ವರ್ಣಕುಟೀರದಲ್ಲಿ ಮಕ್ಕಳ ’ಮಂತ್ರಾಧೀನ’ ಪ್ರದರ್ಶನ
ಪುತ್ತೂರು: ಸದಾ ಹೊಸತನಗಳನ್ನೇ ಹುಡುಕುತ್ತಿರುವ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಪ್ರವೀಣ್ ವರ್ಣಕುಟೀರ ಅವರು ಸಂಸ್ಥೆಯ ಬೆಳ್ಳಿ ಹಬ್ಬದ ಸಲುವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಈ ಬಾರಿ ಮಕ್ಕಳ ಮೂಲಕ ರೇಖಾಚಿತ್ರದೊಳಗೆ ಮಂತ್ರಗಳ ಸಾಲುಗಳನ್ನು ಮೂಡಿಸಿದ್ದಾರೆ. ಕಲಾ ಶಿಕ್ಷಣದ ವಿದ್ಯಾರ್ಥಿಗಳು ಶ್ರೀ ಗಣೇಶನಿಗೆ ಸಂಬಂಧಿಸಿದ ಹಲವು ರೇಖಾಚಿತ್ರಗಳಲ್ಲಿ ಗಣಪತಿಗೆ ಸಂಬಂಧಿಸಿ ಮಂತ್ರಗಳು, ಕಥೆಗಳ ಸಾಲುಗಳನ್ನು ಪೋಣಿಸಿದ್ದು, ಅದರ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮ ಆ.24ರಂದು ಕಲ್ಲಾರೆ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯಲ್ಲಿ ನಡೆಯಿತು.

ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ನ ಕೋಶಾಧಿಕಾರಿ ಡಾ| ಹರ್ಷಕುಮಾರ್ ರೈ ಅವರು ಮಂತ್ರಾದೀನ ರೇಖಾಚಿತ್ರದ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ಪ್ರತಿಭೆಗೆ ಪೂರಕವಾಗಿ ಕಲಾಶಿಕ್ಷಣ ಅಗತ್ಯ. ಅದರಲ್ಲೂ ಮಕ್ಕಳ ಪ್ರತಿಭೆಯನ್ನು ಹೊರ ತರುವ ಪ್ರವೀಣ್ ಅವರ ಕಲಾಸೇವೆಗೆ ಅಭಿನಂದನೆ ಸಲ್ಲಿಸಿದರು. ಶಿಕ್ಷಣ ಸಂಸ್ಥೆಯ ಪೋಷಕ ಪ್ರಮುಖರಾಗಿರುವ ಗೀತಾಲಕ್ಷ್ಮೀ ಶ್ರೀ ಗಣೇಶನ ಮಂತ್ರ ಗೀತೆಯನ್ನು ಹಾಡಿದರು. ಇದೇ ಸಂದರ್ಭ ರೇಖಾ ಚಿತ್ರವನ್ನು ಬಿಡಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಸಂಸ್ಥೆಯ ಸಂಚಾಲಕ ಪ್ರವೀಣ್ ವರ್ಣಕುಟೀರ ಅವರು ಅತಿಥಿಗಳನ್ನು ಗೌರವಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಮಕ್ಕಳಿಂದ ಮೂಡಿದ ಚಿತ್ರಗಳಿಗೆ ಶಕ್ತಿ ಇದೆ
ಮಕ್ಕಳು ಶಾಲಾ ಚಟುವಟಿಕೆಯ ಪುಸ್ತಕ ಹೊರತು ಪಡಿಸಿ ಇತರ ಧಾರ್ಮಿಕ ಪುಸ್ತಕಗಳನ್ನು ಓದುವಲ್ಲಿ ಹಿಂದಿದ್ದಾರೆ. ಈ ನಿಟ್ಟಿನಲ್ಲಿ ಪೌರಾಣಿಕ ವಿಚಾರಗಳು ಮಕ್ಕಳಿಗೆ ತಿಳಿಸುವ ನಿಟ್ಟಿನಲ್ಲಿ ದೇವರ ಮಂತ್ರಸ್ತೋತ್ರಗಳನ್ನು ಮಕ್ಕಳು ತಿಳಿದು ಕೊಳ್ಳಬೇಕೆಂದು ರೇಖಾಚಿತ್ರದೊಳಗೆ ಮಂತ್ರಗಳನ್ನು ಪೋಣಿಸಿದ್ದೇವೆ. ಮಂತ್ರದ ಶಕ್ತಿ ಅದ್ಭುತ. ಹಾಗಾಗಿ ಮಕ್ಕಳಿಗೆ ಆರಂಭದಲ್ಲಿ ದೇವರನ್ನು ಆರಾಧಿಸುವ ಮಂತ್ರಗಳ ಪುಸ್ತಕ ನೀಡಿದೆವು. ಅವರಿಗೆ ಅದರ ವ್ಯಾಲ್ಯೂ ಅರಿವಾಗಿ ಗಣಪತಿ ಹೋಮ, ಏಕದಂತ ವಿಚಾರವಾಗಿ ಹಲವು ವಿಚಾರಗಳನ್ನು ಅಧ್ಯಯನ ಮಾಡಿ ರೇಖಾಚಿತ್ರದೊಳಗೆ ಸುಂದರವಾಗಿ ಮಂತ್ರಗಳನ್ನು ಪೋಣಿಸಿದ್ದಾರೆ. ಹಾಗಾಗಿ ಮಕ್ಕಳ ಚಿತ್ರಗಳನ್ನು ಖರೀದಿಸಿ. ಆಗ ಅವರು ಆ ಹಣದಲ್ಲಿ ಇನ್ನಷ್ಟು ಚಿತ್ರಗಳನ್ನು ಹೊರ ತರುವ ಪ್ರಯತ್ನ ಮಾಡುತ್ತಾರೆ. ಮುಂದೆ ಸಂಸ್ಥೆಯ 25 ವರ್ಷದ ಸಂಭ್ರಮ ವಿಶೇಷ ರೀತಿಯಲ್ಲಿ ಮಾಡಲಿದ್ದೇವೆ.
ಪ್ರವೀಣ್ ವರ್ಣಕುಟೀರ