ನೆಲ್ಯಾಡಿ: ಆಟೋ ರಿಕ್ಷಾ ಚಾಲಕ-ಮಾಲಕರ ಸಂಘ ನೆಲ್ಯಾಡಿ ಇದರ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸಂಘದ ಬೆಳ್ಳಿ ಹಬ್ಬ ಆಚರಣೆ ಆ.15ರಂದು ನೆಲ್ಯಾಡಿ ಪೇಟೆಯಲ್ಲಿ ನಡೆಯಿತು.
ನೆಲ್ಯಾಡಿ ಹೊರಠಾಣೆ ಹೆಡ್ಕಾನ್ಸ್ಟೇಬಲ್ ಪ್ರವೀಣ್ ಕೆ.ಎಲ್. ಧ್ವಜಾರೋಹಣ ನೆರವೇರಿಸಿದರು. ಸಂಘದ ಅಧ್ಯಕ್ಷ ರವಿಪ್ರಸಾದ್ ಗುತ್ತಿನಮನೆ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಅತಿಥಿಯಾಗಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಮಾತನಾಡಿ, ಸಂಘವು ಜನರ ಬೇಡಿಕೆಗಳಿಗೆ ಉತ್ತಮ ಸ್ಪಂದನೆ ನೀಡಿ, ಸಮಾಜಮುಖಿ ಕಾರ್ಯಗಳಲ್ಲಿ ಸದಾ ಮುಂದಿರುತ್ತದೆ ಎಂದರು. ಇನ್ನೋರ್ವ ಅತಿಥಿ ಕೌಕ್ರಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಎಂ.ಕೆ. ಇಬ್ರಾಹಿಂ ಪ್ರತಿ ವರ್ಷ ಸ್ವಾತಂತ್ರ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿರುವ ರಿಕ್ಷಾ ಚಾಲಕ-ಮಾಲಕರ ಸಂಘ, ಈಗ ಬೆಳ್ಳಿ ಹಬ್ಬವನ್ನು ಪೂರೈಸಿರುವುದು ಹೆಮ್ಮೆಯ ಸಂಗತಿ. ಗ್ರಾಹಕರಿಗೆ ಸದಾ ಉತ್ತಮ ಸೇವೆ ನೀಡುತ್ತಾ, ತುರ್ತು ಸಂದರ್ಭಗಳಲ್ಲಿ ಸಹಾಯ ಮಾಡುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.
ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಉದಯ ಕುಮಾರ್ ಗೌಡ, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ನೆಲ್ಯಾಡಿ ನೋಟರಿ ವಕೀಲ ಇಸ್ಮಾಯಿಲ್ ಎನ್, ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ಸತೀಶ್ ಕೆ.ಎಸ್, ಮಾಜಿ ಸೈನಿಕ ಮ್ಯಾಥ್ಯು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಸನ್ಮಾನ:
40 ವರ್ಷ ದೇಶಸೇವೆಯಲ್ಲಿ ತೊಡಗಿಸಿಕೊಂಡಿದ್ದ ಮಾಜಿ ಸೈನಿಕ ಮ್ಯಾಥ್ಯು ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಹಾಗೂ ರಿಕ್ಷಾ ಚಾಲಕ-ಮಾಲಕರು ಭಾಗವಹಿಸಿದ್ದರು. ಕಾರ್ಯದರ್ಶಿ ತೀರ್ಥೇಶ್ ಉರ್ಮಾನ್ ವಂದಿಸಿದರು.