ, ಪುತ್ರ ಚಂದ್ರಶೇಖರ, ಪುತ್ರಿ ರಶ್ಮಿ ಕೆ.ಅವರನ್ನು ಅಗಲಿದ್ದಾರೆ.