ಕಡಬ: ನೂಜಿಬಾಳ್ತಿಲ ಭಾರತೀಯ ಜೈನ್ ಮಿಲನ್ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ನಿರಂತರ ಅಪಪ್ರಚಾರ ನಡೆಸುತ್ತಿರುವುದಕ್ಕೆ ಖಂಡನಾ ಸಭೆ ಇಚ್ಲಂಪಾಡಿ ಭಗವಾನ್ ಶ್ರೀ ಅನಂತನಾಥ ಸ್ವಾಮಿ ಬಸದಿಯಲ್ಲಿ ನಡೆಯಿತು.
ಜೈನ್ ಮಿಲನ್‌ನ ಮುಖಂಡ ಮಹಾವೀರ ಜೈನ್ ಡೆಪ್ಪುಣಿ ಗುತ್ತು ಮಾತನಾಡಿ, ಅಹಿಂಸಾ ಪ್ರಿಯರಾದ ಜೈನಧರ್ಮದ ಬಗ್ಗೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರ ಬಗ್ಗೆ ಅವಹೇಳನಕಾರಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇಚ್ಲಂಪಾಡಿ ಬಸದಿ ಆಡಳಿತ ಸಮಿತಿ ಅಧ್ಯಕ್ಷ ಶುಭಕರ ಹೆಗ್ಗಡೆ ಹಾಗೂ ಜೈನ್ ಮಿಲನ್ ಅಧ್ಯಕ್ಷೆ ಹೇಮಾವತಿ ಅವರ ನೇತೃತ್ವದ ಸಭೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಜೈನ ಧರ್ಮದ ಬಗ್ಗೆ ಯಾವುದೇ ಸಾಕ್ಷಾಧಾರಗಳಿಲ್ಲದೆ ಕೀಳು ಮಟ್ಟದ ಅಪಾದನೆ, ನಿಂದನೆಗಳನ್ನು ಮಾಡುತ್ತಿರುವುದನ್ನು ಸಾಮೂಹಿಕವಾಗಿ ಖಂಡಿಸಲಾಯಿತು. ಯಶೋಧರ ಯಾನೆ ತಮ್ಮಯ್ಯ ಬಲ್ಲಾಳ ರೆಂಜಿಲಾಡಿ ಮತ್ತಿತರರ ಉಪಸ್ಥಿತರಿದ್ದರು. ದೀಪಿಕಾ ರವೀಂದ್ರ ಆರಿಗ ಸ್ವಾಗತಿಸಿದರು. ಕೆ ಮಹಾವೀರ ಜೈನ್ ವಂದಿಸಿದರು. ಸುಮಿತ್ರಾದೇವಿ ಯಶೋಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಇಚ್ಲಂಪಾಡಿ ಮಾಗಡಿಯ ಎಲ್ಲಾ ಶ್ರಾವಕ-ಶ್ರಾವಕಿಯರು ಸೇರಿ ಸಾಮೂಹಿಕ ಪಂಚ ನಮಸ್ಕಾರ ಪಠಣ ಮಾಡಿದರು.