ಕಲಿಯುವುದಕ್ಕೆ ವಯಸ್ಸು ಮುಖ್ಯವಲ್ಲ ಆತ್ಮ ವಿಶ್ವಾಸ ಮುಖ್ಯ, ಪ್ರಗತಿ ನನ್ನ ಪಾಲಿನ ದೇವಸ್ಥಾನ :-ಜಯಂತಿ
ನಮ್ಮಲ್ಲಿ ಹಣವಿದ್ದರೇ ಯಾರಾದರೂ ಕದಿಯಬಹುದು, ಆದರೆ ವಿದ್ಯೆಯನ್ನು ಯಾರಿಗೂ ಕದಿಯಲಾಗದು: ಆಶಾ ಬೆಳ್ಳಾರೆ
ಮಕ್ಕಳ ಫಲಿತಾಂಶ ಹಾಗೂ ಅವರ ಶಿಸ್ತು ಇದುವೇ ನಮಗೆ ಅವರು ಕೊಡುವ ಗೌರವ”:- ಗೋಕುಲ್ನಾಥ್ ಪಿ.ವಿ.
ಪ್ರಗತಿ ಎಂದರೆ ಒಂದು ವಿಶ್ವವಿದ್ಯಾನಿಲಯದಂತೆ ಇಲ್ಲಿ ಎಲ್ಲಾ ಜಿಲ್ಲೆಯ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ.”:- ನಾರಾಯಣ ರೈ ಕುಕ್ಕುವಳ್ಳಿ
ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ನಲ್ಲಿ 19ನೇ ವರ್ಷದ ಸ್ಥಾಪಕರ ದಿನಾಚರಣೆಯನ್ನು ಆ.18ರಂದು ಆಚರಿಸಲಾಯಿತು. ಪ್ರಗತಿ ಸಂಸ್ಥೆಯ ಹುಟ್ಟು 18 ಆ.2008ರಂದು ಆರಂಭಗೊಂಡಿದ್ದು, ತದನಂತರ ತನ್ನ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಟ್ಟುಕೊಂಡು ಹಲವಾರು ಸವಾಲುಗಳನ್ನು ಎದುರಿಸುತ್ತ ಇದೀಗ 19ನೇ ವರ್ಷದ ಸಂಭ್ರಮದಲ್ಲಿದೆ.
ಈ ಸಂಸ್ಥೆಯು ಶ್ರೀಯುತ ಗೋಕುಲ್ನಾಥ್ ಪಿ.ವಿ. ಹಾಗೂ ಹೇಮಲತಾ ಗೋಕುಲ್ನಾಥ್ ಅವರ ಕನಸಿನ ಕೂಸು ಈ ಪ್ರಗತಿ ಸಂಸ್ಥೆ. ಈ ಸಂಸ್ಥೆಯ ಅಭಿವೃದ್ಧಿಗೆ ಹಗಲಿರುಳು ದುಡಿಯುವ ಜೊತೆಗೆ ಎಲ್ಲಾ ಉಪನ್ಯಾಸಕರಿಗೆ ಸ್ಫೂರ್ತಿಯನ್ನು ತುಂಬಿ, ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸ ಬರವಸೆಯನ್ನು ತರುವ ಪ್ರಯತ್ನ ಕಳೆದ 18 ವರ್ಷಗಳಿಂದ ಮಾಡಿಕೊಂಡು ಬಂದಿದೆ. ಕಾರ್ಯಕ್ರಮವನ್ನು ಶ್ರೀಮತಿ ಆಶಾ ಬೆಳ್ಳಾರೆ ಮುಖ್ಯೋಪಾಧ್ಯಾಯರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇವರು ಉದ್ಧಾಟಿಸಿ ಮಾತನಾಡುತ್ತಾ 60 ಶೇಕಾಡಕ್ಕಿಂತ ಹೆಚ್ಚು ಯುವ ಶಕ್ತಿ ಇರುವ ರಾಷ್ಟ್ರ ಭಾರತ. ನಾವು ನಮ್ಮ ಕರ್ಮವನ್ನು ಸರಿಯಾಗಿ ಮಾಡಬೇಕು, ನಮ್ಮಲ್ಲಿ ಹಣ ಇದ್ದರೆ ಯಾರಾದರೂ ಕದಿಯಬಹುದು ಆದರೆ ವಿದ್ಯೆಯನ್ನು ಯಾರಿಗೂ ಕದಿಯಲಾಗದು ಎಂದು ತಿಳಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷರಾದ ನಾರಾಯಣ ರೈ ಕುಕ್ಕುವಳ್ಳಿ ನಿವೃತ್ತ ಶಿಕ್ಷಕರು, ಪ್ರಧಾನ ಸಂಪಾದಕರು, ಅಂಕಣಕಾರರು, ಮಧುಪ್ರಪಂಚ ಇವರು ಮಾತನಾಡುತ್ತಾ ಪ್ರಗತಿ ಎಂದರೆ ವಿಶ್ವವಿದ್ಯಾನಿಲಯ ವಿದ್ದಂತೆ, ಇಲ್ಲಿ ಎಲ್ಲಾ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ನಾವೆಲ್ಲ ಕಲಿಕೆಯಲ್ಲಿ ಹಿಂದುಳಿದವರಲ್ಲ ಎಂಬ ಭಾವದಿಂದ ಕೆಲಸ ಮಾಡುತ್ತಿದ್ದಾರೆ. ಎನ್ನುತ್ತಾ ಮನಸ್ಸಿನ ಒಳಗೂ ಕತ್ತಲು, ಹೊರಗೂ ಕತ್ತಲು ಜ್ಞಾನ ವಿಜ್ಞಾನ ಬೆಳೆಸಿದಾಗ ಒಳಗೂ ಬೆಳಕು ಹೊರಗೂ ಬೆಳಕು ಎನ್ನುತ್ತಾ ಸಂಸ್ಥೆಗೆ ಶುಭ ಹಾರೈಸಿದರು.

ಸಾಧನೆಗೆ ವಯಸ್ಸಿನ ಮಿತಿಯಿಲ್ಲ ಎಂಬ ಮಾತಿನಂತೆ ದ್ವಿತೀಯ ಪಿ.ಯು.ಸಿ. ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣಗೊಂಡ ಹಿರಿಯ ವಿದ್ಯಾರ್ಥಿನಿ ಜಯಂತಿ ಯವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಇವರು ಮಾತನಾಡುತ್ತಾ ಕಲಿಕೆಗೆ ವಯಸ್ಸು ಮುಖ್ಯವಲ್ಲ ಆತ್ಮ ವಿಶ್ವಾಸ ಮುಖ್ಯ. ಪ್ರಗತಿ ಸಂಸ್ಥೆ ನನ್ನ ಪಾಲಿಗೆ ದೇವಾಲಯವಿದ್ದಂತೆ ಎಂದು ತನ್ನ ಮನದಾಳದ ಮಾತುಗಳನ್ನು ತಿಳಿಸಿದರು. ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಗೋಕುಲ್ನಾಥ್ ಪಿ.ವಿ. ಇವರು ಮಾತನಾಡುತ್ತ ಪ್ರಗತಿಯು ನಡೆದು ಬಂದ ಹಾದಿಯ ಜೊತೆಗೆ ಮಕ್ಕಳ ಫಲಿತಾಂಶ ಹಾಗೂ ಅವರಲ್ಲಿ ಅಡಗಿರುವ ಶಿಸ್ತು ಇದುವೇ ನಮಗೆ ಮಕ್ಕಳಿಂದ ಸಿಗುವ ಗೌರವ. ನಾವು ಮಾಡುವ ಧರ್ಮವೇ ನಮ್ಮನ್ನು ಕಾಪಾಡುತ್ತದೆ ಎಂದು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಹೇಮಲತಾ ಗೋಕುಲ್ನಾಥ್ ಇವರು ಮಾತನಾಡುತ್ತಾ ಪ್ರಗತಿ ಸಂಸ್ಥೆ ನನಗೆ ಎರಡನೇ ಮಗಳು ಇದ್ದಂತೆ, ಪ್ರಗತಿಯಲ್ಲಿ ಕಾಲಿಟ್ಟವರೆಲ್ಲರು ಜೀವನದಲ್ಲಿ ಪ್ರಗತಿಯನ್ನು ಕಾಣಬೇಕೆಂದು ನಾವು ಈ ಸಂಸ್ಥೆಗೆ ಪ್ರಗತಿ ಎಂಬ ಹೆಸರನ್ನು ಇಟ್ಟಿರುತ್ತೇವೆ ಎಂದು ತಮ್ಮ ಪರಿಶ್ರಮದ ಹಿಂದೆ ಸಹಕರಿಸಿ ಮಹನಿಯರನ್ನು ಸ್ಮರಿಸಿದರು.
ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಪ್ರಮೀಳಾ ಎನ್ ಡಿ.ಇವರು ಮಾತನಾಡುತ್ತಾ 19ನೇ ವರ್ಷಕ್ಕೆ ಪಾದಾರ್ಪಣೆ ಗೈದಿರುವ ಸಂಸ್ಥೆಗೆ ಶುಭ ಹಾರೈಸಿದರು. ಮಧ್ಯಾಹ್ನದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ತದನಂತರ ಶಾಲಾ ಸರಕಾರದ ಅಧಿವೇಶನ ನಾರಾಯಣ ರೈ ಕುಕ್ಕುವಳ್ಳಿ ಇವರ ಅಧ್ಯಕ್ಷತೆಯಲ್ಲಿ ಮೂಡಿಬಂತು. ಆಡಳಿತ ಪಕ್ಷ ನಾಯಕ ಹಾಗೂ ಮಂತ್ರಿಮಂಡಲದ ಸಚಿವರು ತಮ್ಮ ಯೋಜನೆಗಳ ಕುರಿತು ಮಾಹಿತಿ ನೀಡಿದರು. ವಿರೋಧ ಪಕ್ಷದವರು ಆಡಳಿತ ಪಕ್ಷದ ನಡುವೆ ಸದನದಲ್ಲಿ ಮಾತಿನ ಚರ್ಚೆ ಬಿರುಸಾಗಿ ಕಂಡು ಬಂದಿತ್ತು. ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದ, ಉಪನ್ಯಾಸಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕು. ಕೀರ್ತನಾ, ಕು. ಜನನಿ ಪ್ರಾರ್ಥಿಸಿದರು. ವಿದ್ಯಾರ್ಥಿ ಧನುಷ್ ಸ್ವಾಗತಿಸಿದರು. ಕು. ಫಾತಿಮತ್ ನಿಶ್ಮಾ ವಂದಿಸಿದರು. ಕು. ಸಾನಿಧ್ಯ ಮಾರನಹಳ್ಳಿ ಕಾರ್ಯಕ್ರಮ ನಿರೂಪಿಸಿದರು.